Asianet Suvarna News Asianet Suvarna News

ಬೆಂಗಳೂರಿಗೆ ಕುಡಿಯುವ ನೀರಿನ ಗ್ಯಾರಂಟಿ ಕೊಡಿ: ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹ

ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿಗೆ ಕುಡಿಯುವ ನೀರಿನ ಹಾಹಾಕಾರ ಬಂದಿದ್ದು, ಸರ್ಕಾರ ಬೆಂಗಳೂರಿಗೆ ನೀರಿನ ಗ್ಯಾರಂಟಿ ಕೊಡಲಿ ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ. 

Karnataka govt will give drinking water guarantee for Bengaluru R Ashok demand sat
Author
First Published Feb 24, 2024, 4:17 PM IST

ಬೆಂಗಳೂರು (ಫೆ.24): ಇಂಡಿಯಾ ಮೈತ್ರಿಕೂಟದ ಡಿಎಂಕೆ ಪಕ್ಷದೊಂದಿಗೆ ದೋಸ್ತಿ ಉಳಿಸಿಕೊಳ್ಳಲು ಕಾವೇರಿ ನೀರನ್ನು ಬೇಕಾಬಿಟ್ಟಿಯಾಗಿ ತಮಿಳುನಾಡಿಗೆ ಹರಿಸುವ ಮೂಲಕ,  ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿಗೆ ಕುಡಿಯುವ ನೀರಿನ ಹಾಹಾಕಾರ ತಂದಿಟ್ಟಿದೆ. 5 ಗ್ಯಾರಂಟಿಗಳನ್ನು ಕೊಟ್ಟ ಸರ್ಕಾರ ಬೆಂಗಳೂರಿಗೆ ನೀರಿನ ಗ್ಯಾರಂಟಿ ಕೊಡಲಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹ ಮಾಡಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು 'ಇನ್ನೂ ಈ ವರ್ಷದ ಬೇಸಿಗೆ ಕಾಲವೇ ಆರಂಭವಾಗಿಲ್ಲ, ಆದರೆ ಈಗಾಗಲೇ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತಮ್ಮ I.N.D.I ಮೈತ್ರಿಕೂಟದ ಡಿಎಂಕೆ ಪಕ್ಷದ ಜೊತೆ ದೋಸ್ತಿ ಉಳಿಸಿಕೊಳ್ಳಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ಕಾವೇರಿ ನೀರನ್ನ ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿದ ನಾಡದ್ರೋಹಿ ಕಾಂಗ್ರೆಸ್‌ ಸರ್ಕಾರ ಈಗ ಬೆಂಗಳೂರಿನ ಜನತೆ ಖಾಸಗಿ ಟ್ಯಾಂಕರ್ ಗಳಿಗೆ ಸಾವಿರಾರು ರೂಪಾಯಿ ತೆತ್ತುವ ಪರಿಸ್ಥಿತಿ ತಂದಿಟ್ಟಿದೆ.

ಕೆಆರ್‌ಎಸ್‌ ಡ್ಯಾಂ ಬಳಿಯ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಟ್ರಯಲ್‌ ಬ್ಲಾಸ್ಟ್‌ಗೆ ಹೈಕೋರ್ಟ್‌ ಅನುಮತಿ; ರೈತರಲ್ಲಿ ಆತಂಕ

ಬರ ಪರಿಸ್ಥಿತಿಯಿಂದ ಬೆಂಗಳೂರು ನಗರದಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಬಗ್ಗೆ ಮೊದಲೇ ಅಂದಾಜಿಸಿ ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಸಲು, ಹಳೇ ಕೊಳವೆ ಬಾವಿಗಳ ಮರುಪೂರಣ ಮಾಡಲು, ನೀರಿಗಾಗಿ ಪರ್ಯಾಯ ವ್ಯವಸ್ಥೆ ಹುಡುಕಲು ಕ್ರಮ ಕೈಗೊಂಡಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇವೆ ಎಂದು ಬಾಯಿಮಾತಿಗೆ ಘೋಷಣೆ ಮಾಡಿ ಆಡಳಿತದ ಚುಕ್ಕಾಣಿಯನ್ನು ಸಂಪೂರ್ಣವಾಗಿ ಅಧಿಕಾರಿಗಳಿಗೆ ಕೊಟ್ಟು ಕಾಂಗ್ರೆಸ್ ನಾಯಕರು ಸದಾ ತಮ್ಮ ಕುರ್ಚಿ ಉಳಿಸಿಕೊಳ್ಳಲು, ಪಕ್ಕದ ರಾಜ್ಯಗಳ ಚುನಾವಣೆ ಉಸಾಬರಿ ನೋಡಿಕೊಳ್ಳಲು ಕಾಲಹರಣ ಮಾಡುತ್ತಾ ಬೆಂಗಳೂರನ್ನ ಸಂಪೂರ್ಣವಾಗಿ ನಿರ್ಲಕ್ಷ ಮಾಡಿದ ಪರಿಣಾಮ ಇವತ್ತು ಬೆಂಗಳೂರಿನ ಜನರು ಹನಿ ನೀರಿಗೂ ಪರದಾಡುವ ದುಸ್ಥಿತಿ ಬಂದಿದೆ' ಎಂದು ಕಿಡಿ ಕಾರಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಬಂಗಾರಪ್ಪನವರ ಶಿಷ್ಯ, ಬೇಳೂರು ಗೋಪಾಲಕೃಷ್ಣ ಮಾನಸ ಪುತ್ರ: ಮಧು ಬಂಗಾರಪ್ಪ

ಮುಂದುವರೆದು, 'ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈಗಲಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ರಾಜಕಾರಣ ಬಿಟ್ಟು ಜನಕಾರಣದತ್ತ ಗಮನ ಹರಿಸಿ ಬೆಂಗಳೂರಿನ ಜನತೆಗೆ ಕನಿಷ್ಠ ಪಕ್ಷ ಕುಡಿಯುವ ನೀರಿನ ಗ್ಯಾರಂಟಿ ಆದರೂ ಕೊಡಬೇಕು' ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.

Follow Us:
Download App:
  • android
  • ios