Karwar| ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಕೇಂದ್ರ ಸಚಿವರಿಗೆ ರೂಪಾಲಿ ಮನವಿ
* ಟೋಲ್ ಶುಲ್ಕ ವಿನಾಯಿತಿ, ಫ್ಲೈಓವರ್, ಅಂಡರ್ ಪಾಸ್‌ಗಳಿಗೆ ಮನವಿ
* ಅಂಕೋಲಾ -ಹುಬ್ಬಳ್ಳಿ ಹೆದ್ದಾರಿಯಲ್ಲಿ ಹೆಚ್ಚಿದ ವಾಹನ ದಟ್ಟಣೆ
* ಪ್ರಯಾಣಿಕರು ಹಾಗೂ ಸ್ಥಳೀಯರ ಹಿತರಕ್ಷಣೆಗಾಗಿ ಫ್ಲೈಓವರ್ ನಿರ್ಮಾಣ
ಕಾರವಾರ(ನ.07): ಟೋಲ್ ಶುಲ್ಕ ವಿನಾಯಿತಿ, ಕೆಲವೆಡೆ ಅಂಡರ್ ಪಾಸ್, ಬಸ್ ನಿಲ್ದಾಣಗಳು ಹೀಗೆ ಚತುಷ್ಪಥ ಹೆದ್ದಾರಿಯಲ್ಲಿ(Four Lane Highway) ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ(Roopali Naik) ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಈಚೆಗೆ ಗೋವಾಕ್ಕೆ(Goa) ಆಗಮಿಸಿದ್ದ ಸಚಿವ ಗಡ್ಕರಿ(Nitin Gadkari) ಅವರನ್ನು ಭೇಟಿಯಾದ ಶಾಸಕರು ಕ್ಷೇತ್ರದಲ್ಲಿನ ಹೆದ್ದಾರಿ ಸಮಸ್ಯೆಗಳ ಬಗ್ಗೆ ವಿವರಿಸಿ, ಮನವಿ ನೀಡಿದರು. ತಮ್ಮ ವಿಧಾನಸಭೆ ಕ್ಷೇತ್ರದಲ್ಲಿ ಗೋವಾ ಗಡಿ ಮಾಜಾಳಿಯಿಂದ ಮಾದನಗೇರಿ ತನಕ ಚತುಷ್ಪಥ ಹೆದ್ದಾರಿ ಹಾದು ಹೋಗುತ್ತಿದ್ದು, ಸ್ಥಳೀಯ ಜನತೆ, ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ಅನುಕೂಲಕರ ಸೌಲಭ್ಯ ಕಲ್ಪಿಸಿ, ಸರಾಗ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಶಾಸಕರು, ಸಚಿವರ ಗಮನ ಸೆಳೆದಿದ್ದಾರೆ.
ಹಾಲಕ್ಕಿಗಳ ಪ. ಪಂಗಡಕ್ಕೆ ಸೇರ್ಪಡೆಗೆ ಅಮಿತ್ ಶಾಗೆ ಆಗ್ರಹಿಸಿದ ರೂಪಾಲಿ
ಟೋಲ್ ಶುಲ್ಕ ವಿನಾಯಿತಿ:
ಚತುಷ್ಪಥ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ. ಅಂಡರ್‌ಪಾಸ್‌ಗಳು, ಬಸ್ ನಿಲ್ದಾಣಗಳು, ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಆದರೂ ಹಟ್ಟಿಕೇರಿ ಬಳಿ ವಾಹನ ಸವಾರರಿಂದ ಶುಲ್ಕ ಆಕರಿಸಲಾಗುತ್ತಿದೆ. ಚತುಷ್ಪಥ ಹೆದ್ದಾರಿಯಲ್ಲಿ ವಿವಿಧ ಅಗತ್ಯ ಸೌಲಭ್ಯ ಕಲ್ಪಿಸಿ, ಕಾಮಗಾರಿ ಸಂಪೂರ್ಣ ಮುಕ್ತಾಯಗೊಳ್ಳುವವರೆಗೆ ಟೋಲ್ ಶುಲ್ಕ ಆಕರಣೆಯಿಂದ ವಿನಾಯಿತಿ ನೀಡಬೇಕು ಎಂದು ಶಾಸಕರಾದ ರೂಪಾಲಿ ಎಸ್. ನಾಯ್ಕ ಸಚಿವ ಗಡ್ಕರಿ ಅವರನ್ನು ಆಗ್ರಹಿಸಿದ್ದಾರೆ.
ವಿವಿಧ ಕಾಮಗಾರಿಗೆ ಆಗ್ರಹ:
ತಮ್ಮ ಕ್ಷೇತ್ರದಲ್ಲಿ ಐಆರ್‌ಬಿ ಕಂಪನಿ ಚತುಷ್ಪಥ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ಆದರೆ ಸರಿಯಾದ ಸೌಲಭ್ಯಗಳಿಲ್ಲದೆ ಜನತೆ, ಪ್ರಯಾಣಿಕರು ತೊಂದರೆಗೊಳಗಾಗಿದ್ದಾರೆ. ಹೆದ್ದಾರಿಯುದ್ದಕ್ಕೂ ಇರುವ ಊರುಗಳ ಬಳಿ ಬಸ್ ನಿಲ್ದಾಣ ನಿರ್ಮಿಸಬೇಕು. ಕಾಳಿ ಸೇತುವೆಯಯಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು. ಕೆಲವು ಸೇತುವೆಗಳನ್ನು ಪುನರ್ ನಿರ್ಮಿಸಬೇಕು. ಅಗತ್ಯ ಇರುವಲ್ಲಿ ಫ್ಲೆ ೖಓವರ್ ನಿರ್ಮಿಸಬೇಕು. ಕೆಲವೆಡೆ ಅಂಡರ್‌ಪಾಸ್, ಸರ್ವೀಸ್ ರಸ್ತೆ ನಿರ್ಮಿಸುವಂತೆ ಶಾಸಕರು ಒತ್ತಾಯಿಸಿದರು.
ಮುದಗಾ, ದೇವಬಾಗ, ಹುಲಿದೇವರವಾಡದಲ್ಲಿ ಅಂಡರ್‌ಪಾಸ್ ಬೇಕು:
ಕಾರವಾರದ(Karwar) ಮುದಗಾ ಹಾಗೂ ದೇವಬಾಗ ಹಾಗೂ ಅಂಕೋಲಾದ(Ankola) ಹುಲಿದೇವರವಾಡಗಳಲ್ಲಿ ಅಂಡರಪಾಸ್ ನಿರ್ಮಾಣವಾಗಬೇಕಿದೆ. ಮುದಗಾದಲ್ಲಿ 4 ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ದೇವಬಾಗದಲ್ಲಿ 3 ಸಾವಿರಕ್ಕೂ ಹೆಚ್ಚು ಜನವಸತಿ ಇದೆ. ಹುಲಿದೇವರವಾಡದಲ್ಲಿ 3 ಸಾವಿರಕ್ಕೂ ಹೆಚ್ಚು ಜನರ ವಾಸ ಇದೆ. ಈ ಮೂರೂ ಸ್ಥಳಗಲ್ಲಿ ವಾಹನ ಸಚಾರ, ಜನಸಂದಣಿ ಹೆಚ್ಚಿದೆ. ಅಪಘಾತ ಹೆಚ್ಚಳವನ್ನು ತಪ್ಪಿಸಲು ಶೀಘ್ರದಲ್ಲಿ ಅಂಡರ್‌ಪಾಸ್ ನಿರ್ಮಾಣವಾಗಬೇಕು ಎಂದು ಶಾಸಕರು ಸಚಿವ ಗಡ್ಕರಿ ಅವರಲ್ಲಿ ಮನವಿ ಮಾಡಿದ್ದಾರೆ.
ಶಿವಾಜಿ ಪ್ರತಿಮೆ ಸ್ಥಾಪನೆ:
ಚತುಷ್ಪಥ ಹೆದ್ದಾರಿ ಐತಿಹಾಸಿಕ ತಾಣವಾದ ಸದಾಶಿವಗಡದಲ್ಲಿ ಹಾದುಹೋಗಲಿದೆ. ಈ ಪ್ರದೇಶಕ್ಕೆ ಛತ್ರಪತಿ ಶಿವಾಜಿ ಮಹಾರಾಜರು 1665 ಹಾಗೂ 1673ರಲ್ಲಿ ಭೇಟಿ ನೀಡಿ ದುರ್ಗಾದೇವಿ ದೇವಾಲಯ(Temple) ನವೀಕರಣಕ್ಕೆ ಕಾರಣರಾದರು. ಸೋಂದಾ ಅರಸರು ಆಡಳಿತ ನಡೆಸಿದ ಸದಾಶಿವರಾಯ ಕಟ್ಟಿಸಿದ ಕೋಟೆ ಇಲ್ಲಿದೆ. ಸದಾಶಿವಗಡ ಬಳಿ ಜಂಕ್ಷನ್ ನಿರ್ಮಾಣದ ಯೋಜನೆ ಇದೆ. ಅಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ನಿರ್ಮಿಸಬೇಕೆಂದು ಜನತೆಯ ಪರವಾಗಿ ರೂಪಾಲಿ ನಾಯ್ಕ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಕಾರವಾರ: ಜನರ ನೆರವಿಗೆ ಧಾವಿಸಿದ ಶಾಸಕಿ ರೂಪಾಲಿ ನಾಯ್ಕ್
ವಿವಿಧ ಕಾಮಗಾರಿ ಆಗಲಿ:
ಮಾಜಾಳಿ, ಸದಾಶಿವಗಡ, ಮುದಗಾ, ಚೆಂಡಿಯಾ, ಅಮದಳ್ಳಿ, ಅರಗಾ, ಅವರ್ಸಾ, ಹಟ್ಟಿಕೇರಿ, ಅಲಗೇರಿ, ಅಂಕೋಲಾ, ವಂದಿಗೆ, ಮಾದನಗೇರಿ ಕ್ರಾಸ್‌ಗಳಲ್ಲಿ ವಿವಿಧ ಕಾಮಗಾರಿಗಳು ಆಗಬೇಕಿದೆ.
ಮಾದನಗೇರಿ ಕ್ರಾಸ್ ಮೂಲಕ ಚತುಷ್ಪಥ ಹೆದ್ದಾರಿ ಹಾದುಹೋಗುತ್ತದೆ. ಈ ಕ್ರಾಸ್‌ನಲ್ಲಿ ಪ್ರಸಿದ್ಧ ಯಾತ್ರಾ, ಪ್ರವಾಸಿ ಕೇಂದ್ರವಾದ ಗೋಕರ್ಣ ಹಾಗೂ ಹುಬ್ಬಳ್ಳಿಗೆ (ಹಿಲ್ಲೂರ ಮೂಲಕ) ಸಂಪರ್ಕ ಕಲ್ಪಿಸುವ ರಸ್ತೆ ಸೇರ್ಪಡೆಯಾಗುತ್ತದೆ. ಮಾದನಗೇರಿ ಕ್ರಾಸ್ ಮೂಲಕ ಪ್ರತಿದಿನ 7 ಸಾವಿರದಷ್ಟು ವಾಹನಗಳು(Vehicles) ಸಂಚರಿಸುತ್ತವೆ. ಮಾದನಗೇರಿ ಸುತ್ತಮುತ್ತ 5 ಸಾವಿರದಷ್ಟು ಜನವಸತಿ ಇದೆ. ವಾಹನ ಸವಾರರು, ಪ್ರಯಾಣಿಕರು(passengers) ಹಾಗೂ ಸ್ಥಳೀಯರ ಹಿತರಕ್ಷಣೆಗಾಗಿ ಇಲ್ಲಿ ಫ್ಲೈಓವರ್(Flyover) ನಿರ್ಮಾಣ ಮಾಡಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ.
ಪ್ರಸ್ತುತ ಇರುವ ಅಂಕೋಲಾ -ಹುಬ್ಬಳ್ಳಿ ಹೆದ್ದಾರಿಯಲ್ಲಿ(Ankola-Hubballi) ವಾಹನ ದಟ್ಟಣೆ ಹೆಚ್ಚುತ್ತಿದೆ. ಬೇಲೆಕೇರಿ ಬಂದರು, ಕೊಂಕಣ ರೇಲ್ವೆ ನಿಲ್ದಾಣ, ಮತ್ತಿತರ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಗೆ ಪರ್ಯಾಯ ರಸ್ತೆ ಸಮೀಪದಲ್ಲಿ ಇಲ್ಲ. ಈ ಹೆದ್ದಾರಿಯಲ್ಲಿ ವಾಹನದಟ್ಟಣೆಯಿಂದ ಅಪಘಾತಗಳು ಹೆಚ್ಚುತ್ತಿವೆ. ಸುಗಮ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಈ ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ರೂಪಾಲಿ ನಾಯ್ಕ ಸಚಿವ ಗಡ್ಕರಿ ಅವರಲ್ಲಿ ಮನವಿ ಮಾಡಿದ್ದಾರೆ.