ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಬಿ-ಖಾತಾ ಗೊಂದಲಕ್ಕೆ ತೆರೆ ಎಳೆಯಲು ಬಿ-ಖಾತಾ ನಿವೇಶನಗಳಿಗೆ ಎ-ಖಾತಾ ನೀಡುವ ಕುರಿತು ಜು. 17ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

 ಬೆಂಗಳೂರು : ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಬಿ-ಖಾತಾ ಗೊಂದಲಕ್ಕೆ ತೆರೆ ಎಳೆಯಲು ಬಿ-ಖಾತಾ ನಿವೇಶನಗಳಿಗೆ ಎ-ಖಾತಾ ನೀಡುವ ಕುರಿತು ಜು. 17ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಅದರಂತೆ 2024ರ ಸೆ.30 ರವರೆಗೆ ಬಿಬಿಎಂಪಿ ನೀಡಿರುವ ಬಿ-ಖಾತಾಗಳಿಗೆ ಎ-ಖಾತಾ ಅಥವಾ ಅಧಿಕೃತ ಖಾತಾ ನೀಡುವ ಕುರಿತು ಆದೇಶದಲ್ಲಿ ತಿಳಿಸಲಾಗಿದೆ.

ಹಲವು ವರ್ಷಗಳಿಂದ ಕಾನೂನು ಮಾನ್ಯತೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ ಬಿ-ಖಾತಾದಾರರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಬಿ ಖಾತಾಗಳನ್ನು ಎ-ಖಾತಾ ಎಂದು ಪರಿಗಣಿಸಲು ನಿರ್ಧರಿಸಿದೆ. ಈ ಕುರಿತು ಕಳೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಬಿ-ಖಾತಾಗಳಿಗೆ ಎ-ಖಾತಾ ಅಥವಾ ಸರಿಯಾದ ಖಾತಾ (ಕಾನೂನು ಬದ್ಧ) ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಇದೀಗ 2024ರ ಸೆ. 30ಕ್ಕಿಂತ ಮುಂಚಿತವಾಗಿ ಬಿ-ಖಾತಾ ಅಡಿಯಲ್ಲಿ ನಿರ್ಮಿಸಲಾದ ಕಟ್ಟಡಗಳಿಗೆ ಎ-ಖಾತಾ ಅಥವಾ ಬಿ-ಖಾತಾವನ್ನೇ ಸಕ್ರಮ ಖಾತಾ ಎಂದು ಪರಿಗಣಿಸುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಕ್ರಮಬದ್ಧವಲ್ಲದ ನಿವೇಶನ ಅಥವಾ ಆಸ್ತಿಗಳಿಗೆ ಬಿಬಿಎಂಪಿಯು 2009 ರಿಂದ 2024ರ ಸೆ. 30ರವರೆಗೆ ಬಿ-ಖಾತಾ ನೀಡಲಾಗಿದೆ. ಹೀಗೆ ಬಿ-ಖಾತಾ ಇದ್ದಂತಹ ಆಸ್ತಿಗಳು ಕಟ್ಟಡ ನಕ್ಷೆ ಪಡೆಯದಿರುವುದು ಸೇರಿದಂತೆ ಮತ್ತಿತರ ಕಾನೂನು ಉಲ್ಲಂಘನೆ ಮಾಡಿವೆ. ಅದರ ಜತೆಗೆ ಬಿ-ಖಾತಾ ಆಸ್ತಿ ಮಾಲೀಕರು ಕೂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೆಲ್ಲವನ್ನು ಮನಗಂಡು ಬಿ-ಖಾತಾ ಆಸ್ತಿಗಳಲ್ಲಿನ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಅನುಮೋದನೆ, ಓಸಿ ಹಾಗೂ ಸಿಸಿ ನೀಡುವುದು ಸೇರಿದಂತೆ ಎಲ್ಲ ಕಾನೂನು ಉದ್ದೇಶಕ್ಕೆ ಬಿ-ಖಾತಾಗಳನ್ನು ಅಧಿಕೃತ ಎ-ಖಾತಾ ಎಂದು ಪರಿಗಣಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರದ ಆದೇಶದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2009ಕ್ಕಿಂತ ಹಿಂದೆ ನೀಡಿರುವ ಎಲ್ಲ ಖಾತಾಗಳೂ ಎ-ಖಾತಾ ಅಥವಾ ಸಕ್ರಮ ಖಾತಾ ಎಂದು ತೀರ್ಮಾನಿಸಲಾಗಿದೆ. ಅದರೊಂದಿಗೆ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬದಲಾವಣೆಗೊಂಡ ಯಾವುದೇ ವಿಸ್ತೀರ್ಣದ ಭೂಮಿಗೆ ಮತ್ತು ಅಭಿವೃದ್ಧಿ ಶುಲ್ಕವನ್ನು ಪಾವತಿಸಿದ ಜಾಗದ ಬಿ-ಖಾತಾ ಆಸ್ತಗಳಿಗೆ ಎ-ಖಾತಾ ನೀಡಲಾಗುತ್ತದೆ. ಖಾಸಗಿ ರಸ್ತೆಗಳು ಮತ್ತು ಬೀದಿಗಳನ್ನು ಸಾರ್ವಜನಿಕ ರಸ್ತೆ ಅಥವಾ ಬೀದಿಗಳೆಂದು ಘೋಷಿಸಿದ್ದರೆ ಅವುಗಳಿಗೆ ಎ-ಖಾತಾ ನೀಡಬಹುದು ಎಂದು ಹೇಳಲಾಗಿದೆ. ಅದರೊಂದಿಗೆ, 2.5 ಎಕರೆ ವಿಸ್ತೀರ್ಣದ ಏಕ ನಿವೇಶನಗಳಿಗೆ ಅನುಮತಿ ನೀಡುವ ಅಧಿಕಾರವನ್ನು ಬಿಬಿಎಂಪಿಗೆ ನೀಡಲಾಗಿದೆ.

ಅದರ ಜತೆಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಆಡಳಿತ ಕಾಯ್ದೆ 2024ರ ಅಡಿಯಲ್ಲಿ ರಚಿಸುವ ಎಲ್ಲ ಹೊಸ ಮಹಾನಗರ ಪಾಲಿಕೆಗಳಿಗೆ ಮತ್ತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಈ ಆದೇಶ ಅನ್ವಯವಾಗಲಿದೆ ಎಂದೂ ತಿಳಿಸಲಾಗಿದೆ.