ಬಿಪೊರ್‌ಜಾಯ್ ಭೀತಿ: ಸಮುದ್ರ ತೀರದಲ್ಲಿ ಪ್ರವಾಸಿಗರ ಸಂಚಾರ ನಿರ್ಬಂಧಿಸಿದ ಸರ್ಕಾರ
ಬಿಪೊರ್‌ಜಾಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಮುದ್ರ ತೀರದ ಬಳಿ ಪ್ರವಾಸಿಗರು ಓಡಾಟ ಮತ್ತು ಆಟವಾಡುವುದನ್ನು ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ವರದಿ- ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಜೂ.14): ಬಿಪೊರ್‌ಜಾಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಮುದ್ರ ತೀರದ ಬಳಿ ಓಡಾಟ ಮತ್ತು ಆಟವಾಡುವುದನ್ನು ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಕರಾವಳಿ ಕರ್ನಾಟಕ ಭಾಗದಲ್ಲಿ ಹೈ ವೇವ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 42 ಕಿ.ಮೀ ಸಮುದ್ರ ತೀರದಲ್ಲಿ ಅಲರ್ಟ್ ಘೋಷಿಸಲಾಗಿದೆ. ಬಿಪೊರ್‌ಜಾಯ್ ಪರಿಣಾಮ 3 ರಿಂದ 4 ಮೀಟರ್ ಎತ್ತರಲದ ಅಲೆಗಳು ಏಳುವ ಸಾಧ್ಯತೆ ಇದೆ. ಇದರಿಂದಾಗಿ ಮುಂದಿನ 5 ದಿನಗಳ ಕಾಲ ಕರಾವಳಿ ಕಡಲ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸಾರ್ವಜನಿಕರು, ಪ್ರವಾಸಿಗರು, ಮಕ್ಕಳು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಹೈ ಅಲರ್ಟ್ ಘೋಷಿಸಲಾಗಿದೆ.
ಬಿಪೊರ್‌ಜಾಯ್ ಚಂಡಮಾರುತದಿಂದ ಮುಂಗಾರು ಮಳೆ ವಿಳಂಬ: ಕರಾವಳಿಯಲ್ಲಿಯೂ ಆತಂಕ
ಕೊಚ್ಚಿಹೋದ ಗೆಸ್ಟ್‌ಹೌಸ್‌ಗಳು: ಮಂಗಳೂರಿಗೆ ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮ ತಟ್ಟಿದ್ದು, ಮಂಗಳೂರಿನಲ್ಲಿ ಅರಬ್ಬೀ ಸಮುದ್ರ ಸಂಪೂರ್ಣ ಪ್ರಕ್ಷುಬ್ಧಗೊಂಡಿದೆ. ಸೈಕ್ಲೋನ್ ನಿಂದಾಗಿ ಅಪ್ಪಳಿಸುತ್ತಿರೋ ಭಾರೀ ಗಾತ್ರದ ಅಲೆಗಳು, ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲ, ಸೋಮೇಶ್ವರ ಭಾಗದ ಕಡಲತೀರಕ್ಕೆ ಅಪ್ಪಳಿಸುತ್ತಿದೆ. ಸಮುದ್ರ ಬದಿಯ ಸಾಕಷ್ಟು ತೆಂಗಿನ ಮರಗಳು ಸಮುದ್ರಪಾಲಾಗಿದ್ದು, ಹಲವು ಮನೆಗಳು ಕುಸಿದು ಬಿದ್ದಿದೆ. ಸಮುದ್ರ ತೀರದ ಪ್ರವಾಸಿತಾಣಗಳು, ಅತಿಥಿ ವಸತಿ ಗೃಹಗಳು, ಮನೆಗಳು, ಹೋಟೆಲ್‌ಗಳು ಭಾಗಶಃ ಸಮುದ್ರ ಪಾಲಾಗಿವೆ. ಕಡಲ ತೀರದಲ್ಲಿ ಸವಕಳಿ ತಡೆಯಲು ಹಾಕಿದ್ದ ಕಲ್ಲುಗಳನ್ನ ದಾಟಿ ಸಮುದ್ರ ದಂಡೆಗೆ ಅಲೆಗಳು ಅಪ್ಪಳಿಸುತ್ತಿವೆ. ರಕ್ಕಸ ಗಾತ್ರದ ಅಲೆಗಳ ಅಬ್ಬರಕ್ಕೆ ಕಡಲ ತೀರದ ವಾಸಿಗಳಿಗೆ ಆತಂಕ ಎದುರಾಗಿದೆ.
ಜಿಲ್ಲಾಡಳಿತ ಎಚ್ಚರಿಕೆಯನ್ನೂ ಪರಿಗಣಿಸದ ಪ್ರವಾಸಿಗರು: ಉತ್ತರಕನ್ನಡ (ಜೂ.14): ಬಿಪೊರ್‌ಜಾಯ್ ಚಂಡಮಾರುತ ಪರಿಣಾಮದ ಹಿನ್ನೆಲೆಯಲ್ಲಿ ಭಟ್ಕಳದಿಂದ ಮಾಜಾಳಿಯವರೆಗಿನ ಕಡಲಿನಲ್ಲಿ ಹೆಚ್ಚಿದೆ ಅಲೆಗಳ ಅಬ್ಬರ ಶುರುವಾಗಿದೆ. ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಕಡಲಿನ ಅಬ್ಬರ, ರಾತ್ರಿ ವೇಳೆಯಂತೂ ತೀರ ಪ್ರದೇಶಗಳಿಗೆ ಅಲೆಗಳು ನುಗ್ಗುತ್ತಿವೆ. ಕಡಲಿನ ಅಬ್ಬರ ಹೆಚ್ಚಾಗಿದ್ರೂ ತಪ್ಪಿಲ್ಲ ಪ್ರವಾಸಿಗರ ಹುಚ್ಚಾಟ ಆರಂಭವಾಗಿದೆ. ಪ್ರವಾಸಿಗರಾದ ಸಂತೋಷ್ ಹಾಗೂ ಪವನ್ ನಾಯ್ಕ್ ಎಂಬ ಯುವಕರು ಮೃತರಾದರೂ ಜನರಿಗೆ ಬುದ್ಧಿ ಬಂದಿಲ್ಲ. ಗೃಹ ರಕ್ಷಕದಳ )ಹೋಂ ಗಾರ್ಡ್ಸ್), ಲೈಫ್‌ಗಾರ್ಡ್ ಹಾಗೂ ಸೆಕ್ಯೂರಿಟಿ ಗಾರ್ಡ್ಸ್ ಸ್ವಲ್ಪ ದೂರ ಹೋದರೂ ಪ್ರವಾಸಿಗರು ಮತ್ತೆ ಕಡಲಿನತ್ತ ಓಡುತ್ತಿದ್ದಾರೆ. ಬೀಚ್‌ಗಳಲ್ಲಿ ನೀರಿನಲ್ಲಿ ಕಪಲ್‌ಗಳ ಆಟ, ಕಾಲೇಜು ವಿದ್ಯಾರ್ಥಿಗಳಿಂದ ಸೆಲ್ಫಿ ಈಜು ಹೀಗೆ ಹುಚ್ಚಾಟ ಮತ್ತೆ ಆರಂಭವಾಗುತ್ತವೆ. ಈ ಬಗ್ಗೆ ಜಿಲ್ಲಾಡಳಿತ ವಾರ್ನಿಂಗ್ ನೀಡಿದ್ರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ.
ಪ್ರಯಾಣಿಕರೇ ಗಮನಿಸಿ, ಬಿಪೊರ್‌ಜಾಯ್ ಸೈಕ್ಲೋನ್‌ನಿಂದ ಜು.14, 15ರ 20ಕ್ಕೂ ಹೆಚ್ಚು ರೈಲು ಸಂಚಾರ ರದ್ದು!
ಮುಂದಿನ ಐದು ದಿನಗಳ ಕಾಲ ಮಳೆ: ರಾಜ್ಯದಲ್ಲಿ ಇಂದಿನಿಂದ 5 ದಿನಗಳ ಕಾಲ ರಾಜ್ಯದಲ್ಲಿ ಮಳೆ ಆರ್ಭಟಿಸಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಆರ್ಭಟಿಸಲಿದ್ದಾನೆ. ಉತ್ತರ ಒಳನಾಡಿನಲ್ಲಿ ಇವತ್ತಿನಿಂದ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೆಲವು ಕಡೆ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಹಲವು ಕಡೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಕರಾವಳಿ, ಒಳನಾಡಿನ ಕೆಲವು ಕಡೆ ಗಾಳಿಯ ವೇಗವು ಘಂಟೆಗೆ 40-50 ಕಿ.ಮೀ ತಲುಪುವ ಸಾಧ್ಯತೆಯಿದೆ. ಮೀನುಗಾರರಿಗೆ ಈಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿಮೀ ನಿಂದ 55 ಕಿಮೀ ವೇಗದಲ್ಲಿ ಬೀಸಲಿದೆ. ಇದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.