ಟೆಹ್ರಾನ್‌[ಫೆ.26]: ಕೊರೋನಾ ನಿಯಂತ್ರಣದ ಮುಂದಾಳತ್ವ ವಹಿಸಿದ್ದ ಇರಾನ್‌ ಆರೋಗ್ಯ ಇಲಾಖೆಯ ಉಪ ಸಚಿವರೇ ಈ ವ್ಯಾಧಿಗೆ ತುತ್ತಾಗಿದ್ದಾರೆ ಎಂಬ ವಿಚಾರ ಆತಂಕಕ್ಕೆ ಕಾರಣವಾಗಿದೆ. ದೇಶದ ಜನತೆಯಲ್ಲಿ ಹಬ್ಬಿ ರಾಷ್ಟಾ್ರದ್ಯಂತ ನಡುಕ ಹುಟ್ಟಿಸಿರುವ ಕೊರೋನಾ ವೈರಸ್‌ ವಿರುದ್ಧದ ಹೋರಾಟದ ಮುಂದಾಳತ್ವ ವಹಿಸಿದ್ದ ಆರೋಗ್ಯ ಇಲಾಖೆಯ ಉಪ ಸಚಿವ ಹರಿರ್ಚಿ ಅವರಲ್ಲೇ ಇದೀಗ ಮಾರಣಾಂತಿಕ ರೋಗ ಪತ್ತೆಯಾಗಿದೆ’ ಎಂದು ಇರಾನ್‌ ಆರೋಗ್ಯ ಸಚಿವರ ಮಾಧ್ಯಮ ಸಲಹೆಗಾರ ಟ್ವೀಟ್‌ ಮಾಡಿದ್ದಾರೆ.

ದ. ಕೊರಿಯಾದಲ್ಲಿ 1000 ಜನಕ್ಕೆ ಕೊರೋನಾ ವೈರಸ್‌

ದಕ್ಷಿಣ ಕೊರಿಯಾದಲ್ಲಿ ಮಾರಣಾಂತಿಕ ಕೊರೋನಾ ಪ್ರಕರಣಗಳ ಸಂಖ್ಯೆ 1,000 ತಲುಪಿದ್ದು, ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಅಧ್ಯಕ್ಷ ಮೂನ್‌ ಜೇ- ಇನ್‌ ತಿಳಿಸಿದ್ದಾರೆ. ಸೋಮವಾರ ಒಂದೇ ದಿನ 144 ಜನರಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿರುವುದು ಖಚಿತಪಟ್ಟಿದ್ದು, ಈ ವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಚೀನಾದ ಹೊರಗೆ ಅತಿ ಹೆಚ್ಚು ಕೊರೋನಾ ವೈರಸ್‌ ಪೀಡಿತರು ಇರುವ ದೇಶ ಎನಿಸಿಕೊಂಡಿದೆ. 25 ಲಕ್ಷ ಜನರು ಇರುವ ದಕ್ಷಿಣ ಕೊರಿಯಾದ ನಾಲ್ಕನೇ ಅತಿ ದೊಡ್ಡ ನಗರವಾದ ಡೇಗುವಿನಲ್ಲಿ ಶೇ.80ರಷ್ಟುಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ತಡೆಯಲು ದಕ್ಷಿಣ ಕೊರಿಯಾದಲ್ಲಿ ಸಂಗೀತ ಕಾರ್ಯಕ್ರಮ, ಕೆ.ಲೀಗ್‌ ಫುಟ್ಬಾಲ್‌ ಸೇರಿದಂತೆ ಸಾರ್ವಜನಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಜಪಾನ್‌ ಹಡಗಿನಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ವಿಶೇಷ ವಿಮಾನ

ಜಪಾನ್‌ನ ಡೈಮಂಡ್‌ ಪ್ರಿನ್ಸೆಸ್‌ ಹಡಗಿನಲ್ಲಿರುವ ಕನ್ನಡಿಗ ಅಭಿಷೇಕ್‌ ಸೇರಿದಂತೆ ಭಾರತೀಯರ ರಕ್ಷಣೆಗಾಗಿ ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇಲ್ಲಿನ ಭಾರತೀಯ ರಾಯಭಾರಿ ತಿಳಿಸಿದ್ದಾರೆ. ಫೆ.3ರಿಂದ ಜಪಾನ್‌ನ ಯೋಕೋಹಾಮಾದಲ್ಲಿ ಬೀಡು ಬಿಟ್ಟಿರುವ ಈ ಹಡಗಿನಲ್ಲಿರುವ ಒಟ್ಟು 138 ಮಂದಿ ಪೈಕಿ 14 ಮಂದಿ ಕೊರೋನಾಕ್ಕೆ ತುತ್ತಾಗಿದ್ದಾರೆ. ಇದುವರೆಗೂ ಈ ಮಾರಣಾಂತಿಕ ವೈರಸ್‌ ಪೀಡಿತರಾಗದೆ ಇರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಸಲುವಾಗಿ ಭಾರತ ಸರ್ಕಾರ ಇದೀಗ ವಿಮಾನ ವ್ಯವಸ್ಥೆ ಮಾಡುತ್ತಿದೆ. ಏತನ್ಮಧ್ಯೆ, ಕೊರೋನಾಕ್ಕೆ ತುತ್ತಾಗಿರುವವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಶೀಘ್ರವೇ ಗುಣಮುಖರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.