ಕಡೂರು [ಜ.19]:  ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಆರ್ಯವೈಶ್ಯ ಮಹಾಸಭಾ ಕಾರ್ಯನಿರ್ವಹಿಸುವ ಮೂಲಕ ರಾಜ್ಯದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 4.20 ಕೋಟಿ ರು. ವೆಚ್ಚದಲ್ಲಿ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಆರ್ಯವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷ ಆರ್‌.ಪಿ. ರವಿಶಂಕರ್‌ ಹೇಳಿದರು.

ಪಟ್ಟಣದ ಲಕ್ಷ್ಮೇಶ ನಗರದ ಎಪಿಎಂಸಿ ಮಾಜಿ ನಿರ್ದೇಶಕ ಬಿ.ಎಸ್‌. ಸತೀಶ್‌ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಆರ್ಯವೈಶ್ಯ ಸಮುದಾಯವನ್ನು ಶ್ರೀಮಂತ ವರ್ಗ ಎಂದು ಪರಿಗಣಿಸಿದ್ದರೂ ಸಮಾಜದಲ್ಲಿರುವ ಅಶಕ್ತರ ಜೊತೆ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸರ್ಕಾರದ ನೆರವು ಕಾಯದೇ 200 ವಿದ್ಯಾರ್ಥಿಗಳಿಗೆ ಉಪ ಮುಖ್ಯಮಂತ್ರಿ ಸತ್ಯನಾರಾಯಣ ಅವರಿಂದ 4.20 ಕೋಟಿ ರು. ವೆಚ್ಚದ ಲ್ಯಾಪ್‌ ಟಾಪ್‌ಗಳನ್ನು ವಿತರಿಸಲಾಗುತ್ತದೆ ಎಂದರು.

ಶೈಲಪುತ್ರಿ ಯೋಜನೆಯಲ್ಲಿ ಸಮಾಜದ ವ್ಯಾಪಾರಸ್ಥರಿಗೆ ಬಡ್ಡಿರಹಿತ ಸಾಲ ನೀಡುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ. ವಿದ್ಯಾರ್ಥಿ ಪುತ್ರಿ ಯೋಜನೆಯಲ್ಲಿ ರಾಜ್ಯದ 171 ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಅವರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ಈ ನಿಟ್ಟಿನಲ್ಲಿ ಬಿ.ಎಸ್‌.ಸತೀಶ್‌ ಅವರು ತಮ್ಮ ತಂದೆ- ತಾಯಿ ಹೆಸರಲ್ಲಿ ಪ್ರತಿ ವರ್ಷ ಕಡೂರಿನ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ನಿರ್ಧಾರವು ಶ್ಲಾಘನೀಯ ಎಂದರು.

ರಾಜ್ಯದ 1.1 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌..

ಅಮರ ಜ್ಯೋತಿ ಯೋಜನೆಯಲ್ಲಿ ಸಮಾಜದ ಬಂಧುಗಳ ಕುಟುಂಬಗಳು ಅಪಘಾತ ಮತ್ತಿತರೆ ಅಪಾಯಗಳಿಗೆ ತುತ್ತಾದರೆ ಆಸರೆ ನೀಡುವ ಯೋಜನೆಯಾಗಿದೆ. ಈಗಾಗಲೇ ರಾಜ್ಯದ ಮೂರು ಕುಟುಂಬಗಳಿಗೆ ತಲಾ 5 ಲಕ್ಷ ರು. ಪರಿಹಾರ ಕಲ್ಪಿಸಲಾಗಿದೆ. ಸಮಾಜದ 65 ವರ್ಷದ ವೃದ್ಧರಿಗೆ ಮಹಾಸಭಾದಿಂದ ಪ್ರತಿ ತಿಂಗಳು ವೃದ್ಧಾಪ್ಯ ವೇತನ ನೀಡುವ ಮಹತ್ವಾಕಾಂಕ್ಷಿ ಸಂಧ್ಯಾಶ್ರೀ ಯೋಜನೆಗೆ ಸರ್ಕಾರದ ಉಪಮುಖ್ಯಮಂತ್ರಿ ಅವರು ಚಾಲನೆ ನೀಡಲಿದ್ದಾರೆ. ಈಗಾಗಲೇ 247 ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದರು.

ಮಹಾಸಭಾ ಆರಂಭವಾಗಿ 43 ವರ್ಷಗಳ ಇತಿಹಾಸದಲ್ಲಿ ಪದಾಧಿಕಾರಿಗಳನ್ನು ಚುನಾವಣೆ ನಡೆಸದೇ ಅವಿರೋಧ ಆಯ್ಕೆ ಮೂಲಕ ಗೊಂದಲಕ್ಕೆ ಅವಕಾಶ ನೀಡದೇ ಸೇವೆಗೆ ಸಾಕ್ಷಿಯಾಗಿದೆ. ಸಹೋದರ ಸಮಾಜಗಳೊಂದಿಗೆ ಪ್ರೀತಿ- ವಿಶ್ವಾಸಗಳಿಂದ ಬೆರೆತು, ಪರಸ್ಪರ ಸಹಕಾರ ನೆರವಿನ ಕಾರ್ಯಗಳನ್ನು ಮಾಡಿದಲ್ಲಿ ಎಲ್ಲ ಸಮಾಜಗಳು ಮುಂದೆ ಬರಲು ಸಾಧ್ಯ ಎಂದರು.

ಮಹಾಸಭಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಕಡೂರಿನ ಆರ್ಯವೈಶ್ಯ ಸಮಾಜದ ಮುಖಂಡರಾದ ಸತೀಶ್‌, ಹರೀಶ್‌, ಸುಧೀರ್‌, ಉಪೇಂದ್ರನಾಥ್‌, ಸುರೇಶ್‌, ಶಿರಹಟ್ಟಿಮತ್ತಿತರರು ಉಪಸ್ಥಿತರಿದ್ದರು.