ಸೈಕಲ್ ರಿಪೇರಿ ಮಾಡಿ ಕುಟುಂಬ ನಿರ್ವಹಿಸುತ್ತಿರುವ ಛಲಗಾತಿ
ಉತ್ತರ ಕನ್ನಡ ಜಿಲ್ಲೆಯ ಈ ಮಹಿಳಾ ಛಲಗಾತಿ ಕಳೆದ 12 ವರ್ಷಗಳಿಂದ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಸೈಕಲ್ ರಿಪೇರಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಕಾರವಾರ [ಮಾ.08]: ಸೈಕಲ್ ಅಂಗಡಿ ನಡೆಸುತ್ತಿದ್ದ ಪತಿಗೆ ಅನಾರೋಗ್ಯ ಕಾಡಿ ದಾಗ ಧೃತಿಗೆಡದೆ ಕಳೆದ 12 ವರ್ಷಗಳಿಂದ ತಾವೇ ಸೈಕಲ್ ರಿಪೇರಿ ಮಾಡುತ್ತ ಕುಟುಂಬವನ್ನು ನಿರ್ವಹಿಸುತ್ತಿರುವ ವೇದಾ ನಾಯ್ಕ ಮಾದರಿಯಾಗಿದ್ದಾರೆ.
ತಾಲೂಕಿನ ಅರಗಾದಲ್ಲಿ ಇರುವ ಸೈಕಲ್ ಅಂಗಡಿಯಲ್ಲಿ ವೇದಾ ನಾಯ್ಕ ದಿನವಿಡಿ ದುಡಿಯುತ್ತಾರೆ. ಮನೆಗೆಲಸವನ್ನೂ ಮಾಡುತ್ತಾರೆ. ಜತೆಗೆ ಮಗಳಿಗೆ ಪದವಿ ಓದಿಸುತ್ತಿದ್ದಾರೆ. ಪಂಕ್ಚರ್ ತೆಗೆಯುವುದಿರಲಿ, ಗಾಳಿ ಹಾಕುವುದು, ಏನೇ ಹಾಳಾಗಲಿ ಸರಿಪಡಿಸುತ್ತಾರೆ. ನಗರಕ್ಕೆ ಬಂದು ಬಿಡಿಭಾಗಗಳನ್ನು ಹೊತ್ತು ತರುತ್ತಾರೆ.
ಈಚಿನ ದಿನಗಳಲ್ಲಿ ಸೈಕಲ್ ಬಳಕೆ ಕಡಿಮೆಯಾಗುತ್ತಿದೆ. ಆದರೆ, ವೇದಾ ನಾಯ್ಕ ಅವರಿಗೆ ಕೊರತೆಯಾಗಿಲ್ಲ. ಪಕ್ಕದಲ್ಲೇ ಐಎನ್‌ಎಸ್ ಕದಂಬ ನೌಕಾನೆಲೆ ಇದೆ. ನೌಕಾನೆಲೆ ಉದ್ಯೋಗಿಗಳ ಮಕ್ಕಳು ಹಾಗೂ ನೌಕಾನೆಲೆ ಸಿಬ್ಬಂದಿ ದೇಹದಂಡಿಸಲು ಬಳಸುವ ಸೈಕಲ್‌ಗಳು ರಿಪೇರಿಗಾಗಿ ಇಲ್ಲಿಗೇ ಬರುತ್ತವೆ. ಜತೆಗೆ ಸರ್ಕಾರ ಶಾಲಾ ಮಕ್ಕಳಿಗೆ ವಿತರಿಸಿದ ಸೈಕಲ್ ಕೂಡ ರಿಪೇರಿಗಾಗಿ ವೇದಾ ಅವರನ್ನು ಹುಡುಕಿಕೊಂಡು ಬರುತ್ತವೆ. ಹೀಗಾಗಿ ದಿನವಿಡಿ ದುಡಿದರೂ ಕೆಲಸಕ್ಕೆ ಕೊರತೆಯಾಗದು.
ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು : ಲಾಭದ ನಿರೀಕ್ಷೆಯಲ್ಲಿದ್ದವರಿಗೆ ಶಾಕ್..
ಆರಂಭದಲ್ಲಿ ಪತಿ ವೈಕುಂಠ ನಾಯ್ಕ ಅವರೇ ಸೈಕಲ್ ರಿಪೇರಿ ಮಾಡುತ್ತಿದ್ದರು. ನಂತರ ಅವರಿಗೆ ದೃಷ್ಟಿದೋಷ ಉಂಟಾಗಿದ್ದರಿಂದ ಅಂಗಡಿಯ ಉಸ್ತುವಾರಿಯನ್ನು ವೇದಾ ನಾಯ್ಕ ವಹಿಸಿಕೊಂಡರು. ಹತ್ತಾರು ಸೈಕಲ್‌ಗಳ ಬಿಡಿಭಾಗಗಳನ್ನು ಸೇರಿಸಿ ಇವರೇ ಸೈಕಲ್ ಒಂದನ್ನು ರೂಪಿಸುತ್ತಾರೆ. ಬಳಕೆ ಮಾಡಿದ ಸೈಕಲ್ ಗಳ ಮಾರಾಟವನ್ನೂ ಮಾಡುತ್ತಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಸೈಕಲ್ ರಿಪೇರಿ ಮಾಡುವ ಅಂಗಡಿ ಇವರ ದ್ದೊಂದೆ ಇರುವುದರಿಂದ ವೇದಾ ನಾಯ್ಕ ಬಿಡುವಿಲ್ಲದೆ ದುಡಿಯುತ್ತಾರೆ.
ಇವರ ಸೈಕಲ್ ದುರಸ್ತಿಯನ್ನು ಸ್ಥಳೀಯರು ಪ್ರಶಂಸಿಸುತ್ತಾರೆ. ಅತ್ಯುತ್ತಮವಾಗಿ ರಿಪೇರಿ ಮಾಡುತ್ತಾರೆ. ಜತೆಗೆ ಕಡಿಮೆ ಬೆಲೆಯಲ್ಲೂ ಮಾಡಿಕೊಡುತ್ತಾರೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಡುತ್ತಾರೆ. ಸೈಕಲ್ ರಿಪೇರಿ ಮಾಡುತ್ತ ಇಡಿ ಕುಟುಂಬದ ಜವಾಬ್ದಾರಿಯನ್ನು ಇವರು ಹೊತ್ತಿದ್ದಾರೆ.