Mysuru : ಕಟ್ಟೆಪುರ ನಾಲಾ ಸೂಪರ್‌ ಪ್ಯಾಸೆಜ್‌ ಕುಸಿತ

 ನಿರ್ವಹಣೆ ಕೊರತೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟೆಪುರ ನಾಲಾ ಸೂಪರ್‌ ಪ್ಯಾಸೆಜ್‌ ಚಪ್ಪಡಿಗಳು ಹಾಗೂ ಸೈಡ್‌ವಾಲ್‌ ಕುಸಿದು ಬೀಳುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಿದೆ.

Kattepura Canal super passage collapsed snr

 ಎಸ್‌.ಆರ್‌. ಪ್ರಕಾಶ್‌

  ಸಾಲಿಗ್ರಾಮ (ನ . 29) : ನಿರ್ವಹಣೆ ಕೊರತೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟೆಪುರ ನಾಲಾ ಸೂಪರ್‌ ಪ್ಯಾಸೆಜ್‌ ಚಪ್ಪಡಿಗಳು ಹಾಗೂ ಸೈಡ್‌ವಾಲ್‌ ಕುಸಿದು ಬೀಳುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಿದೆ.

ಸಾಲಿಗ್ರಾಮ ತಾಲೂಕಿನ ಚಿಕ್ಕ ಹನಸೋಗೆ ಗೇಟ್‌ ಬಳಿ ಇರುವ ಕಟ್ಟೆಪುರ ನಾಲೆಯ 35ನೇ ಕಿ.ಮೀ ಸಾವಿರಾರು ಎಕರೆ ಪ್ರದೇಶದ ರೈತರಿಗೆ (Farmers)  ಅನುಕೂಲವಾಗುವಂತೆ ಹಾಗೂ ಹಲವು ಕೆರೆಗಳಿಂದ (Lake)  ಹರಿದು ಬರುವ ಕೊಡಿ ನೀರು ಈ ಸೂಪರ್‌ ಪ್ಯಾಸೆಜ್‌ ಮತ್ತು ಗೇಟ್‌ವಾಲ್‌ಗಳ ಮೂಲಕ ಕಾಲುವೆ ಸೇರಿ ಗದ್ದೆಗಳಿಗೆ ನೀರು ಹರಿಯಲೆಂದೇ ನಿರ್ಮಿಸಲಾಗಿದೆ.

ಜತೆಗೆ ಈ ಕಟ್ಟಡ ಶತಮಾನದಿಂದ ರೈತರ ಬೆಳೆಗಳಿಗೆ ನೀರು ಪೂರೈಸುತ್ತಿದ್ದರೂ ಸಂಬಂಧಿಸಿದ ಇಲಾಖೆ ಸಕಾಲದಲ್ಲಿ ನಿರ್ವಹಣೆ ಕೊರತೆಯಿಂದಾಗಿ ಸದ್ಯ ದಿನೇ ದಿನೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಕುಸಿಯಲಾರಂಭಿಸುತ್ತಿರುವ ಕಟ್ಟಡಕ್ಕೆ ತುರ್ತು ಅಭಿವೃದ್ಧಿಯ ಕಾಯಕಲ್ಪಕ್ಕೆ ಎದುರು ನೋಡುತ್ತಿದೆ.

4500 ಎಕರೆ ಪ್ರದೇಶಕ್ಕೆ ನೀರು:

ಇನ್ನು ಈ ಕಟ್ಟೆಪುರ ನಾಲಾ ನೀರನ್ನೇ ಅವಲಂಭಿಸಿರುವ ಬಂಡಹಳ್ಳಿ, ಚಿಕ್ಕ ಹನಸೋಗೆ, ಕೋಳೂರು, ಕಗ್ಗಳ, ಹಾಡ್ಯ, ದಮ್ಮನಹಳ್ಳಿ, ಸಕ್ಕರೆ, ಮಾಯಿಗೌಡನಹಳ್ಳಿ, ಹೊಸೂರು, ಹಳೆಯೂರು, ದೊಡ್ಡಕೊಪ್ಪಲು, ಶ್ರೀರಾಮಪುರ, ಕೆಸ್ತೂರು, ಕೆಸ್ತೂರು ಕೊಪ್ಪಲು ಇನ್ನಿತರ ಗ್ರಾಮಗಳ ಸುಮಾರು 4500ಕ್ಕೂ ಹೆಚ್ಚು ಎಕರೆ ಪ್ರದೇಶಗಳ ಬೆಳೆಗಳಿಗೆ ನೂರಾರು ವರ್ಷಗಳಿಂದ ನೀರು ಉಣಿಸುತ್ತಿದ್ದು ಅನ್ನದಾತ ರೈತರ ಬದುಕಿನ ಜೀವನಾಡಿಯಾಗಿದೆ.

ಶತಮಾನ ಕಳೆದಿರುವ ಈ ಸೂಪರ್‌ಮೆಂಟ್‌ ಪ್ಯಾಸೆಜ್‌ ಕಲ್ಲು ಕಂಬಗಳ ಮೇಲೆ ಚಪ್ಪಡಿಗಳನ್ನು ಜೋಡಿಸಲಾಗಿದೆ. ಇನ್ನು ಗೋಡೆಗಳು ಇಟ್ಟಿಗೆಯಿಂದ ನಿರ್ಮಾಣವಾಗಿದ್ದು, ನಿರ್ವಹಣೆ ಇಲ್ಲದೆ ಮೇಲಿನ ಚಪ್ಪಡಿಗಳು ಕುಸಿದಿವೆ. ಬುಡದಲ್ಲಿರುವ ಕೆಲ ಕಲ್ಲುಕಂಬಗಳು ಕೂಡ ನೆಲಕಚ್ಚಿದ್ದರೆ ಸೈಡ್‌ವಾಲ್‌ಗಳು ಶಿಥಿಲಗೊಂಡಿದ್ದು, ಇಂದೋ, ನಾಳೆಯೋ ಬೀಳುವ ಹಂತಕ್ಕೆ ತಲುತ್ತಿದೆ.

ರೈತರು ಆತಂಕ:

ಇತ್ತೀಚಿನ ದಿನಗಳಲ್ಲಿ ಮಳೆಯ ನೀರಿನ ಪ್ರವಾಹಕ್ಕೆ ಗಟ್ಟಿಮುಟ್ಟದ ಕಾಲುವೆಗಳ ಕಟ್ಟಡಗಳು ಕುಸಿದು ಬೆಳೆಗಳು ನಾಶವಾಗಿರುವ ಘಟನೆಗಳು ನಡೆದಿವೆ. ಇನ್ನು ನಾಲೆಯಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡ ಹಳೆಯದಾಗಿದ್ದು ಪ್ಯಾಸೆಜ್‌ ಮೇಲೆ ಗರಿಷ್ಟಮಟ್ಟದಲ್ಲಿ ಕೆರೆ ಕೊಡಿ ನೀರು ಹರಿದರೆ. ಪ್ಯಾಸೆಜ್‌ ಒಳ ಭಾಗದಲ್ಲಿ ಕಾಲುವೆ ನೀರು ಹರಿಯುವುದು. ಈ ಪ್ಯಾಸೆಜ್‌ನ ಮೇಲೆ ಮತ್ತು ಕೆಳ ಭಾಗದಲ್ಲಿ ಹರಿಯುವ ನೀರಿನ ಒತ್ತಡಕ್ಕೆ ಒಡೆದು ಹೋದರೆ ಅಲ್ಲಿಂದ ಕೊನೆಯ ಭಾಗದಲ್ಲಿನ ರೈತರಿಗೆ ಸಂಪೂರ್ಣ ಬೆಳೆಗಳಿಗೆ ನೀರಿಲ್ಲದ ಸಮಸ್ಯೆಯಾದರೆ ಇನ್ನೊಂದೆಡೆ ಕೆರೆಯ ಕೊಡಿ ನೀರು ಕಾಲುವೆಯಲ್ಲಿ ಹರಿಯದೆ ಏಕಾಏಕಿ ಅಲ್ಲಿನ ಗದ್ದೆಗಳಿಗೆ ನೀರು ನುಗ್ಗಿ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆದಿರುವ ಬೆಳೆಗಳು ನಾಶವಾಗುವ ಭೀತಿಯ ಆತಂಕದಲ್ಲಿ ರೈತರು ಬೆಳೆ ಬೆಳೆಯುವ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಈಗಾಗಲೇ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳ ತಂಡ ಖುದ್ದು ಸೂಪರ್‌ ಪ್ಯಾಸೆಜ್‌ಗೆ ಭೇಟಿ ನೀಡಿ ಅದರ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿದರು. ಸಂಪೂರ್ಣ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಆದರೆ ಈವರೆಗೆ ಸರಿ ಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ.

ಸೂಪರ್‌ ಪ್ಯಾಸೆಜ್‌ ಚಪ್ಪಡಿಗಳು ಹಾಗೂ ಸೈಡ್‌ ವಾಲ್‌ಗಳು ಕುಸಿದು ಬೀಳುತ್ತಿದ್ದು ತುರ್ತಾಗಿ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಿದೆ. ಇದರೊಂದಿಗೆ 36ನೇ ಕಿ.ಮೀ ಕಟ್ಟೆಪುರ ಕಾಲುವೆಯ ಹತ್ತಿರ ರೈತರು ಮತ್ತು ಜಾನುವಾರುಗಳು ಜಮೀನುಗಳಿಗೆ ಓಡಾಡಲು ತೊಂದರೆಯಾಗಿದೆ. ಅಡ್ಡಲಾಗಿ ಸೂಪರ್‌ ಪ್ಯಾಸೆಜ್‌ ಹತ್ತಿರ ಸೇತುವೆ ಜತೆಗೆ ಏರಿ ರಸ್ತೆ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಮಾಡಬೇಕಿದೆ.

- ರವೀಂದ್ರ, ರೈತ ಮುಖಂಡ, ಚಿಕ್ಕಹನಸೋಗೆ.

ಈಗಾಗಲೇ ಕಟ್ಟೆಪುರ ಸಾಲೆಯ 35ನೇ ಕಿ.ಮೀ ಹತ್ತಿರ ಬರುವ ಸೂಪರ್‌ ಪ್ಯಾಸೆಜ್‌ ಕಟ್ಟಡ ಶಿಥಿಲದ ಬಗ್ಗೆ ಮೇಲಾಧಿಕಾರಿಗಳು ವೀಕ್ಷಿಸಿದ್ದು, ಕಾಮಗಾರಿ ಸಂಬಂಧ ಅಂದಾಜು ಪಟ್ಟಿತಯಾರಿಸಿ ಅನುಮೋದನೆ ಸಲ್ಲಿಸಲಾಗಿದೆ. ಅನುಮೋದನೆ ನಂತರ ಕಾಮಗಾರಿ ನಡೆಸಿ ಕೊನೆಯ ಹಂತದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಕೊಳ್ಳಲಾಗುವುದು.

-ಬಿ.ಜೆ. ಗುರುರಾಜ, ಎಇಇ, ನೀರಾವರಿ ಇಲಾಖೆ.

Latest Videos
Follow Us:
Download App:
  • android
  • ios