ಬಳ್ಳಾರಿ(ಜೂ.21): ಜಿಲ್ಲೆಯಲ್ಲಿ ಶನಿವಾರ 14 ಜನರಿಗೆ ಕೊರೋನಾ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 416ಕ್ಕೆ ಏರಿಕೆಯಾಗಿದೆ. ಶನಿವಾರ ಹೊಸಪೇಟೆಯ ಆರು, ಸಂಡೂರಿನ ಐದು, ಬಳ್ಳಾರಿ, ಸಿರಗುಪ್ಪ ಹಾಗೂ ಹಗರಿಬೊಮ್ಮನಹಳ್ಳಿಯ ತಲಾ ಒಬ್ಬರಿಗೆ ಸೋಂಕು ತಗುಲಿದೆ. 

ಈ ಪೈಕಿ ಸಂಡೂರಿನ ಇಬ್ಬರು ಜಿಂದಾಲ್‌ ಸಂಪರ್ಕಿತರಾಗಿದ್ದಾರೆ. ಆರು ಜನರು ಇನ್ಫೂಲ್ಯಯೆಂಜಾ ಮಾದರಿಯ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನೂ 758 ಜನರ ಪ್ರಯೋಗಾಲಯ ವರದಿ ಬರಬೇಕಿದೆ. ಶನಿವಾರ 100 ಜನರ ಗಂಟಲು ದ್ರವದ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. 950 ಜನರು ಕ್ವಾರಂಟೈನ್‌​ನಲ್ಲಿದ್ದಾರೆ.

ಸಂಡೂರು: 4 ತಿಂಗಳ ಮಗುವನ್ನೂ ಬಿಡದ ಕ್ರೂರಿ ಕೊರೋನಾ ವೈರಸ್‌..!

ಸಿರುಗುಪ್ಪ ತಾಲೂಕಿನಲ್ಲಿ ಇಬ್ಬರಿಗೆ ಕರೊನಾ ಸೋಂಕು

ನಗರದ 10ನೇ ವಾರ್ಡಿನ 29 ವರ್ಷ ಮತ್ತು ತಾಲೂಕಿನ ಕೆ. ಬೆಳಗಲ್ಲು ಗ್ರಾಮದ 31 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ದೃಢವಾಗಿದ್ದು, ಒಟ್ಟು ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಸೋಂಕಿತರ ಮನೆ ಸೇರಿ 15 ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ತಹಸೀಲ್ದಾರ್‌ ಎಸ್‌.ಬಿ. ಕೂಡಲಗಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ನಗರದ ಫೀವರ್‌ ಕ್ಲಿನಿಕ್‌ನಲ್ಲಿ ಕಳೆದ ಮಂಗಳವಾರ ಸೋಂಕಿತರಿಂದ ಗಂಟಲು ಮತ್ತು ಮೂಗಿನ ದ್ರವವನ್ನು ತೆಗೆದು ಕೊರೋನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಶನಿವಾರ ಪಾಜಿಟಿವ್‌ ಎಂದು ವರದಿ ಬಂದಿದೆ. ತಾಲೂಕಿನ ಕೆ. ಬೆಳಗಲ್ಲು ಗ್ರಾಮದ ವ್ಯಕ್ತಿ ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿರುವ ಮಾಹಿತಿ ಇದ್ದು, ನಗರದ ಸೋಂಕಿತ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಇಬ್ಬರನ್ನು ಬಳ್ಳಾರಿಯ ಕೋವಿಡ್‌ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೆ. ಬೆಳಗಲ್ಲು ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ 13 ಜನರಿದ್ದು, ನಗರದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ 5 ಜನರಿದ್ದಾರೆ. ಅವರನ್ನೂ ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಹೇಳಿದದರು.

ಸೀಲ್‌ಡೌನ್‌ ಮಾಡಿದ ಪ್ರದೇಶದಲ್ಲಿ ಯಾರೂ ಮನೆಯಿಂದ ಹೊರಗಡೆ ಓಡಾಡಬಾರದು. 200 ಮೀಟರ್‌ ಬಫರ್‌ ಝೋನ್‌ ಎಂದು ಗುರುತಿಸಲಾಗಿದ್ದು, ಅಲ್ಲಿಯೂ ಸಾರ್ವಜನಿಕರು ಹೊರಗಡೆ ಓಡಾಡಬಾರದು ಎಂದು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು. ತಾಲೂಕು ವೈದ್ಯಾಧಿಕಾರಿ ಸುರೇಶಗೌಡ, ಪೊಲೀಸ್‌, ಆರೋಗ್ಯ ಸಿಬ್ಬಂದಿ ಹಾಗೂ ಕಂದಾಯ, ಆಶಾ, ಅಂಗನವಾಡಿ ಕಾರ್ಯಕರ್ತೆತರು ಸ್ಥಳದಲ್ಲಿದ್ದರು.