ಮಳೆಗಾಗಿ ದೇವರ ಮೊರೆ ಹೋದ ಗ್ರಾಮಸ್ಥರು; ಮಕ್ಕಳಿಗೆ ಸೊಪ್ಪು ಕಟ್ಟಿ ವಿಶೇಷ ಪೂಜೆ
ತೀವ್ರ ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಪಿರುಮೇನಹಳ್ಳಿ ಗ್ರಾಮಸ್ಥರು ಮಳೆಗಾಗಿ ಬಾಲಕರಿಬ್ಬರಿಗೆ ಸೊಪ್ಪು ಕಟ್ಟಿ ವಿಶೇಷ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ.
ಚಿಕ್ಕಮಗಳೂರು (ಮೇ.12): ತೀವ್ರ ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಪಿರುಮೇನಹಳ್ಳಿ ಗ್ರಾಮಸ್ಥರು ಮಳೆಗಾಗಿ ಬಾಲಕರಿಬ್ಬರಿಗೆ ಸೊಪ್ಪು ಕಟ್ಟಿ ವಿಶೇಷ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ.
ಕಾಲಕಾಲಕ್ಕೆ ಮಳೆಯಾಗದಿದ್ದರೆ ಗ್ರಾಮಸ್ಥರು ದೇವರ ಮೊರೆಹೋಗುವುದು ಸಾಮಾನ್ಯವಾಗಿದೆ. ಕಪ್ಪೆ ಮದುವೆ, ಕತ್ತೆಗಳ ಮದುವೆ ಮಾಡುತ್ತಾರೆ. ಕೆಲವಡೆ ಮಕ್ಕಳಿಗೆ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ರೈತಾಪಿ ವರ್ಗದಲ್ಲಿದೆ. ಚಿಕ್ಕಮಗಳೂರು ಭಾಗಗಳಲ್ಲಿ ಮಕ್ಕಳಿಗೆ ಸೊಪ್ಪು ಕಟ್ಟಿ ನೀರು ಸುರಿದು ಪ್ರಾರ್ಥಿಸುತ್ತಾರೆ. ಅದೇ ರೀತಿ ಬಂಜಾರ ಸಮುದಾಯದಿಂದ ಮಳೆಗಾಗಿ ವಿಶೇಷ ಪೂಜೆ ಮಾಡಿದ್ದಾರೆ. ಮಕ್ಕಳನ್ನ ಬರಿ ಮೈಯಲ್ಲಿ ನಿಲ್ಲಿಸಿ ಸೊಪ್ಪು ಕಟ್ಟಿದ್ದಾರೆ ಹೆಗಲ ಮೇಲೆ ದಂಡವನ್ನಿಟ್ಟಿದ್ದಾರೆ ಅದರ ನಡುವೆ ಎರಡು ಕಪ್ಪೆಗಳನ್ನು ಕಟ್ಟಿ ಮೈ ಮೇಲೆ ನೀರು ಸುರಿದು ಪ್ರಾರ್ಥಿಸಿದ್ದಾರೆ.
ಕಲಬುರಗಿ: ಸಿಡಿಲು ಬಡಿದು ರೈತ ಮಹಿಳೆ ಹಾಗೂ ಶ್ವಾನ ದುರ್ಮರಣ!
ಪೂಜೆ ಬಳಿ ಗ್ರಾಮದ ಮನೆಮನೆಗೂ ಭೇಟಿ ನೀಡುವ ಮೂಲಕ ಮೀಸಲು ಸಂಗ್ರಹ ಮಾಡುತ್ತಾರೆ. ಅಂದರೆ ಪ್ರತಿ ಮನೆಯಿಂದ ಅಕ್ಕಿ, ಹಿಟ್ಟು ಸಂಗ್ರಹಿಸುತ್ತಾರೆ. ಬಳಿಕ ಸಂಗ್ರಹಿಸಿ ಅಕ್ಕಿ, ಹಿಟ್ಟಿನಿಂದ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡಿ ದಂಡ ಪೂಜೆ ಮಾಡುವುದರಿಂದ ಮಳೆ ಬರುತ್ತದೆ ಎಂದು ನಂಬಿಕೆ ಇದೆ. ಪಿರುಮೇನಹಳ್ಳಿ, ಲಕ್ಕೇನಹಳ್ಳಿ, ಬೇಲೇನಹಳ್ಳಿ, ತಾಂಡ್ಯ ಭಾಗಗಳಲ್ಲಿ ಮಳೆಯಾಗದ ಹಿನ್ನೆಲೆ ಗ್ರಾಮಸ್ಥರು ದೈವದ ಮೊರೆ ಹೋಗಿದ್ದಾರೆ. ಕೆಲವಡೆ ಪೂಜೆ ಮಾಡಿದ ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಕೆಲವಡೆ ಬಿರುಗಾಳಿ ಸಹಿತ ಮಳೆಯಾಗಿದೆ ರೈತರು ಸಂತಸಗೊಂಡಿದ್ದಾರೆ.