ಮೈಸೂರು (ನ.13):  ಬೃಹತ್‌ ಮೈಸೂರು ನಗರ ಪಾಲಿಕೆ ನಿರ್ಮಾಣ ಸಂಬಂಧ ಜನಪ್ರತಿನಿಧಿಗಳ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿರುವಾಗಲೇ ರಾಜ್ಯ ಸರ್ಕಾರ ದೀಪಾವಳಿ ಉಡುಗೊರೆಯಾಗಿ ನಗರದ ಸಮೀಪದಲ್ಲಿರುವ ಪ್ರಮುಖ ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿ ಮತ್ತು ನಗರಸಭೆಯನ್ನಾಗಿ ಪರಿವರ್ತಿಸಿ ಮೇಲ್ದರ್ಜೆಗೇರಿಸಿದೆ.

ನಂಜನಗೂಡನ್ನು ಮೈಸೂರಿನ ಉಪನಗರವಾಗಿ ಅಭಿವೃದ್ಧಿಪಡಿಸಬೇಕು, ಮೈಸೂರು ನಗರದ ಸುತ್ತಲಿನ ಗ್ರಾಪಂಗಳನ್ನು ಸೇರಿಸಿ ಬೃಹತ್‌ ಮೈಸೂರು ನಗರ ಪಾಲಿಕೆಯಾಗಿ ಪರಿವರ್ತಿಸಬೇಕು ಎಂಬೆಲ್ಲ ಯೋಜನೆಗಳು ದಶಕದಷ್ಟುಹಳೆಯಾದಾಗಿ ಜನರ ಮನಸ್ಸಿನಿಂದ ಮಾಸುತ್ತಿರುವಾಗಲೇ, ಸಂಸದ ಪ್ರತಾಪ ಸಿಂಹ, ಶಾಸಕ ಜಿ.ಟಿ. ದೇವೇಗೌಡರ ಒತ್ತಾಸೆಯಂತೆ ಬೃಹತ್‌ ಮೈಸೂರು ನಗರ ಪಾಲಿಕೆ ಆಯೋಜನೆ ಮರುಹುಟ್ಟು ಪಡೆದಿತ್ತು. ನಗರ ಪಾಲಿಕೆಯ ಸಭೆಯಲ್ಲಿ ಇದಕ್ಕೆ ಯಾವುದೇ ಮನ್ನಣೆ ದೊರೆಯದ ಹಿನ್ನೆಲೆಯಲ್ಲಿ ಪುರಪಿತೃಗಳು ಮತ್ತು ಶಾಸಕರ ನಡುವೆ ಅಸಮಾಧಾನ ಹೊಗೆಯಾಡಿತ್ತು.

'ಸೌಮ್ಯಾ ರೆಡ್ಡಿ ಡಿಕೆಶಿಯೇ ಸಿಎಂ ಅಂತಿದ್ದಾರೆ-ಕುಸುಮಾ ಸೋಲಿಸಿದ್ದೆ ಸಿದ್ದರಾಮಯ್ಯ' .

ಆದರೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಸೂರು ನಗರದ ಅಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರವು ಬೋಗಾದಿ, ಶ್ರೀರಾಂಪುರ, ಕಡಕೊಳ ಮತ್ತು ರಮ್ಮನಹಳ್ಳಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಿದೆ. ಅಂತೆಯೇ ವರ್ತುಲ ರಸ್ತೆಯ ಒಳಗಿರುವ ಹಿನಕಲ್‌, ಹೊರಗಿರುವ ಕೂರ್ಗಳ್ಳಿ, ಬೆಳವಾಡಿ ಮತ್ತು ಹೂಟಗಳ್ಳಿಯನ್ನು ಸೇರಿಸಿ ನಗರಸಭೆಯನ್ನಾಗಿ ಪರಿವರ್ತಿಸಲು ಅನುಮತಿ ನೀಡಿದೆ. ಆ ಮೂಲಕ ನಗರ ಪಾಲಿಕೆ ವ್ಯಾಪ್ತಿಗೆ ಒಳಪಡಲು ಇದ್ದ ಅಡೆತಡೆಯನ್ನು ನಿವಾರಿಸಿದೆ.

ಬೆಂಗಳೂರಿನಲ್ಲಿ ಬ್ಯಾಟರಾಯನಪುರ, ಯಲಹಂಕ, ಕೆಂಗೇರಿ, ಬಿಡದಿ ಮುಂತಾದ ಕಡೆ ನಗರಸಭೆ ಅಸ್ತಿತ್ವದಲ್ಲಿರುವಂತೆಯೇ ಮೈಸೂರಿನ ಹೂಟಗಳ್ಳಿಯನ್ನು ಕೇಂದ್ರವಾಗಿಸಿ ನಗರಸಭೆ ರಚಿಸಿ, ಪ್ರಮುಖ ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಯನ್ನಾಗಿಸಿದೆ. ಆದರೆ ರಿಂಗ್‌ ರಸ್ತೆ ಒಳಗೇ ಬರುವ ಚಾಮುಂಡಿಬೆಟ್ಟಮತ್ತು ಆಲನಹಳ್ಳಿ ಗ್ರಾಪಂಗಳನ್ನು ಹಾಗೆಯೇ ಬಿಡಲಾಗಿದೆ. ಈ ಸ್ಥಳೀಯ ಸಂಸ್ಥೆಗಳ ಮೂಲಕ ಆದಾಯ ಹೆಚ್ಚಾದಂತೆ ಮೈಸೂರು ನಗರಪಾಲಿಕೆಯನ್ನು ಬೃಹತ್‌ ನಗರ ಪಾಲಿಕೆಯಾಗಿ ಪರಿವರ್ತಿಸಿ ಎಲ್ಲವನ್ನೂ ಇದರ ತೆಕ್ಕೆಗೆ ಸೇರಿಸುವ ಉದ್ದೇಶ ಇರಬಹುದು.

ಉಪಯೋಗವೇನು?  ಈವರೆಗೆ ಗ್ರಾಪಂಗಳಾಗಿದ್ದ ಬೋಗಾದಿ, ಶ್ರೀರಾಪುಂರ, ಕಡಕೊಳ, ರಮ್ಮನಹಳ್ಳಿ, ಹಿನಕಲ್‌, ಕೂರ್ಗಳ್ಳಿಯಲ್ಲಿ ಆದಾಯದ ಹೆಚ್ಚಲಿದೆ. ಗ್ರಾಪಂ ವಿಧಿಸುವ ತೆರಿಗೆಗೂ, ಪಟ್ಟಣ ಪಂಚಾಯಿತಿ ಮತ್ತು ನಗರಸಭೆ ವಿಧಿಸುವ ತೆರಿಗೆಗೂ ಸಾಕಷ್ಟುವ್ಯತ್ಯಸವಿರುತ್ತದೆ. ಜೊತೆಗೆ ಎಲ್ಲಾ ರೀತಿಯ ಮೂಲಸೌಲಭ್ಯದ ಅಭಿವೃದ್ಧಿಗೆ ಈ ಆದಾಯ ನೆರವಾಗಲಿದೆ. ಪಟ್ಟಣ ಪಂಚಾಯಿತಿ ಮತ್ತು ನಗರಸಭೆಗೆ ನೇರವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಬಹುದು. ವಾರ್ಡ್‌ಗಳ ವಿಸ್ತರಣೆ, ಸ್ಥಳೀಯ ಸಂಸ್ಥೆ ನಿರ್ಮಾಣವಾಗುತ್ತದೆ.

ಈ ಗ್ರಾಮಗಳನ್ನು ಪಟ್ಟಣ ಪಂಚಾಯಿತಿ ಮತ್ತು ನಗರಸಭೆಯನ್ನಾಗಿ ಪರಿವರ್ತಿಸಿದ ಹಿನ್ನೆಲೆಯಲ್ಲಿ ಮತ್ತು ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರನ್ನು ಮೈಸೂರು ಕೊಡಗು ಲೋಕಸಭಾ ಸದಸ್ಯ ಪ್ರತಾಪಸಿಂಹ ಮತ್ತು ಶಾಸಕ ಜಿ.ಟಿ. ದೇವೇಗೌಡ ಅಭಿನಂದಿಸಿದರು.