Asianet Suvarna News Asianet Suvarna News

Uttara Kannada| ರಾಜ್ಯದ ದ್ವೀಪಗಳು ಗೋವಾ ಹೆಸರಿನಲ್ಲಿ..!

* ಕೂರ್ಮಗಢ ಸೇರಿದಂತೆ ರಾಜ್ಯದ 12 ನಡುಗಡ್ಡೆ ಪ್ರದೇಶಗಳು ಗೋವಾದ ಹೆಸರಿನಲ್ಲಿವೆ 
* ಇಂದಿಗೂ ಮುಂದುವರಿದಿದೆ ಪೋರ್ಚುಗೀಸರ ಆಡಳಿತಾವಧಿಯ ದಾಖಲೆ
* ರಾಜ್ಯದ ಸಮುದ್ರ ಪ್ರದೇಶದ ವ್ಯಾಪ್ತಿಯಲ್ಲೇ ಇದ್ರೂ ದಾಖಲೆಯಲ್ಲಿ ದ್ವೀಪಗಳು ಅನ್ಯ ರಾಜ್ಯದ್ದು
 

Karnataka Islands Are in The Name of Goa grg
Author
Bengaluru, First Published Oct 10, 2021, 10:13 AM IST

ಕಾರವಾರ(ಅ.10): ಉತ್ತರ ಕನ್ನಡ(Uttara Kannada) ಜಿಲ್ಲೆಯ ಕರಾವಳಿ(Coast) ಪ್ರದೇಶದ ಅರಬ್ಬಿ ಸಮುದ್ರದ(Arabian Sea) ವ್ಯಾಪ್ತಿಯಲ್ಲಿ ಹಲವು ದ್ವೀಪಗಳಿವೆ. ಕೆಲವು ದ್ವೀಪಗಳು ನೇವಿಯ ಅಡಿಯಲ್ಲಿದ್ದರೆ, ಇನ್ನು ಕೆಲವು ದ್ವೀಪಗಳಿಗೆ ಮಾತ್ರ ಭೇಟಿಗೆ ಅವಕಾಶವಿದೆ. ರಾಜ್ಯ ಸರ್ಕಾರದ ಅಧೀನಕ್ಕೆ ಹಲವು ದ್ವೀಪಗಳು ಒಳಪಟ್ಟಿದ್ದರೂ ದಾಖಲೆಯ ಪ್ರಕಾರ ಅವೆಲ್ಲವೂ ಇನ್ನೂ ಗೋವಾದ(Goa) ಹೆಸರಿನಲ್ಲೇ ಇವೆ ಅನ್ನೋದನ್ನು ನಂಬ್ತೀರಾ..? ನಂಬಲೇ ಬೇಕು. ದ್ವೀಪಗಳನ್ನು ದಾಖಲೀಕರಿಸುವುದರಲ್ಲಿ ಸರ್ಕಾರ ನಡೆಸಿರುವ ನಿರ್ಲಕ್ಷ್ಯದ ಬಗ್ಗೆ ಇಲ್ಲಿದೆ ವರದಿ. 

"

ಹೌದು, ಜಿಲ್ಲೆಯ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿರುವ ಕೂರ್ಮಗಢ, ದೇವಗಢ, ಸಿಮ್ಸಿಗುಡ್ಡ, ಕರ್ಕಲ್ ಗುಡ್ಡ ಸೇರಿದಂತೆ 12 ದ್ವೀಪಗಳು ಹಾಗೂ ನಡುಗಡ್ಡೆಗಳು ದಾಖಲೆಗಳ ಪ್ರಕಾರ ಇನ್ನೂ ಗೋವಾ ರಾಜ್ಯದ ಹೆಸರಿನಲ್ಲಿವೆ. ಪೋರ್ಚುಗೀಸರ(Portuguese)ಆಡಳಿತಾವಧಿಯಲ್ಲಿದ್ದ ಈ ದಾಖಲೆ ಇನ್ನೂ ಬದಲಾವಣೆಯಾಗದೇ ಹಾಗೇ ಉಳಿದಿರೋದು ರಾಜ್ಯ ಸರ್ಕಾರದ ಬೇಜವಬ್ದಾರಿ ನೀತಿಗೆ ಸಾಕ್ಷಿಯಾಗಿದೆ. 

ಪೋರ್ಚುಗೀಸರ ಆಡಳಿತದ ಪೂರ್ವದಲ್ಲಿ ಕದಂಬವಂಶದ ಕೋಟೆಯಾಗಿ ಅವರ ಆಡಳಿತದಲ್ಲೇ ಇದ್ದ ಕೂರ್ಮಗಢವನ್ನು ಬಳಿಕ ಪೊರ್ಚುಗೀಸರು ವಶಪಡಿಸಿಕೊಂಡಿದ್ದರು. ಬಿಜಾಪುರದ ಸುಲ್ತಾನನಿಂದ(Bijapur Sultan) ಗೋವಾವನ್ನು ವಶಕ್ಕೆ ಪಡೆದ ಪೊರ್ಚುಗೀಸರು, ಕೂರ್ಮಗಢ ಸೇರಿದಂತೆ ರಾಜ್ಯದ ವ್ಯಾಪ್ತಿಯಲ್ಲಿರುವ ಹಲವು ದ್ವೀಪ(Island) ಹಾಗೂ ನಡುಗಡ್ಡೆಗಳನ್ನು ವ್ಯಾಪಾರ(Business) ವಹಿವಾಟಿನ ಕೇಂದ್ರ ಸ್ಥಳಗಳನ್ನಾಗಿ ಮಾಡಿಕೊಂಡಿದ್ದರು. ಗೋವಾವನ್ನು ತಮ್ಮ ಮೂಲ ವ್ಯಾಪಾರ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು  ಹಾಯುದೋಣಿ ಮೂಲಕ ಬರುತ್ತಿದ್ದ ಪೊರ್ಚುಗೀಸರು, ದೇವಗಢ, ಕೂರ್ಮಗಢ, ಅಂಜುದೀವ್, ಶಿಮ್ಸಿಗುಡ್ಡ ಸೇರಿದಂತೆ ಹಲವು ನಡುಗಡ್ಡೆಗಳಲ್ಲಿ ತಮ್ಮ ಪ್ರಭುತ್ವವನ್ನು ಸಾಧಿಸಿದ್ದರು. ಹೀಗಾಗಿ ಆ ಸಂದರ್ಭದಲ್ಲಿಯೇ ಗೋವಾ ರಾಜ್ಯದ ಸ್ವಾಧೀನಲ್ಲೇ ಈ ದ್ವೀಪಗಳು ಹಾಗೂ ನಡುಗಡ್ಡೆಗಳನ್ನು ಗುರುತಿಸಲಾಗಿತ್ತು. ಇದರೊಂದಿಗೆ ಲೈಟ್ ಹೌಸ್ ಮಧ್ಯದಲ್ಲಿರುವ ಸನಸೆ ಗುಂಜಿ ನಡುಗಡ್ಡೆ, ಕನಿಗುಡ್ಡ ಐಲ್ಯಾಂಡ್, ಮದಲಿಗಢ, ಕೂರ್ಮಗಢ ಪ್ರದೇಶದ ವ್ಯಾಪ್ತಿಯಲ್ಲಿನ 5 ನಡುಗಡ್ಡೆ ಪ್ರದೇಶಗಳೂ ಇವೆ.

ಅಂಕೋಲಾ: ಕರೆ​ದಾಗಲೆಲ್ಲ ಬಂದು ಕೈಮೇ​ಲೇ​ರುವ ಕಾಕ, ಮಾನವನ ಜತೆ ಕಾಗೆ ಫ್ರೆಂಡ್‌ಶಿಪ್‌..!

500 ವರ್ಷದ ಹಿಂದಿನ ದಾಖಲೆ 

ಆದರೆ, ಈ ನಡುಗಡ್ಡೆಗಳು 12-15 ನಾಟಿಕಲ್ ವ್ಯಾಪ್ತಿಯಲ್ಲಿವೆ. ಸಮುದ್ರದ(Sea) ತೀರ ಪ್ರದೇಶದಿಂದ 12-15 ನಾಟಿಕಲ್ ವ್ಯಾಪ್ತಿಯ ಪ್ರದೇಶ ಭೌಗೋಳಿಕವಾಗಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಈ ಎಲ್ಲಾ ನಡುಗಡ್ಡೆ ಪ್ರದೇಶ ರಾಜ್ಯಕ್ಕೆ ಸೇರಿದ್ದಾಗಿದ್ದರೂ ಕಂದಾಯ ಇಲಾಖೆ ಪ್ರಕಾರ ಅದು ಇನ್ನೂ ಗೋವಾ ರಾಜ್ಯದ ಹೆಸರಲ್ಲಿಯೇ ಇವೆ. ಮುಖ್ಯವಾಗಿ ಕೂರ್ಮಗಢ ದ್ವೀಪದಲ್ಲಿ ನರಸಿಂಹ ದೇವರ ಗುಡಿಯಿದ್ದು, ಅಲ್ಲಿನ ಪೂಜಾ ಕೈಂಕರ್ಯಗಳನ್ನು ಕಾರವಾರದ ಕಡವಾಡದ ಮನೆತನವೇ ನೋಡಿಕೊಳ್ಳುತ್ತಿದೆ. ಇತಿಹಾಸ ನೋಡಿದರೂ ಇವುಗಳೆಲ್ಲವೂ ಕರ್ನಾಟಕಕ್ಕೆ(Karnataka) ಸೇರಿದೆಂಬುದು ಸ್ಪಷ್ಟ. ಆದರೆ, ಇವುಗಳನ್ನು ನಮ್ಮ ರಾಜ್ಯದ ಭೂ ಪ್ರದೇಶ ವ್ಯಾಪ್ತಿಗೆ ಸೇರಿಸಿಕೊಳ್ಳದ ಕಾರಣ ಇನ್ನೂ ಕಂದಾಯ ಇಲಾಖೆಯಲ್ಲಿ ರಾಜ್ಯದ ಭೂ ದಾಖಲೆ ಪುಟದಲ್ಲಿ ಸೇರ್ಪಡೆಯಾಗಿಲ್ಲ. ಹೀಗಾಗಿ 500 ವರ್ಷದ ಹಿಂದಿನ ದಾಖಲೆ ಇನ್ನೂ ಹಾಗೇಯೇ ಇದ್ದು, ಹೆಸರಿಗೆ ಮಾತ್ರ ಕಾರವಾರ ಬಳಿಯ ನಡುಗಡ್ಡೆಗಳಾಗಿ ರಾಜ್ಯಕ್ಕೇ ಸೀಮಿತವಾಗಿವೆ. ಕೂರ್ಮಗಢದಿಂದ ಕರಕಲ್‌ಗುಡ್ಡದ ಪ್ರದೇಶದವರೆಗೂ ರಾಜ್ಯದ ಸಮುದ್ರ ಪ್ರದೇಶದ ಸೀಮಾರೇಖೆಯಿದ್ದರೂ, ಇವೆಲ್ಲವೂ ಇನ್ನೂ ಗೋವಾ ರಾಜ್ಯದ ಹೆಸರಿನಲ್ಲಿಯೇ ಇವೆ. 

ಅಷ್ಟಕ್ಕೂ ಈ ಮಾಹಿತಿ ಹೊರಬಿದ್ದದ್ದು ಕೇಂದ್ರ ಗೃಹ ಇಲಾಖೆ ರಾಜ್ಯ ಆಂತರಿಕ ಭದ್ರತಾ ವಿಭಾಗದಿಂದ ಮಾಹಿತಿ ಪಡೆದಾಗ. ರಾಜ್ಯಕ್ಕೆ ಸಂಬಂಧಿಸಿದ ದ್ವೀಪಗಳು ಹಾಗೂ ನಡುಗಡ್ಡೆಗಳು ಗೋವಾದ‌ ಹೆಸರಿನಲ್ಲಿರುವುದನ್ನು ಕಂಡು ಸಂಶಯಕ್ಕೊಳಗಾದ ಆಂತರಿಕ ಭದ್ರತಾ ಪಡೆ ಉತ್ತರಕನ್ನಡ ಜಿಲ್ಲಾಡಳಿತವನ್ನು ಕೇಳಿದ ಬಳಿಕ ನೈಜ ಮಾಹಿತಿ ಹೊರಬಿದ್ದಿದೆ. 

ಧಾರೇಶ್ವರದ ಮೀನುಗಾರ ಸಮಾಜದಿಂದ ಕಡಲಾಮೆಗೆ ಗೌರವದ ಅಂತಿಮ ನಮನ

ರಾಜ್ಯ ಆಂತರಿಕ ಭದ್ರತಾ ಪಡೆಯಿಂದ ಮಾಹಿತಿ 

ಆಂತರಿಕ ಭದ್ರತಾ ಪಡೆ(Internal Security Force) ಕೇಳಿದ ಮಾಹಿತಿ ಪರಿಶೀಲಿಸಿರುವ ಜಿಲ್ಲಾಡಳಿತ ಬಳಿಕ ಅದರ ಲಾಂಗಿಟ್ಯೂಡ್ ಹಾಗೂ ಲ್ಯಾಟಿಟ್ಯೂಡ್ ಪರಿಶೀಲಿಸಿ ಇವುಗಳು ಕರ್ನಾಟಕದ್ದೇ ಎಂದು ವಾಪಾಸ್ ವರದಿ ಕಳುಹಿಸಿದೆ. ಉತ್ತರಕನ್ನಡ‌ ಜಿಲ್ಲೆಯ ಜಿಲ್ಲಾಧಿಕಾರಿ ಹೇಳೋ‌ ಪ್ರಕಾರ, ಹಲವಾರು ವರ್ಷಗಳಿಂದ ದ್ವೀಪ ಹಾಗೂ ನಡುಗಡ್ಡೆಗಳನ್ನು ಗೋವಾದ್ದೆಂದೇ ಗುರುತಿಸಲಾಗಿತ್ತು. ಆದರೆ, ಅದನ್ನು ಸರಿಪಡಿಸಿ ಮತ್ತೆ ಕಳುಹಿಸಲಾಗಿದೆ. ಕರ್ನಾಟಕದ‌ 7-8 ದ್ವೀಪಗಳನ್ನು ಗೋವಾ ದ್ವೀಪಗಳನ್ನಾಗಿ ಗುರುತಿಸಿಕೊಂಡಿರುವುದಾಗಿ ರಾಜ್ಯ ಆಂತರಿಕ ಭದ್ರತಾ ಪಡೆಯಿಂದ ಮಾಹಿತಿ ಬಂದಿತ್ತು. ಈ ದ್ವೀಪಗಳು ಯಾವುದು, ಅವುಗಳ ಹೆಸರು ಹಾಗೂ ಇದು ಕರ್ನಾಟಕಕ್ಕೆ ಸಂಬಂಧಪಟ್ಟದ್ದೇ ಎಂದು ಮಾಹಿತಿ ನೀಡಲು ತಿಳಿಸಿದ್ದರು. ತಕ್ಷಣ ಈ ದ್ವೀಪಗಳನ್ನು ಗುರುತಿಸಿ ಅವುಗಳ ಸ್ಪಷ್ಟ ರಿಪೋರ್ಟ್ ಕಳುಹಿಸಲಾಗಿದೆ.   

ಇದು ಕೇಂದ್ರ ಗೃಹ ಸಚಿವಾಲಯದಿಂದ ಬಂದಂತಹ ಪಟ್ಟಿ. ಅದರಲ್ಲಿ ಈ ರೀತಿಯಿದ್ದ ಬಗ್ಗೆ ಆಂತರಿಕ ಭದ್ರತಾ ಪಡೆಯಿಂದ ಮಾಹಿತಿ ದೊರಕಿದೆ. ಕೇಂದ್ರ ಗೃಹ ಸಚಿವಾಲಯದ ಲಿಸ್ಟ್‌ನಲ್ಲಿದ್ದ ಈ ಮಾಹಿತಿಯನ್ನು ಸರಿಪಡಿಸಲು ಸೂಚಿಸಿದ್ದರು. ಈ ದ್ವೀಪಗಳು ಗೋವಾದ ಹೆಸರಿನಲ್ಲಿತ್ತು. ಕೇಂದ್ರದಿಂದ ವ್ಯವಹರಿಸಲ್ಪಡುವಂತಹ ಈ ಲಿಸ್ಟ್‌ನಲ್ಲಿದ್ದ ತಪ್ಪು ಮಾಹಿತಿಯನ್ನು ಸರಿಪಡಿಸಿ ಸ್ಪಷ್ಟ ಮಾಹಿತಿ ನೀಡಲಾಗಿದೆ. 

ಒಟ್ಟಿನಲ್ಲಿ ಈ ಎಲ್ಲಾ ದ್ವೀಪಗಳು ಹಾಗೂ ನಡುಗಡ್ಡೆಗಳು 12 ನಾಟಿಕಲ್ ಮೈಲ್ ವ್ಯಾಪ್ತಿಯ ಒಳಗೆ ಇರೋದ್ರಿಂದ ರಾಜ್ಯ ಸರ್ಕಾರ ಇವುಗಳನ್ನು ಕಂದಾಯ ಇಲಾಖೆಯ ದಾಖಲೆಯಲ್ಲಿ ಸೇರ್ಪಡಿಸಬೇಕಿದೆ. ಅಲ್ಲದೇ, ಇವುಗಳ ನಿರ್ವಹಣೆಯನ್ನು ಬಂದರು ಇಲಾಖೆಗೆ ಅಥವಾ ಕಂದಾಯ ಇಲಾಖೆಗೆ ನೀಡಿದ್ದಲ್ಲಿ ಭವಿಷ್ಯದಲ್ಲಿ ರಾಜ್ಯ ಸರ್ಕಾರಕ್ಕೇ ಇವುಗಳಿಂದ ನೆರವಾಗಲಿದೆ. ಅಲ್ಲದೇ, ಜಿಲ್ಲಾಡಳಿತವೂ ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಂಡಲ್ಲಿ ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಅಭಿವೃದ್ಧಿ ಪೂರಕ ಯೋಜನೆಗಳನ್ನು ಕೂಡಾ ಅನುಷ್ಠಾನಗೊಳಿಸಬಹುದಾಗಿದೆ.
 

Follow Us:
Download App:
  • android
  • ios