ಫೋಟೋಗ್ರಾಫರ್ಸ್ ಅಸೋಸಿಯೇಷನ್ ಇನ್ನು ಮುಂದೆ ಮದುವೆ ದಿಬ್ಬಣದ (ಬಾರಾತ್) ಚಿತ್ರೀಕರಣ ಮಾಡದಿರಲು ನಿರ್ಧರಿಸಿದೆ. ತಡರಾತ್ರಿ, ಭದ್ರತಾ ಸಮಸ್ಯೆಗಳು ಮತ್ತು ಅನುಚಿತ ವರ್ತನೆಯ ಕಾರಣಗಳಿಂದ ಈ ತೀರ್ಮಾನ ಕೈಗೊಂಡಿದ್ದು, ಕೇವಲ ಮದುವೆ ಹಾಲ್‌ನಲ್ಲಿ ಮಾತ್ರ ಚಿತ್ರೀಕರಣ ನಡೆಸುವುದಾಗಿ ಸ್ಪಷ್ಟಪಡಿಸಿದೆ.

ಕಾರವಾರ: ಮದುವೆ ಸಮಾರಂಭಗಳಲ್ಲಿ ಮದುಮಗನ ಮನೆಗೆ ಸಾಗುವ ದಿಬ್ಬಣದ (ಬಾರಾತ್) ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ಇನ್ನು ಮುಂದೆ ಮಾಡದಿರಲು ಕಾರವಾರ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿರ್ಧಾರ ಕೈಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಸದಸ್ಯರು ಮಾತನಾಡಿ, ಛಾಯಾಗ್ರಾಹಕರು ಎದುರಿಸುತ್ತಿರುವ ಭದ್ರತಾ ಸಮಸ್ಯೆಗಳು ಹಾಗೂ ಸಮಯದ ಅಭಾವದ ಕುರಿತು ತಮ್ಮ ಅಳಲು ತೋಡಿಕೊಂಡರು.

ಯಾಕೆ ಈ ನಿರ್ಧಾರ?

ಕಾರವಾರ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಂತಾನ್ ಫರ್ನಾಂಡೀಸ್, ಈಚಿನ ದಿನಗಳಲ್ಲಿ ಮದುವೆ ದಿಬ್ಬಣ ಕಾರ್ಯಕ್ರಮಗಳು ತಡರಾತ್ರಿ ವರೆಗೂ ಮುಂದುವರಿಯುತ್ತಿವೆ. ಇದರಿಂದಾಗಿ ಫೋಟೋಗ್ರಾಫರ್‌ಗಳು ಯಾವುದೇ ಸಮಯದ ಮಿತಿಯಿಲ್ಲದೆ, ವಿಶ್ರಾಂತಿ ಇಲ್ಲದೆ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಲ್ಲದೆ, ತಡರಾತ್ರಿಯ ದಿಬ್ಬಣಗಳಲ್ಲಿ ಕೆಲವೆಡೆ ಫೋಟೋಗ್ರಾಫರ್‌ಗಳು ಹಾಗೂ ವಿಡಿಯೋಗ್ರಾಫರ್‌ಗಳೊಂದಿಗೆ ಕೆಲವರು ಅತ್ಯಂತ ಅನುಚಿತವಾಗಿ ವರ್ತಿಸಿದ ಘಟನೆಗಳು ನಡೆದಿವೆ. ಕೆಲವು ಸಂದರ್ಭಗಳಲ್ಲಿ ಲಕ್ಷಾಂತರ ರು. ಬೆಲೆಬಾಳುವ ಕ್ಯಾಮೆರಾಗಳನ್ನು ಕಸಿದುಕೊಳ್ಳುವ ಹಾಗೂ ಹಾನಿ ಮಾಡುವ ಯತ್ನಗಳು ನಡೆದಿವೆ ಎಂದು ಅಸೋಸಿಯೇಷನ್ ಸದಸ್ಯರು ತೀವ್ರ ಆತಂಕ ವ್ಯಕ್ತಪಡಿಸಿದರು‌.

ಇನ್ನು ಮುಂದೆ ಕೇವಲ ಮದುವೆ ಹಾಲ್‌ನಲ್ಲಿ ಮಾತ್ರ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ನಡೆಸಲಾಗುವುದು. ತಡರಾತ್ರಿ ನಡೆಯುವ ಮದುಮಗನ ದಿಬ್ಬಣ ಕಾರ್ಯಕ್ರಮಗಳಿಗೆ ಚಿತ್ರೀಕರಣಕ್ಕೆ ತೆರಳದಿರಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಫೋಟೋಗ್ರಫಿ ಸೇವೆಗಳ ದರ ಏರಿಕೆ

ಫೋಟೋಗ್ರಫಿ ಸೇವೆಗಳ ದರ ಏರಿಕೆ ಮಾಡುತ್ತಿರುವ ಕುರಿತು ಮಾಹಿತಿ ನೀಡಿದ ಸಂಘದ ಮುಖಂಡರು, ಪಾಸ್‌ಪೋರ್ಟ್ ಸೈಜ್ ಫೋಟೋ ಸೇರಿದಂತೆ ವಿವಿಧ ಫೋಟೋಗ್ರಫಿ ಸೇವೆಗಳ ದರವನ್ನು ಶೀಘ್ರದಲ್ಲೇ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ರವಿ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಅನಂತ ಪೈ, ಕಾರ್ಯದರ್ಶಿ ಜಯಪ್ರಕಾಶ್ ಗೋಸಾವಿ ಹಾಗೂ ಸದಸ್ಯರಾದ ಅನಿಲ್ ನಾಯ್ಕ, ಮನೋಜ ನಾಯ್ಕ, ಪ್ರಮೋದ ನಾಯ್ಕ ಮತ್ತಿತರರು ಇದ್ದರು.