ಆಗುಂಬೆ ಘಾಟಿಯಲ್ಲಿ ವಾಹನಗಳ ಒತ್ತಡದಿಂದ ಟ್ರಾಫಿಕ್ ಜಾಮ್, ಕೆಲವು ತಿರುವಿನ ದಂಡೆಗಳ ಕುಸಿತವಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ..

ಕಾರ್ಕಳ (ಜೂ.10): ಆಗುಂಬೆ ಘಾಟಿಯಲ್ಲಿ ವಾಹನಗಳ ಒತ್ತಡದಿಂದ ಟ್ರಾಫಿಕ್ ಜಾಮ್, ಕೆಲವು ತಿರುವಿನ ದಂಡೆಗಳ ಕುಸಿತವಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಆಗುಂಬೆ ಘಾಟಿಯ ತಿರುವುಗಳ ವೀಕ್ಷಣೆ ನಡೆಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿಗೆ ಸಮೀಪದ ಹುಲಿಕಲ್ ಘಾಟಿಯಲ್ಲಿ ವಾಹನ ನಿರ್ಬಂಧವಿರುವುದರಿಂದ ಆಗುಂಬೆ ಘಾಟಿಯಲ್ಲಿ ಅತಿಯಾದ ವಾಹನ ದಟ್ಟಣೆ ಇರುವುದು ಮತ್ತು ನಿರ್ಬಂಧವಿದ್ದರೂ ಜಲ್ಲಿಕಲ್ಲು ಮತ್ತು ಬಾರಿ ತೂಕದ ವಾಹನಗಳ ಸಂಚರಿಸುವುದರಿಂದ ಭೂ ಕುಸಿತ ಸಂಭವವಿದೆ ಎಂದು ಅಧಿಕಾರಿಗಳು ಈ ಸಂದರ್ಭ ವಿವರಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೋಟ, ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತಾಗಿ ತಿರುವಿನ ದಂಡೆಗಳಲ್ಲಿ ಸಾವಿರ ಮೀಟರ್ ತಡೆಬೇಲಿ ನಿರ್ಮಿಸಲು ಸೂಚಿಸಲಾಗಿದೆ. ತಿರುವುಗಳ ಕುಸಿತ ಮತ್ತು ಘಾಟಿ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರಕ್ಕೆ 15 ಕೋಟಿ ರು. ಕಾಮಗಾರಿಗೆ ಮಂಜೂರಾತಿ ದೊರಕಿದ್ದು, ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಟೆಂಡರ್ ಪ್ರಕ್ರಿಯೆ

ಆಗುಂಬೆ ಘಾಟಿಯ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಸ್ತಾವನೆಯಂತೆ ಸುರಂಗ ಮಾರ್ಗ ಮತ್ತು ಈಗಿರುವ ರಸ್ತೆಗಳ ದ್ವಿಪಥದ ಬಗ್ಗೆ ಡಿಪಿಆರ್ ಗಾಗಿ ಟೆಂಡರ್ ಕರೆಯಲಾಗಿದ್ದು, ಸಾಧ್ಯತಾ ವರದಿ ಅವಲಂಬಿಸಿ ಎರಡು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸುವಂತೆ ಎನ್.ಎಚ್. ಆರ್.ಓ. ಶ್ರೀಧರ ಅವರಿಗೆ ಸಂಸದರು ದೂರವಾಣಿ ಮೂಲಕ ಸಲಹೆ ನೀಡಿದರು.

ಹೆದ್ದಾರಿ ಅಧಿಕಾರಿಗಳು ಭಾರಿ ತೂಕದ ವಾಹನಗಳನ್ನು ನಿರ್ಬಂಧಿಸದಿದ್ದರೆ ಮಳೆಗಾಲದಲ್ಲಿ ಘಾಟಿ ಕುಸಿಯುವ ಅಪಾಯದ ಬಗ್ಗೆ ವಿವರಿಸಿ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸಲಹೆ ನೀಡಬೇಕು ಎಂದು ವಿನಂತಿಸಿದರು. ರಸ್ತೆ ದ್ವಿಪಥವಾಗ ಬೇಕಿದ್ದರೆ ಎಂಟನೇ ತಿರುವಿನ ನಂತರದ ಮೇಲ್ಭಾಗದಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆಯಲು ಸರಳ ಆ್ಯಪ್‌ನಲ್ಲಿ ಪ್ರಸ್ತಾವನೆ ಸಲ್ಲಿಸಲು ಕೋಟ ಸೂಚನೆ ನೀಡಿದರು.