ಡಿಕೆಶಿ ನಾಡಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್ ನಾಡಿಗೆ ಕರ್ನಾಟಕ ಸರ್ಕಾರ ದೊಡ್ಡ ಕೊಡುಗೆಯೊಂದನ್ನು ನೀಡುತ್ತಿದೆ.
ಎಂ.ಅಫ್ರೋಜ್ ಖಾನ್
ರಾಮನಗರ [ಫೆ.08]: ವಿಶ್ವ ಪ್ರಸಿದ್ಧ ಕೈಗಾರಿಕಾ ಪ್ರದೇಶವನ್ನು ಹೊಂದಿರುವ ಬಿಡದಿ ಹೋಬಳಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ರಚನೆ ಮಾಡಲಾಗಿದ್ದ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ (ಜಿಬಿ-ಬಿಎಸ್ಸಿಪಿಎ)ಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸುವ ಮೂಲಕ ರಾಜ್ಯ ಸರ್ಕಾರ ಮರುಜೀವ ನೀಡಿದೆ.
ಈವರೆಗೆ ಯೋಜನಾ ಪ್ರಾಧಿಕಾರಕ್ಕೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಹಾನಗರ ಆಯುಕ್ತರು ಅಧ್ಯಕ್ಷರಾಗಿ ಹಾಗೂ ಮಹಾನಗರ ಯೋಜಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೀಗ ರಾಜ್ಯ ಸರ್ಕಾರವೇ ಪ್ರಾಧಿಕಾರಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಪ್ರಾಧಿಕಾರದ ಮೊದಲ ಅಧ್ಯಕ್ಷರನ್ನಾಗಿ ಬಿಜೆಪಿ ಯುವ ಘಟಕ ಜಿಲ್ಲಾಧ್ಯಕ್ಷ ವರದರಾಜುಗೌಡ (ಬಾಬು) ಹಾಗೂ ಸದಸ್ಯರನ್ನಾಗಿ ಬೈರಮಂಗಲ ಗ್ರಾಮದ ಮುತ್ತುರಾಜು, ಹೊಸೂರು ಗ್ರಾಮದ ಎಚ್.ಪ್ರಕಾಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಪ್ರಾಧಿಕಾರ ರಚನೆ ಯಾವಾಗ?
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬಿಡದಿ ಪಟ್ಟಣವನ್ನು ಬೆಂಗಳೂರು ನಗರದ ಸ್ಯಾಟ್ಲೈಟ್ ಸಿಟಿಯನ್ನಾಗಿ ರೂಪಿಸುವ ಚಿಂತನೆ ನಡೆಸಿದ್ದರು. ಮೊದಲು ಬಿಡದಿ ಪ್ರದೇಶ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿ.ಎಂ.ಆರ್.ಡಿ.ಎ) ವ್ಯಾಪ್ತಿಯಲ್ಲಿತ್ತು. 2015ರಲ್ಲಿ ಬಿಡದಿ ಗ್ರಾಮ ಪಂಚಾಯಿತಿ ಉನ್ನತೀಕರಣಗೊಂಡು ಪುರಸಭೆಯಾಯಿತು.
ಆನಂತರ ರಾಜ್ಯ ಸರ್ಕಾರ 2016ರ ಅಕ್ಟೋಬರ್ 21ರಂದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಎ)(1)ರನ್ವಯ ರಾಮನಗರ ಜಿಲ್ಲೆಯ ಬಿಡದಿ ಮತ್ತು ಸುತ್ತಮುತ್ತಲಿನ 38 ಗ್ರಾಮಗಳನ್ನು ಒಳಗೊಂಡಂತೆ ಗ್ರೇಟರ್ ಬೆಂಗಳೂರು- ಬಿಡದಿ ಸ್ಮಾರ್ಟ್ ಸಿಟಿ ಸ್ಥಳೀಯ ಯೋಜನಾ ಪ್ರದೇಶವನ್ನು ಘೋಷಿಸಿತು.
ಮಗನ ಮದುವೆ ಪ್ಲಾನ್ ಬಗ್ಗೆ ಹೇಳಿದ್ರು ಶಾಸಕಿ ಅನಿತಾ ಕುಮಾರಸ್ವಾಮಿ...
ರಾಮನಗರ ತಾಲೂಕಿನ ಕಸಬಾ ಹೋಬಳಿಯ 8 ಗ್ರಾಮ, ಬಿಡದಿ ಹೋಬಳಿಯ 26 ಗ್ರಾಮ, ಕೈಲಾಂಚ ಹೋಬಳಿಯ 3 ಹಾಗೂ ಕನಕಪುರ ತಾಲೂಕು ಹಾರೋಹಳ್ಳಿ ಹೋಬಳಿಯ 1 ಗ್ರಾಮ ಸೇರಿದಂತೆ ಒಟ್ಟಾರೆ 38 ಗ್ರಾಮಗಳ 14153.97 ಹೆಕ್ಟೇರ್ ವಿಸ್ತೀರ್ಣವನ್ನು ಯೋಜನಾ ಪ್ರದೇಶದ ವ್ಯಾಪ್ತಿಗೆ ತರಲಾಯಿತು.
ಈ ಪ್ರದೇಶದ ವ್ಯಾಪ್ತಿಯಲ್ಲಿನ ಅಭಿವೃದ್ಧಿಗಳನ್ನು ನಿಯಂತ್ರಿಸಲು ಮತ್ತು ಮಹಾಯೋಜನೆ ತಯಾರಿಸಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4 (ಸಿ)(1)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಗ್ರೇಟರ್ ಬೆಂಗಳೂರು- ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ರಚಿಸಿ ಆದೇಶಿಸಲಾಗಿತ್ತು.
ಜೋಡೆತ್ತುಗಳ ಕೋಟೆಯಲ್ಲಿ ಯೋಗೇಶ್ವರ್ ತಂತ್ರ !...
ಪ್ರಾಧಿಕಾರಕ್ಕೆ ಕಾಯ್ದೆ 1961ರ ಕಲಂ 4(ಸಿ)(3)(ಐ)ರನ್ವಯ ಮಹಾನಗರ ಆಯುಕ್ತರನ್ನು ಅಧ್ಯಕ್ಷರನ್ನಾಗಿ ಮತ್ತು ಮಹಾನಗರ ಯೋಜಕರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗತ್ತಿತ್ತು. ಆದರೀಗ ರಾಜ್ಯ ಸರ್ಕಾರ ಅದೇ ಅಧಿಕಾರ ಚಲಾಯಿಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿದೆ.
ಮಹಾ ಯೋಜನೆಯಲ್ಲಿ ಮೀಸಲಿಟ್ಟಉದ್ದೇಶವನ್ನು ಹೊರತು ಪಡಿಸಿ ಅನ್ಯ ಉದ್ದೇಶಕ್ಕೆ ತಮ್ಮ ಜಮೀನನ್ನು ಅಭಿವೃದ್ಧಿ ಪಡಿಸಲು ಇಚ್ಛಿಸುವ ಭೂ ಮಾಲೀಕರು ಅಥವಾ ಜಮೀನಿನ ಕಾನೂನು ಬದ್ಧ ಮಾಲೀಕರು ಸಂಬಂಧಪಟ್ಟದಾಖಲಾತಿಗಳೊಂದಿಗೆ ಪ್ರಾಧಿಕಾರದ ಅನುಮೋದನೆ ಕೋರಿ ಅರ್ಜಿ ಸಲ್ಲಿಸಬೇಕು.
ಪ್ರಾಧಿಕಾರದ ಸಭೆಯಲ್ಲಿ ಪರಿಗಣಿಸಲಾದ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಗಳನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮೂಲಕ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗುತ್ತದೆ. ಪ್ರಾಧಿಕಾರದ ತಾಂತ್ರಿಕ ಅಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರವು ಪರಿಶೀಲಿಸಿ ಪ್ರಸ್ತಾವನೆಯನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ಆದೇಶ ಹೊರಡಿಸುತ್ತದೆ.
ಬಿಡದಿ ವ್ಯಾಪ್ತಿಯಲ್ಲಿನ ಪ್ರದೇಶದ ಅಭಿವೃದ್ಧಿಯ ಉದ್ದೇಶದಿಂದ ಪ್ರಾಧಿಕಾರಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಿರುವ ರಾಜ್ಯ ಸರ್ಕಾರ ಪ್ರಾಧಿಕಾರಕ್ಕೆ ಆರ್ಥಿಕ ಶಕ್ತಿ ತುಂಬಲು ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಯೋಜನಾ ಪ್ರದೇಶದಲ್ಲಿ ಸೇರಿಸಲ್ಪಟ್ಟಹೋಬಳಿ ಮತ್ತು ಗ್ರಾಮಗಳ ವಿವರ :
1. ರಾಮನಗರ ತಾಲೂಕು ಕಸಬಾ ಹೋಬಳಿಯ ಹಾಗಲಹಳ್ಳಿ, ಬಳಗುಳಿ, ಧಾರಾಪುರ, ಕೆಂಪನಹಳ್ಳಿ, ಕೇತೋಹಳ್ಳಿ, ಮಾದಾಪುರ, ಮಾಯಗಾನಹಳ್ಳಿ, ಬಸವನಪುರ.
2. ರಾಮನಗರ ತಾಲೂಕು ಬಿಡದಿ ಹೋಬಳಿಯ ಅಬ್ಬನಕುಪ್ಪೆ, ಅಳ್ಳಾಳಸಂದ್ರ, ಬನ್ನಿಗೆರೆ, ಬಿಡದಿ, ಬಲೆವೀರನಹಳ್ಳಿ, ಬೋರೆಹಳ್ಳಿ, ಬೈರಮಂಗಲ, ಗಾಣಕಲ್ಲು, ಗೊಲ್ಲರಪಾಳ್ಯ, ಗೋಪಹಳ್ಳಿ, ಹೆಜ್ಜಾಲ, ಹೊಸೂರು, ಹುಲ್ತೂರು ರಾಜ್ಯ ಅರಣ್ಯ ವಲಯ, ಇಟ್ಟಮಡು, ಕಾಕರಾಮನಹಳ್ಳಿ, ಕಲ್ಲುಗೋಪನಹಳ್ಳಿ, ಕಂಚುಗಾರನಹಳ್ಳಿ, ಕಂಚುಗಾರನಹಳ್ಳಿ ಕಾವಲ್, ಕೆಂಪದ್ಯಾಪನಹಳ್ಳಿ, ಕೆಂಪಯ್ಯನಪಾಳ್ಯ, ಕೆಂಚನಕುಪ್ಪೆ, ಮಂಡಲಹಳ್ಳಿ, ಮುದ್ದಾಪುರಕರೇನಹಳ್ಳಿ, ರಾಮನಹಳ್ಳಿ, ಐವಾಗಿಲು,ಯೆರೆಪಾಳ್ಯ.
3. ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಅಣ್ಣಹಳ್ಳಿ, ಬೆಣ್ಣಹಳ್ಳಿ, ಮಂಚೇಗೌಡನಪಾಳ್ಯ.
4. ಕನಕಪುರ ತಾಲೂಕು ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ (ಭಾಗಶಃ).
ಗ್ರೇಟರ್ ಬೆಂಗಳೂರು -ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಮೊದಲ ಅಧ್ಯಕ್ಷನನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿರುವುದು ಖುಷಿ ತಂದಿದೆ. ಹಿರಿಯರ ಮಾರ್ಗದರ್ಶನ ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಬಿಡದಿಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ರೂಪಿಸಲಾಗುವುದು.
- ವರದರಾಜುಗೌಡ, ಅಧ್ಯಕ್ಷ, ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ.