ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಳೆಯ ಪಾದರಕ್ಷೆಗಳನ್ನು ಸಂಗ್ರಹಿಸುವ 'ನಡಿಗೆ' ಅಭಿಯಾನ ನಡೆಯಲಿದೆ. ಸಂಗ್ರಹವಾದ ಪಾದರಕ್ಷೆಗಳನ್ನು ಮುಂಬೈನ ಗ್ರೀನ್ ಸೋಲ್ ಸಂಸ್ಥೆಗೆ ಕಳುಹಿಸಿ, ಮರುಬಳಕೆ ಮೂಲಕ ಹೊಸ ಪಾದರಕ್ಷೆ ತಯಾರಿಸಿ ಬಡಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ. ಇದರಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ಅಶಕ್ತರಿಗೆ ನೆರವಾಗಲಿದೆ.

ಉಡುಪಿ (ಅ.3): ಮನೆಯಲ್ಲಿ ಬಳಸಿದ ಅಥವಾ ಬಳಕೆಯಾಗದ ಉತ್ತಮ ಗುಣಮಟ್ಟದಲ್ಲಿರುವ ಪಾದರಕ್ಷೆಗಳಿಂದ ಹೊಸ ಪಾದರಕ್ಷೆಗಳನ್ನು ತಯಾರಿಸಿ, ಅವುಗಳನ್ನು ಬಡಮಕ್ಕಳಿಗೆ ಉಚಿತವಾಗಿ ನೀಡುವ ‘ನಡಿಗೆ’ ಅಭಿಯಾನವು 23, 24 ಮತ್ತು 25ರಂದು ನಗರದ ಎಂಜಿಎಂ ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕ ಅವಿನಾಶ್ ಕಾಮತ್ ಹೇಳಿದರು

ಉಡುಪಿಯಲ್ಲಿ ಹಳೆಯ ಪಾದರಕ್ಷೆಗಳ ‘ನಡಿಗೆ’ ಅಭಿಯಾನ

ಸಂಗ್ರಹವಾದ ಅಷ್ಟೂ ಪಾದರಕ್ಷೆಗಳನ್ನು ಮುಂಬೈಯ ಗ್ರೀನ್ ಸೋಲ್ ಸಂಸ್ಥೆಗೆ ಕಚ್ಚಾ ವಸ್ತುಗಳ ರೂಪದಲ್ಲಿ ನೀಡಲಾಗುತ್ತದೆ, ಅಲ್ಲಿ ಈ ಪಾದರಕ್ಷೆಗಳ ಉಪಯುಕ್ತ ಭಾಗಗಳನ್ನು ಬೇರ್ಪಡಿಸಿ ಹೊಸ ಪಾದರಕ್ಷೆಗಳನ್ನು ತಯಾರಿಸಿ ದೇಶದಾದ್ಯಂತ ಇರುವ ಅಶಕ್ತರಿಗೆ, ಪಾದರಕ್ಷೆರಹಿತರಿಗೆ ಉಚಿತವಾಗಿ ನೀಡುತ್ತಾರೆ. ಇದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಹಳೆಯ ಪಾದರಕ್ಷೆಗಳು ಪುನರ್‌ಬ‍ಳಕೆಯಾಗಿ ಪರಿಸರ ಮಾಲಿನ್ಯವನ್ನೂ ಕಡಿಮೆಗೊಳಿಸಲು ಸಾಧ್ಯವಾಗುತ್ತದೆ, ಇದನ್ನು ಗ್ರೀನ್ಸೋಲ್ ಸಂಸ್ಥೆ 2016ರಿಂದ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ ಎಂದರು.

ಗ್ರೀನ್ ಸೋಲ್ ಫೌಂಡೇಶನ್ ಸಂಸ್ಥಾಪಕರಾದ ರಮೇಶ್ ಧಾಮಿ ಮತ್ತು ಶ್ರಿಯಾನ್ಸ್ ಭಂಡಾರಿ ಅವರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಕಾಲೇಜುಗಳು, ಮಸೀದಿ, ಚರ್ಚುಗಳ ಆಡಳಿತ ಮಂಡಳಿಗಳು, ರೋಟರಿ - ಲಯನ್ಸ್‌ನಂತಹ ಸಂಸ್ಥೆಗಳೂ ಈ ಅಭಿಯಾನಕ್ಕೆ ಕೈಜೋಡಿಸಿವೆ, ಆದ್ದರಿಂದ ಭಾರೀ ಪ್ರಮಾಣದಲ್ಲಿ ಪಾದರಕ್ಷೆಗಳು ಸಂಗ್ರಹವಾಗುವ ನಿರೀಕ್ಷೆ ಇದೆ ಎಂದರು.

ಪಾದರಕ್ಷೆಗಳು ಜೋಡಿಯಾಗಿರಬೇಕು

2023ರಲ್ಲಿ ಉಡುಪಿಯಲ್ಲಿ ಪ್ರಥಮ ಬಾರಿಗೆ ನಡಿಗೆ ಅಭಿಯಾನವನ್ನು ನಡಿಸಿದ್ದು, 5 ಸಾವಿರ ಜೊತೆ ಪಾದರಕ್ಷೆಗಳ ನಿರೀಕ್ಷೆಯನ್ನೂ ಮೀರಿ ಬರೋಬ್ಬರಿ 18 ಸಾವಿರ ಜೋಡಿ ಪಾದರಕ್ಷೆಗಳನ್ನು ಸಂಗ್ರಹಿಸಲಾಗಿತ್ತು. ಹೀಲ್ಸ್ ಹಾಗೂ 10 ವರ್ಷದವರೆಗಿನ ಮಕ್ಕಳ ಪಾದರಕ್ಷೆಗಳಿಗೆ ಅವಕಾಶವಿರುವುದಿಲ್ಲ ಉಳಿದಂತೆ ಶೂಗಳು, ಸ್ಥಿಪರ್‌ಗಳು, ರಬ್ಬರ್ ಶೂಗಳು. ಚಪ್ಪಲಿಗಳನ್ನು ನೇರವಾಗಿ ಎಂಜಿಎಂ ಕಾಲೇಜಿಗೆ ಆಗಮಿಸಿ ನೀಡಬಹುದಾಗಿದೆ, ಪಾದರಕ್ಷೆಗಳು ಜೋಡಿಯಾಗಿರಬೇಕು, ಸಂಪೂರ್ಣ ಹಾಳಾದ ಪಾದರಕ್ಷೆಗಳು ಬೇಡ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕೋಶಾಧಿಕಾರಿ ಭರತ್ ಶೆಟ್ಟಿ, ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕ ಅಶ್ವತ್ ಎಸ್.ಎಲ್., ಮಣಿಪಾಲದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಉಪಪ್ರಾಂಶುಪಾಲ ಶರತ್ ಎಸ್. ಆತ್ಮ, ಎಂ.ಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಅವರು ಈ ಅಭಿಯಾನಕ್ಕೆ ತಮ್ಮ ಸಂಸ್ಥೆಗಳ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ಅಭಿಯಾನದ ಪೋಸ್ಟರನ್ನು ಬಿಡುಗಡೆಗೊಳಿಸಿದರು