ಚಿಕ್ಕಬಳ್ಳಾಪುರ (ಆ.16) : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯಕ್ಕೆ ಈ ಬಾರಿ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಜಿಲ್ಲೆಯ ಫಲಿತಾಂಶದಲ್ಲಿ ಟಾಪರ್‌ ಬಂದಿದ್ದ ಏಳು ಜನ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸನ್ಮಾನಿಸಿ ಸ್ವಂತ ಹಣದಲ್ಲಿ ಲ್ಯಾಪ್‌ಟಾಪ್‌ ವಿತರಿಸಿದ್ದಾರೆ. 

ನಗರ ಜಿಲ್ಲಾ ಕೇಂದ್ರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 74ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಚಿಂತಾಮಣಿಯ ರಾಯಲ್‌ ಶಾಲೆಯ ವಿನುತಾ, ಕಿಶೋರ್‌ ವಿದ್ಯಾಭವನದ ಅಮೂಲ್ಯ ಮತ್ತು ವರ್ಷಿಣಿ, ಸರ್ಕಾರಿ ಪ್ರೌಢ ಶಾಲೆ ಮಾಚಹಳ್ಳಿಯ ಐಶ್ವರ್ಯ, ಆದರ್ಶ ವಿದ್ಯಾಲಯ ಬಾಗೇಪಲ್ಲಿಯ ನವ್ಯಶ್ರೀ, ಸೆಂಟ್‌ ಜೋಸೆಫ್‌ ಶಾಲೆ ಚಿಕ್ಕಬಳ್ಳಾಪುರದ ಎಸ್‌.ಸಿರೀಶ್‌, ಸಂಯುಕ್ತ ಪ್ರೌಢ ಶಾಲೆ ಮಂಚೇನಹಳ್ಳಿಯ ಮೊಹಮ್ಮದ್‌ ಸಾದ್‌, ಕಿತ್ತೂರು ರಾಣಿ ಚೆನ್ನಮ್ಮ ಕೊಂಡರೆಡ್ಡಿಪಲ್ಲಿ ರಮ್ಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೈವಾರದ ಚಂದನಾಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು.
ಪ್ರತಿಭೆಗೆ ಮೆಚ್ಚಿ 2.7 ಲಕ್ಷ ಸಂಬಳ ಬಹುಮಾನ ನೀಡಿದ ಸಚಿವ ಚವ್ಹಾಣ್ .

ಇದೇ ಸಂದರ್ಭದಲ್ಲಿ ಕೋವಿಡ್‌-19 ವಿರುದ್ಧ ಆರಂಭದಿಂದ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಕೊರೋನಾ ವಾರಿಯರ್‌ಗಳನ್ನು ಹಾಗೂ ರಾಷ್ಟ್ರಪತಿಗಳ ಶ್ಲಾಘನೀಯ ಪದಕ ಪಡೆದ ಎಎಸ್‌ಐ ಎಚ್‌.ನಂಜುಂಡಯ್ಯ ಅವರನ್ನು ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಸಚಿವರು ಎಎಸ್‌ಐ ಸಾಧನೆಗೆ ವೈಯಕ್ತಿಕವಾಗಿ 1 ಲಕ್ಷ ರು. ವಿತರಿಸಿದರು.