ವಸಂತಕುಮಾರ್‌ ಕತಗಾಲ

ಕಾರವಾರ [ಫೆ.28]:  ‘ಆ 20 ದಿನಗಳು ನಿಜಕ್ಕೂ ಯಾತನಾಮಯವಾಗಿದ್ದವು. ಹಡಗಿನಲ್ಲಿ ಏನು ನಡೆಯುತ್ತಿದೆ, ಏನಾಗುತ್ತಿದೆ ಎಂಬುದೇ ತಿಳಿಯುತ್ತಿರಲಿಲ್ಲ. ಕ್ಷಣ ಕ್ಷಣವೂ ಆತಂಕದಿಂದ ಕಳೆದಿದ್ದೇವೆ. ಹೊರ ಜಗತ್ತಿನ ಜೊತೆ ಇರಲಿ, ಹಡಗಿನಲ್ಲಿದ್ದವರ ಜೊತೆಯೇ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಎಲ್ಲರನ್ನೂ, ಎಲ್ಲವನ್ನೂ ಪ್ರತ್ಯೇಕವಾಗಿಡಲಾಗಿತ್ತು. ಇದೀಗ ಒಂದರ್ಥದಲ್ಲಿ ಪುನರ್ಜನ್ಮ ಸಿಕ್ಕ ಹಾಗೆ.’

- ಜಪಾನ್‌ ಹೊರವಲಯದ ಯೋಕೋಹಾಮಾ ಬಳಿ ಕೊರೋನಾ ಭೀತಿಯಿಂದ ತಡೆ ಹಿಡಿಯಲ್ಪಟ್ಟಡೈಮಂಡ್‌ ಪ್ರಿನ್ಸೆಸ್‌ ಹಡಗಿನಲ್ಲಿದ್ದ ಕಾರವಾರದ ಅಭಿಷೇಕ ಮಗರ್‌ ಹೇಳಿದ ಮಾತಿದು. ಆ ಹಡಗಿನಲ್ಲಿ ಕಳೆದ 20 ದಿನಗಳ ಆತಂಕದ ಕ್ಷಣಗಳನ್ನು ಗುರುವಾರ ಭಾರತಕ್ಕೆ ಕಾಲಿಟ್ಟಮೇಲೆ ಹಡಗಿನ ರೆಸ್ಟೋರೆಂಟ್‌ ಉದ್ಯೋಗಿಯಾಗಿರುವ ಕಾರವಾರದ ಅಭಿಷೇಕ್‌ ಮಗರ್‌ ಕನ್ನಡಪ್ರಭದೊಂದಿಗೆ ಹಂಚಿಕೊಂಡಿದ್ದಾರೆ.

ಡೈಮಂಡ್‌ ಪ್ರಿನ್ಸೆಸ್‌ ಹಡಗು ಹಾಂಕಾಂಗ್‌ನಿಂದ ಸುಮಾರು 3 ಸಾವಿರ ಪ್ರಯಾಣಿಕರನ್ನು ಜಪಾನ್‌ಗೆ ಕರೆದೊಯ್ಯುತ್ತಿತ್ತು. ಆ ಸಂದರ್ಭದಲ್ಲೇ ಹಡಗಿನ ಪ್ರಯಾಣಿಕರಿಗೆ ಮಾರಕ ಕೊರೋನಾ ವೈರಸ್‌ (ಕೋವಿಡ್‌ 19) ಸೋಂಕು ತಗಲುತ್ತಿದ್ದಂತೆ ಹಡಗನ್ನು ಯೋಕೋಹಾಮಾ ಬಳಿ ಸಮುದ್ರದಲ್ಲೇ ತಡೆಹಿಡಿಯಲಾಯಿತು.

ಕೊರೋನಾ ಸೋಂಕಿನ ಭಯದ ನಡುವೆ ನನ್ನ ಹೆತ್ತ ಅಮ್ಮ ಅಪ್ಪನನ್ನು ಯಾವಾಗ ನೋಡುವೆ? ತಾಯ್ನಾಡು ಭಾರತದ ನೆಲದ ಮೇಲೆ ಕಾಲಿಡುವುದು ಯಾವಾಗ ಎನ್ನುವ ಆತಂಕ ಸದಾ ಎದುರಾಗಿತ್ತು. ಆ 20 ದಿನ ತೀವ್ರ ಯಾತನಾಮಯವಾಗಿದ್ದಷ್ಟೇ ಅಲ್ಲ, ಆತಂಕವೂ ಇತ್ತು. ಪದೇ ಪದೇ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿತ್ತು. ನನಗೆ ಕೊರೋನಾ ಸೊಂಕು ಇಲ್ಲ ಎಂದು ದೃಢಪಡುತ್ತಿದ್ದಂತೆಯೇ ಸಮಾಧಾನ ಉಂಟಾಯಿತು ಎನ್ನುತ್ತಾರೆ ಅಭಿಷೇಕ್‌.

ಇರಾನ್‌ ಆರೋಗ್ಯ ಸಚಿವರಿಗೇ ಕೊರೋನಾ ವೈರಸ್!...

ನನ್ನ ತಾಯ್ನಾಡು ಭಾರತಕ್ಕೆ ಯಾವಾಗ ಕಾಲಿಡಲಿದ್ದೇನೆ ಎನ್ನುವುದೂ ತಿಳಿಯದಂತಾಗಿತ್ತು. ತಂದೆ ತಾಯಿ ಸಹ ತೀವ್ರ ಆತಂಕಗೊಂಡಿದ್ದರು. ಇದ್ದ ಒಬ್ಬನೇ ಮಗನಿಗೆ ಮಾರಕ ಕೊರೋನಾ ವೈರಸ್‌ ತಗುಲಿದರೆ ಹೇಗೆಂಬ ಚಿಂತೆ ಅವರನ್ನು ಕಾಡುತ್ತಿತ್ತು ಎಂದು ಅಭಿಷೇಕ್‌ ಹೇಳುತ್ತಾರೆ.

ಹಡಗಿನಲ್ಲಿದ್ದ 2000ದಷ್ಟುಪ್ರಯಾಣಿಕರು ಭೀತಿಯಿಂದ ನಡುಗುತ್ತಿದ್ದರು. ದಿನದಿಂದ ದಿನಕ್ಕೆ ಸೋಂಕಿಗೊಳಗಾಗುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿತ್ತು. ಪಾಸಿಟಿವ್‌ ಬಂದವರನ್ನು ನಿತ್ಯ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. 600ಕ್ಕೂ ಹೆಚ್ಚು ಜನರು ಕೊರೋನಾದಿಂದ ಬಳಲಿದ್ದರು.

ಹಡಗಿನ ಬಹುತೇಕ 60 ವರ್ಷಕ್ಕಿಂತ ಮೆಲ್ಪಟ್ಟವರು ಕೊರೋನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದರು. ಅವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದುದು ಜತೆಗೆ ಮಧುಮೇಹ, ಅಧಿಕ ರಕ್ತದೊತ್ತದ ಮತ್ತಿತರ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದವರ ಮೇಲೆ ‘ಕೋವಿಡ್‌ 19’ ದಾಳಿ ನಡೆಸಿತ್ತು.

ಹಡಗಿನ ವಿವಿಧ ವಿಭಾಗಗಳಲ್ಲಿದ್ದ ಸಿಬ್ಬಂದಿಯನ್ನು ಪ್ರಯಾಣಿಕರಿಂದ ಪ್ರತ್ಯೇಕವಾಗಿ ಇಡಲಾಗಿತ್ತು. ತಾವಿದ್ದ ರೆಸ್ಟೋರೆಂಟ್‌ ವಿಭಾಗದ ಉದ್ಯೋಗಿಗಳನ್ನು ಕೂಡ ಪ್ರತ್ಯೇಕವಾಗಿ ಇರಿಸಲಾಗಿತ್ತು. ನಿರಂತರವಾಗಿ ಮಾಸ್ಕ್‌, ಗ್ಲೌಸ್‌ಗಳನ್ನು ತೊಟ್ಟುಕೊಂಡೇ ಇರಬೇಕಾಗಿತ್ತು. ಹಡಗಿನಲ್ಲಿ ಇರುವ ಪ್ರಯಾಣಿಕರಿಗೂ ಹಾಗೂ ಮತ್ತು ಹಡಗಿನ ಇತರ ಸಿಬ್ಬಂದಿ ನಡುವೆ ಸಂಪರ್ಕವೇ ಇರಲಿಲ್ಲ.

40 ವೈದ್ಯರಿದ್ದರು: ಜಪಾನ್‌ನ 40 ತಜ್ಞ ವೈದ್ಯರು ಹಡಗಿನಲ್ಲಿ ಬೀಡುಬಿಟ್ಟು ತಪಾಸಣೆ ಕೈಗೊಂಡಿದ್ದರು. ನಿರಂತರ ಚಿಕಿತ್ಸೆ ನೀಡುತ್ತಿದ್ದರು. ದಿನಕ್ಕೆ 3 ಬಾರಿ ಫ್ಯಾರನ್‌ಹೀಟ್‌ ಚೆಕ್‌ ಮಾಡುತ್ತಿದ್ದರು. 37.5ಕ್ಕಿಂತ ಹೆಚ್ಚು ಫ್ಯಾರನ್‌ ಹೀಟ್‌ ಇದ್ದರೆ ತಕ್ಷಣ ವೈದ್ಯಕೀಯ ಉಪಚಾರ ಆರಂಭವಾಗುತ್ತಿತ್ತು. ಜತೆಗೆ ಎಲ್ಲರ ಸಲೈವಾ ಚೆಕ್‌ ಮಾಡಿದರು. ನನ್ನದು ನೆಗೆಟಿವ್‌ ಬಂದಿತ್ತು. ನನಗೆ ಕೊರೋನಾ ವೈರಸ್‌ ಸೋಂಕು ತಗುಲಿಲ್ಲ ಎಂದು ಖಚಿತವಾಗುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರುಬಿಟ್ಟೆಎಂದು ಹೇಳುತ್ತಾರೆ.

ಆಹಾರ ಹೊರಗಿನಿಂದ ಬರುತ್ತಿತ್ತು. ರೆಸ್ಟೋರೆಂಟ್‌ ಬಂದ್‌ ಮಾಡಲಾಗಿತ್ತು. ಹಡಗಿನ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಸಂಪರ್ಕ ಬಹುತೇಕ ಕಡಿತಗೊಂಡಿತ್ತು. ವೈರಸ್‌ ಹರಡಬಾರದು ಎಂದು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.

ಹಾಂಕಾಂಗ್‌ನಿಂದ ಫೆ.7ರಂದು ಹಡಗು ಜಪಾನ್‌ನತ್ತ ಹೊರಟಿತ್ತು. ಇದಕ್ಕೂ ಮುನ್ನ ತೈವಾನ್‌ನಿಂದ ಹಾಂಕಾಂಗ್‌ಗೆ ಹಡಗು ಬಂದಿತ್ತು. ಅಲ್ಲೇ ಒಬ್ಬರಿಗೆ ಶಂಕಿತ ಕೊರೋನಾ ಇರುವುದು ಪತ್ತೆಯಾಗಿತ್ತು. ನಂತರ ಒಬ್ಬರಿಂದ ಒಬ್ಬರಿಗೆ ಹರಡುತ್ತ ಬಂತು.

ನನಗೆ ಸೋಂಕಿಲ್ಲ

ನಾನೀಗ ಹರಾರ‍ಯಣದ ಮನೇಸರ್‌ ಆರ್ಮಿ ಕ್ಯಾಂಪ್‌ನಲ್ಲಿದ್ದೇನೆ. ಇನ್ನು 14 ದಿನ ಬಳಿಕ ಕಾರವಾರಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ. ನನಗೆ ಕೊರೋನಾ ಇಲ್ಲ ಎಂದು ಖಚಿತಪಟ್ಟಿದೆ. ಕಾರವಾರದ ಜನತೆ ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ವಿನಂತಿಸುತ್ತೇನೆ.

- ಅಭಿಷೇಕ್‌ ಮಗರ್‌, ಹಡಗಿನ ಉದ್ಯೋಗಿ