ಬಳ್ಳಾರಿ(ಜೂ.21): ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವ್ಯವ​ಹಾರ ಈ ವರೆಗೆ ಒಟ್ಟು 50 ಸಾವಿರ ಕೋಟಿ ದಾಟಿದ್ದು, ಭಾರತದ 46 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಅತಿ ಹೆಚ್ಚು ವ್ಯವಹಾರ ನಡೆಸಿದ ಪ್ರಥಮ ಬ್ಯಾಂಕ್‌ ಆಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಶ್ರೀನಾಥ್‌ ಜೋಷಿ ತಿಳಿಸಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ವಾರ್ಷಿಕ ಪ್ರಗತಿಯ ಕುರಿತು ಮಾಹಿತಿ ನೀಡಿದ ಅವರು, 2019-20ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ 50,200 ಕೋಟಿಯಾಗಿದೆ. ಒಟ್ಟು 28,435 ಕೋಟಿ ಠೇವಣಿ, . 21,785 ಸಾಲ ಮತ್ತು ಮುಂಗಡವಿದೆ ಎಂದು ವಿವರಿಸಿದರು.

2019​​-20ನೇ ಸಾಲಿನಲ್ಲಿ ಬ್ಯಾಂಕ್‌ ವತಿಯಿಂದ 45,795 ಹೊಸ ಕೃಷಿಕರಿಗೆ 521 ಕೋಟಿ ಮೊತ್ತದ ಕೆಸಿಸಿ ಯೋಜನೆಯಡಿ ಸಾಲ ಸೌಕರ್ಯ ಕಲ್ಪಿಸಲಾಗಿದೆ. ಆದ್ಯತಾ ವಲಯಕ್ಕೆ 19,928 ಕೋಟಿ ಸಾಲ ನೀಡಲಾಗಿದೆ. ಒಟ್ಟಾರೆ ಸಾಲದ ಶೇ. 91 ರಷ್ಟು ಆದ್ಯತಾ ವಲಯಕ್ಕೆ ನೀಡಲಾಗಿದೆ. ಭಾರತೀಯ ರಿಸವ್‌ರ್‍ ಬ್ಯಾಂಕ್‌ ನಿಗದಿಪಡಿಸಿದ ಗುರಿ ಶೇ. 75ರಷ್ಟಿದ್ದು ಬ್ಯಾಂಕ್‌ ಗುರಿಯನ್ನು ದಾಟಿದೆ ಎಂದು ತಿಳಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಹೊಸ 14 ಕೊರೋನಾ ಪಾಸಿಟಿವ್‌ ಕೇಸ್‌

ಕೋವಿಡ್‌ ಸಂಕಷ್ಟದ ಸಮಯದಲ್ಲಿ ನಮ್ಮ ಶಾಖೆಗಳು ಸೀಲ್‌ಡೌನ್‌ ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರದೇಶಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿವೆ. ಕೋವಿಡ್‌ ಹೋರಾಟದ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಎಲ್ಲ ನೌಕರರು ಹಾಗೂ ಸಿಬ್ಬಂದಿಯ ಒಂದು ದಿನದ ವೇತನ 85 ಲಕ್ಷವನ್ನು ಪಿಎಂ ಹಾಗೂ ಸಿಎಂ ಕೇರ್‌ಗೆ ನೀಡಲಾಗಿದೆ. ಸಂಕಷ್ಟದಲ್ಲಿರುವ ವರಿಗೆ 2 ಸಾವಿರ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಕೋವಿಡ್‌ನಿಂದಾದ ಲಾಕ್‌ಡೌನ್‌ ಸಮಸ್ಯೆಯ ಪರಿಹಾರವಾಗಿ ಬ್ಯಾಂಕ್‌ ಜಾರಿಗೆ ತಂದಿರುವ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸಾಲ ಪಡೆದ ಕೃಷಿಕರಿಗೆ 50 ಕೋಟಿ ಮತ್ತು ಕೃಷಿಯೇತರ ಚಟುವಟಿಕೆಗೆ ಸಾಲ ಪಡೆದ ಗ್ರಾಹಕರಿಗೆ 10 ಕೋಟಿ ಮೊತ್ತದ ಸಾಲ ಸೌಲಭ್ಯವನ್ನು ಬ್ಯಾಂಕ್‌ ನೀಡಿದೆ. ಬ್ಯಾಂಕ್‌ ವತಿಯಿಂದ ಸಂಚಾರಿ ಎಟಿಎಂ ವ್ಯವಸ್ಥೆ ಮಾಡಲಾಗಿತ್ತು. ಬಳ್ಳಾರಿ, ಕಲಬುರ್ಗಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಜನನಿಬಿಡ ಪ್ರದೇಶಗಳಲ್ಲಿ ಸತತವಾಗಿ ಸೇವೆ ನೀಡುತ್ತಿದ್ದು, ಈ ಸೇವೆಯನ್ನು ಮುಂದುವರಿಸಿದ್ದೇವೆ ಎಂದು ಹೇಳಿದರು.

ಕೋವಿಡ್‌ ಸಂಕಷ್ಟದ ಸಮಯದಲ್ಲಿ ನಮ್ಮ ಬ್ಯಾಂಕಿನ ಪ್ರತಿನಿಧಿಗಳು ಮಾಚ್‌ರ್‍ನಿಂದ ಮೇ 2020ರ ವರೆಗೆ ಒಟ್ಟು 26 ಲಕ್ಷ ವ್ಯವಹಾರ ಮೂಲಕ 762 ಕೋಟಿ ಮೊತ್ತದ ವಹಿವಾಟನ್ನು ವೃದ್ಧಿಸಿದ್ದಾರೆ. ಇದು ಪ್ರಾಯಶಃ ರಾಷ್ಟ್ರಮಟ್ಟದಲ್ಲಿಯೇ ಅತಿ ಹೆಚ್ಚಿನದ್ದಾಗಿದೆ ಎಂದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರ್ದೇಶನದನ್ವಯ ಮಾರ್ಚ್‌ ಮತ್ತು ಆಗಸ್ಟ್‌ 2020ರ ಸಮಯದಲ್ಲಿ ಗ್ರಾಹಕರ ಸಾಲ ಖಾತೆಗಳಲ್ಲಿ ಬರಬಹುದಾದ ಕಂತುಗಳನ್ನು ಮುಂದೂಡಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ಹಾಗೂ ಮಧ್ಯಮ ಉದ್ಯಮಶೀಲರು ಪಡೆದ ಸಾಲಗಾರರಿಗೆ ಸಾಲ ಮಿತಿಯ ಶೇ. 10 ರಿಂದ 20ರ ವರೆಗೆ ಹೆಚ್ಚಿನ ತಾತ್ಕಾಲಿಕ ಸಾಲ ಮಿತಿಯ ಸೌಲಭ್ಯವನ್ನು ನೀಡಲಾಗಿದೆ ಎಂದು ವಿವರಿಸಿದರು. ಬ್ಯಾಂಕಿನ ಮಹಾಪ್ರಬಂಧಕರಾದ ರವೀಂದ್ರನಾಥ್‌, ಪ್ರದೀಪ ವರ್ಮ, ಮಂಜುನಾಥ್‌ ಸುದ್ದಿಗೋಷ್ಠಿಯಲ್ಲಿದ್ದರು.