ಬೆಂಗಳೂರು(ಮೇ.07): ಜಿಲ್ಲೆಗಳಿಗೆ ಆಕ್ಸಿಜನ್‌ ಪೂರೈಸುವುದಕ್ಕೆ ಸ್ಪಷ್ಟ ನೀತಿ ಇಲ್ಲದಿರುವ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಸೂಕ್ತ ಮಾರ್ಗಸೂಚಿ ಇಲ್ಲದಿರುವುದೇ ಚಾಮರಾಜನಗರದಲ್ಲಿ 24 ಸೋಂಕಿತರ ಸಾವಿಗೆ ಕಾರಣ ಎಂದು ಚಾಟಿ ಬೀಸಿದೆ. 

ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತಕ್ಷಣವೇ ಸ್ಪಷ್ಟನೀತಿ ರೂಪಿಸುವಂತೆ ತಾಕೀತು ಮಾಡಿದೆ. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ವಾದಿಸಿ, ಆಕ್ಸಿಜನ್‌ ಸೆಲ್‌ ರಚನೆ, ನೋಡಲ್‌ ಅಧಿಕಾರಿಗಳ ನೇಮಕ ಮತ್ತು ವಾರ್‌ ರೂಮ್‌ ಆರಂಭ ಸೇರಿ ಸರ್ಕಾರಿ ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೂರೈಕೆಗೆ ತೊಂದರೆಯಾಗದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ. ಚಾಮರಾಜನಗರ ಸೇರಿದಂತೆ ಬಾಟ್ಲಿಂಗ್‌ ಘಟಕ ಇಲ್ಲದಂತಹ ಜಿಲ್ಲೆಗಳಲ್ಲಿ ಆಕ್ಸಿಜನ್‌ ಬಫರ್‌ ಸ್ಟಾಕ್‌ಗೆ ಕ್ರಮ ಜರುಗಿಸಲಾಗಿದೆ ಎಂದು ವಿವರಿಸಿದರು.

"

ಚಾಮರಾಜನಗರದಲ್ಲಿ ಘೋರ ಸ್ಥಿತಿ : ಏರುತ್ತಿರುವ ಸಾವಿನ ಸರಣಿ - ಆರೋಗ್ಯ ಸಚಿವರ ದೌಡು

ಕೊರೋನಾ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂ​ಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿ ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಯಾವ ವಿಧಾನದಲ್ಲಿ ಜಿಲ್ಲಾಸ್ಪತ್ರೆಗಳಿಗೆ ಆಕ್ಸಿಜನ್‌ ಪೂರೈಸಲಾಗುತ್ತಿದೆ? ದಿನಕ್ಕೆ ಎಷ್ಟುಅಗತ್ಯವಿದೆ ಎಂಬುದನ್ನು ಹೇಗೆ ಅಂದಾಜು ಮಾಡಲಾಗುತ್ತಿದೆ ಎಂದು ಪ್ರಶ್ನಿಸಿತಲ್ಲದೆ, ಆಕ್ಸಿಜನ್‌ ಪೂರೈಕೆಗೆ ಸ್ಪಷ್ಟಮಾರ್ಗಸೂಚಿ ಇಲ್ಲ. ಇದರಿಂದಲೇ ಚಾಮರಾಜನಗರದಲ್ಲಿ ದುರ್ಘಟನೆ ಸಂಭವಿಸಿದೆ. ಕೂಡಲೇ ಹೊಸ ಮಾರ್ಗಸೂಚಿ ಸಿದ್ಧಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ತಲುಪಿಸಬೇಕು. ಆಕ್ಸಿಜನ್‌ ಎಲ್ಲಿ ಲಭ್ಯವಾಗುತ್ತದೆ. ಎಲ್ಲಿ ಹಾಗೂ ಎಷ್ಟು ಬೇಡಿಕೆಯಿದೆ. ಎಷ್ಟುಪೂರೈಸಬೇಕು ಎಂಬ ಅಂಕಿ-ಅಂಶ ಸಂಗ್ರಹಿಸಿ, ಕೇಂದ್ರೀಕೃತ ಮಾಹಿತಿಯುಳ್ಳ ವ್ಯವಸ್ಥೆ ರೂಪಿಸಬೇಕು ಎಂದು ಸೂಚಿಸಿತು.

ಸರ್ಕಾರದ ವಿವರಣೆ:

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಕೋರ್ಟ್‌ ನ್ಯಾಯಾಲಯದ ನಿರ್ದೇಶನದಂತೆ ಹೆಚ್ಚುವರಿ 100 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಹಂಚಿಕೆಯನ್ನು ಕೇಂದ್ರ ಸರ್ಕಾರ ಪೂರೈಸಿದೆ. ಅದರಲ್ಲಿ ಬಳ್ಳಾರಿಯಿಂದ 60 ಮತ್ತು ಒಡಿಶಾದಿಂದ 40 ಮೆಟ್ರಿಕ್‌ ಟನ್‌ ಪಡೆಯಲಾಗಿದೆ. ಬಹ್ರೇನ್‌ನಿಂದ 20 ಮತ್ತು ಐಒಸಿಯಿಂದ 20 ಮೆಟ್ರಿಕ್‌ ಟನ್‌ ರಾಜ್ಯಕ್ಕೆ ಬರುತ್ತಿದೆ. 5 ಖಾಲಿ ಟ್ಯಾಂಕರ್‌ಗಳನ್ನು ವಿಮಾನದ ಮೂಲಕ ಒಡಿಶಾಗೆ ಕಳುಹಿಸಲಾಗಿದೆ. ತಲಾ 74 ಟನ್‌ ಸಾಮರ್ಥ್ಯದ ಈ ಟ್ಯಾಂಕರ್‌ 48 ಗಂಟೆಗಳಲ್ಲಿ ರಾಜ್ಯಕ್ಕೆ ಆಕ್ಸಿಜನ್‌ ತರಲಿವೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಕೆ ಮಾಡುವ ಬಗ್ಗೆ ರಾಜ್ಯದ ಸಚಿವರು, ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಅವರು ವಿವರಿಸಿದರು.

ಜತೆಗೆ, ಕೇಂದ್ರ ಸರ್ಕಾರವು 28 ಪಿಎಸ್‌ಎ (ಪ್ರೆಶರ್‌ ಸ್ವಿಂಗ್‌ ಅಡ್‌ಸಾರ್ಪೆಷನ್‌) ಆಕ್ಸಿಜನ್‌ ಘಟಕ ಮಂಜೂರು ಮಾಡಿದೆ. ಒಂದು ಘಟಕದಿಂದ ಕನಿಷ್ಠ 15ರಿಂದ 20 ಹಾಸಿಗೆಗಳಿಗೆ ಆಕ್ಸಿಜನ್‌ ಪೂರೈಸಬಹುದು. ರಾಜ್ಯ ಸರ್ಕಾರ ಸಹ 40 ಪಿಎಸ್‌ಎಗಳಿಗೆ ಬೇಡಿಕೆ ಸಲ್ಲಿಸಿದೆ. ಒಟ್ಟಾರೆ ಈ ತಿಂಗಳಾಂತ್ಯದ ವೇಳೆಗೆ 68 ಪಿಎಸ್‌ಎ ಆಕ್ಸಿಜನ್‌ ಘಟಕಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona