ಒಳ ಮೀಸಲಾತಿಗೆ ಸಂಬಂಧಿಸಿ ವಿಶ್ರಾಂತ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಭೆ ಅವಿರೋಧವಾಗಿ ಒಪ್ಪಿಕೊಂಡಿದೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಬೆಂಗಳೂರು (ಮೇ.10): ಒಳ ಮೀಸಲಾತಿಗೆ ಸಂಬಂಧಿಸಿ ವಿಶ್ರಾಂತ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಭೆ ಅವಿರೋಧವಾಗಿ ಒಪ್ಪಿಕೊಂಡಿದೆ. ಯಾವ ಜಾತಿಗಳಿಗೂ ಇದರಿಂದ ಅನ್ಯಾಯ ಆಗುವುದಿಲ್ಲ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡುವಂತೆ ನ್ಯಾಯಾಲಯ ಹೇಳಿತ್ತು. ಶೇ.56ಕ್ಕಿಂತ ಮೇಲೆ ಹೋಗಬಾರದು ಎಂದು ಸೂಚಿಸಿದ್ದರಿಂದ ನಾವು ಈ ಹಿಂದೆ ಶೇ.56ಕ್ಕೆ 6-6-5 ಅನುಪಾತದಲ್ಲಿ ಮಾಡಿದ್ದೆವು. ಇದೀಗ ಪರಿಷ್ಕೃತ ಸೂತ್ರದಲ್ಲಿ ಪರಿಶಿಷ್ಟ ಜಾತಿಯ ಶೇ.15ರ ಒಳ ಮೀಸಲಾತಿಯನ್ನು 5.25-5.25-4.5 ಅನುಪಾತದಲ್ಲಿ (ಎಡಗೈ-ಶೇ.5.25, ಬಲಗೈ-ಶೇ.5.25, ಇತರೆ- ಶೇ.4.5) ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಕಾಂಗ್ರೆಸ್‌ನಿಂದ ದಿಟ್ಟ ತೀರ್ಮಾನ
ಇಲ್ಲಿ ಕೊರಮ, ಕೊರಚ, ಲಂಬಾಣಿ ಸೇರಿ ಯಾವ ಜಾತಿಗಳಿಗೂ ಅನ್ಯಾಯ ಆಗುವುದಿಲ್ಲ. ನಾಗಮೋಹನ್ ದಾಸ್ ವರದಿಯನ್ನು ನಾವು ಸಂಪೂರ್ಣವಾಗಿ ಒಪ್ಪಿಕೊಂಡು ಒಳಮೀಸಲು ಜಾರಿ ಮಾಡಿದ್ದೇವೆ. ಇಂಥ ಒಂದು ದಿಟ್ಟ ತೀರ್ಮಾನವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. 101 ಜಾತಿಯಿಂದ ವಂಚಿತರಾಗಿದ್ದರೂ ಅವರಿಗೂ ನ್ಯಾಯ ಸಿಗುವಂತಾಗಿದೆ ಎಂದು ಹೇಳಿದರು.
ರೋಸ್ಟರ್ ಬಿಂದುಗಳಲ್ಲಿ 15 ವರೆಗೂ ಅವಕಾಶ ಇದೆ. 14.8 ಅಥವಾ 15 ಬಂದರೆ 12 ಸಾಮಾನ್ಯ, ಮೂರು ಒಳ ಮೀಸಲಾತಿ ಬರುತ್ತದೆ. 14 ಬಂದಾಗ ಎ.ಬಿ.ಗೆ ಸಿಗುತ್ತೆ, ಸಿ ಗೆ ಇಲ್ಲ. ಇದಕ್ಕೆ 101 ಜಾತಿಗಳಲ್ಲಿ ಇರುವವರು ಸ್ಪರ್ಧಿಸಲಿ. ಎಲ್ಲರಿಗೂ ಅನ್ವಯವಾಗುವಂತೆ 101 ಜಾತಿಗಳಿಗೂ ಅನ್ಯಾಯ ಆಗದಂತೆ ಒಳಮೀಸಲು ತಂದಿದ್ದೇವೆ ಎಂದರು.


