'ಸೌಮ್ಯಾ ರೆಡ್ಡಿ ಡಿಕೆಶಿಯೇ ಸಿಎಂ ಅಂತಿದ್ದಾರೆ-ಕುಸುಮಾ ಸೋಲಿಸಿದ್ದೆ ಸಿದ್ದರಾಮಯ್ಯ'
ರಾಜ್ಯದಲ್ಲಿ ಉಪ ಚನಾವಣೆ ಮುಕ್ತಾಯವಾಗಿದ್ದೆ ವಿವಿಧ ರೀತಿಯ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಹೊಸ ಹೊಸ ಹೇಳಿಕೆಗಳು ಕೇಳಿ ಬರುತ್ತಿವೆ.
ಉಡುಪಿ (ನ.13): ಉಪಚುನಾವಣೆಯಲ್ಲಿ ಬಿಜೆಪಿ ಎರಡೂ ಕ್ಷೇತ್ರಗಳನ್ನು ಗೆದ್ದಿದೆ. ಇನ್ನೂ ಎರಡು ವಿಧಾನಸಭೆ, ಒಂದು ಲೋಕಸಭಾ ಉಪಚುನಾವಣೆ ನಡೆಯಲಿವೆ. ಅವುಗಳನ್ನೂ ನೂರಕ್ಕೆ ನೂರು ಬಿಜೆಪಿ ಗೆಲ್ಲುತ್ತದೆ. ಪಂಚಾಯಿತಿ ಚುನಾವಣೆಗಳಲ್ಲೂ ಬಿಜೆಪಿ ಶೇ.80 ಗೆಲುವು ಸಾಧಿಸುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 30ಕ್ಕಿಂತ ಹೆಚ್ಚು ಸೀಟು ಗೆಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.
ಮದುವೆ ನಿಶ್ಚಿತಾರ್ಥಕ್ಕೂ ಮೊದಲೇ ಕಾಂಗ್ರೆಸಿನವರು ಮಗುವಿಗೆ ನಾಮಕರಣ ಮಾಡಲು ಸಿದ್ಧರಾಗಿದ್ದಾರೆ. ಸಿದ್ರಾಮಣ್ಣ ನಾನೇ ಮುಖ್ಯಮಂತ್ರಿ ಅಂತಿದ್ದಾರೆ, ಸಿದ್ದರಾಮಯ್ಯನೇ ಮುಖ್ಯಮಂತ್ರಿ ಅಂತ ಜಮೀರ್ ಅಹ್ಮದ್ ಹೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅಂತ ಸೌಮ್ಯ ರೆಡ್ಡಿ ಹೇಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಂಗೀತ ಕುರ್ಚಿ ಸ್ಪರ್ಧೆ ಆರಂಭವಾಗಿದೆ ಎಂದು ಟೀಕಿಸಿದರು.
'ಮುನಿರತ್ನ ಗೆಲುವಿಗೆ ಸಿದ್ದರಾಮಯ್ಯ-ರಾಜೇಶ್ ಗೆಲುವಿಗೆ ಡಿಕೆಶಿ ಕಾರಣ' .
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಬಿಜೆಪಿ ಬೆಂಬಲಿಸುತ್ತದೆ, ಅವರಿಗೆ ಬಿಜೆಪಿ ಸರ್ಕಾರ ನ್ಯಾಯ ಕೊಡಿಸುತ್ತದೆ. ಅವರ ಮನೆ ಮೇಲೆ ದಾಳಿ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡ ಇರುವುದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟವಾಗಿದೆ ಎಂದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರೇ ಕಾರಣ. ಆರ್.ಆರ್.ನಗರದಲ್ಲಿ ಕಾಂಗ್ರೆಸನ್ನು ಸೋಲಿಸಿದ್ದು ಸಿದ್ದರಾಮಯ್ಯ. ಶಿರಾ ಕ್ಷೇತ್ರದಲ್ಲಿ ಸೋಲಿಸಿದ್ದು ಡಿ.ಕೆ.ಶಿವಕುಮಾರ್, ಈ ವಿಷಯ ಕಾಂಗ್ರೆಸ್ ಕಾರ್ಯಕರ್ತರಿಗೆ ಗೊತ್ತಾಗಿ ಅಸಮಾಧಾನ ಭುಗಿಲೆದ್ದಿದೆ ಎಂದು ಹೇಳಿದರು.