ಬೆಂಗಳೂರು (ಮೇ.13):  ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರ ನೀಡುವುದು ಸೇರಿದಂತೆ ಉನ್ನತ ಮಟ್ಟದ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಕೊರೋನಾ ನಿರ್ವಹಣೆ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎ.ಎಸ್‌.ಓಕ ಅವರಿದ್ದ ವಿಭಾಗೀಯ ಪೀಠ, ಘಟನೆ ಸಂಬಂಧ ಪ್ರಾಥಮಿಕ ತನಿಖೆ ನಡೆಸಿರುವ ನಿವೃತ್ತ ನ್ಯಾ.ಎ.ಎನ್‌. ವೇಣುಗೋಪಾಲಗೌಡ ನೇತೃತ್ವದ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿ​ಕಾರದ ಉನ್ನತ ಮಟ್ಟದ ಸಮಿತಿ ಮಂಗಳವಾರ ಸಲ್ಲಿಸಿದ್ದ ಪ್ರಾಥಮಿಕ ವರದಿ ಪರಿಶೀಲಿಸಿ, ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತು. ಬಳಿಕ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಚಾಮರಾಜನಗರ ಘಟನೆ: ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ ..

ಸಮಿತಿ ಶಿಫಾರಸ್ಸುಗಳು:  ಆಮ್ಲಜನಕ ಕೊರತೆಯಿಂದ ಮೃತಪಟ್ಟವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರ ನೀಡಬೇಕು. ಪ್ರತಿ ಜಿಲ್ಲೆಯಲ್ಲಿಯೂ ಹೆಚ್ಚುವರಿಯಾಗಿ ಆಮ್ಲಜನಕ ಸಂಗ್ರಹಿಸಿರಬೇಕು. ಆಮ್ಲಜನಕ ಸಾಗಾಟದ ವಾಹನಗಳಿಗೆ ಭದ್ರತೆ ಒದಗಿಸಬೇಕು. ಮೈಸೂರಿನಲ್ಲಿರುವ ಆಮ್ಲಜನಕ ಬಾಟ್ಲಿಂಗ್‌ ಘಟಕ ದುರಸ್ತಿ ಪಡಿಸಬೇಕು ಎಂದು ವರದಿಯಲ್ಲಿ ಶಿಫಾರಸ್ಸುಗಳನ್ನು ಮಾಡಲಾಗಿದೆ.