ಸು.ನಾ.ನಂದಕುಮಾರ್‌

ಚನ್ನಪಟ್ಟಣ [ಫೆ.08]:  ಜೋಡೆತ್ತುಗಳ ಕೋಟೆಯಲ್ಲಿ ಕೇಸರಿ ಪಡೆ ಕಟ್ಟಲು ಯೋಗೇಶ್ವರ್‌ ಮುಂದಾಗಿದ್ದಾರಾ..? ಇಂತಹದೊಂದು ಸುಳಿವನ್ನು ಬಿಟ್ಟು ಕೊಟ್ಟಿದೆ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳು.

ಸಚಿವಸ್ಥಾನ ಕೈತಪ್ಪಿದ ಬೆನ್ನಲ್ಲೇ ಯೋಗೇಶ್ವರ್‌ ಮೌನವಹಿಸಿದ್ದಾರೆ, ಮನೆ ಸೇರಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿದ್ದವು. ಆದರೆ ಶುಕ್ರವಾರ ಬೆಳಗ್ಗೆ ಯೋಗೇಶ್ವರ್‌ ಅವರ ಅಧಿಕೃತ ಫೇಸ್‌ಬುಕ್‌ ಗ್ರೂಪ್‌ನಲ್ಲಿ ಸ್ವತಃ ಯೋಗೇಶ್ವರ್‌ ತಮ್ಮ ಇಬ್ಬರು ಪುತ್ರರೊಂದಿಗೆ ಆರ್‌ಎಸ್‌ಎಸ್‌ ಸಮವಸ್ತ್ರದಲ್ಲಿ ಗಣವೇಷ ದಾರಿಯಾಗಿ ನಿಂತಿರುವ ಪೋಸ್ಟ್‌ಗಳನ್ನು ಹಾಕಲಾಗಿದ್ದು ಇದು ಸಾಕಷ್ಟುಚರ್ಚೆಗೆ ಎಡೆಮಾಡಿಕೊಟ್ಟಿದೆ.

ಎಚ್‌ಡಿಕೆ-ಡಿಕೆ ಕೋಟೆಯಲ್ಲಿ ಕೇಸರಿ ಕಲರವ:

ರಾಜಕೀಯ ಪಾಳಯದಲ್ಲಿ ಜೋಡೆತ್ತುಗಳು ಎಂದೇ ಬಿಂಬಿಸಿಕೊಂಡಿರುವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ ಅವರ ಭದ್ರಕೋಟೆ. ಇಲ್ಲಿ ಕೇಸರಿ ಪಡೆ ಪ್ರಬಲಗೊಳ್ಳದಿರಲು ಇವರಿಬ್ಬರ ಪ್ರಾಬಲ್ಯವೇ ಕಾರಣ. ಇದೀಗ ಈ ಕೋಟೆಗೆ ಲಗ್ಗೆ ಇರಿಸಲು ಸಂಘ ಪರಿವಾರ ಯೋಗೇಶ್ವರ್‌ ಮೂಲಕ ತಂತ್ರ ರೂಪಿಸಿದೆ. ಇದರ ಮೊದಲ ಹಂತವಾಗಿ ಕನಕಪುರ ಚಲೋ ನಡೆಸಿ ಯಶಸ್ವಿಯಾಗಿತ್ತು. ಇದೀಗ ಎರಡನೇ ಹಂತದಲ್ಲಿ ರಾಮನಗರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ಇದ್ದು ಈ ಕಾರ್ಯಕ್ರಮದ ಮೂಲಕ ಯೋಗೇಶ್ವರ್‌ ಜೋಡೆತ್ತುಗಳ ನೆಲದಲ್ಲಿ ಕೇಸರಿ ಕಲರವ ಮೂಡಿಸಲು ಮುಂದಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ಸಚಿವ ಸ್ಥಾನ ಕೈ ಜಾರಿದ್ದಕ್ಕೆ ಪರೋಕ್ಷ ಪ್ರತಿಕ್ರಿಯೆ:

ಇನ್ನು ಯೋಗೇಶ್ವರ್‌ ಅವರ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ತನ್ನ ಮಕ್ಕಳ ಗಣವೇಷದ ಪೋಟೋ ಜತೆಗೆ ದೇಶಮೊದಲು ಅಧಿಕಾರವಲ್ಲ ಎಂಬ ಟ್ಯಾಗ್‌ಲೈನ್‌ ನೀಡಿದ್ದು, ಸಚಿವ ಸ್ಥಾನ ಕೈಜಾರಿದ ಬಗ್ಗೆ ಈ ಮೂಲಕ ಯೋಗೇಶ್ವರ್‌ ಪರೋಕ್ಷವಾಗಿ ಸಂದೇಶ ರವಾನೆ ಮಾಡಿದ್ದಾರೆ. ತನಗೆ ಅಧಿಕಾರ ತಪ್ಪಿಸಿದ ಮುಖಂಡರಿಗೆ ಮತ್ತು ಈ ಬಗ್ಗೆ ಅಣಕವಾಡುತ್ತಿದ್ದ ರಾಜಕೀಯ ವಿರೋಧಿಗಳಿಗೂ ಈ ಒಂದೇ ಸಾಲಿನ ಉತ್ತರವನ್ನು ಮಾರ್ಮಿಕವಾಗಿ ನೀಡಿದ್ದಾರೆ ಎಂದು ತಾಲೂಕು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

 

ಇದೇ ಮೊದಲಿಗೆ ಗಣವೇಷ:

ಜಿಲ್ಲಾ ರಾಜಕಾರಣದಲ್ಲಿ ಪ್ರಬಲ ರಾಜಕಾರಣಿಗಳಾದ ಎಚ್‌.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್‌ ವಿರುದ್ಧವಾಗೇ ಗುರುತಿಸಿಕೊಂಡಿರುವ ಯೋಗೇಶ್ವರ್‌, ಡಿಕೆಶಿ ನನ್ನ ಬೆಳವಣಿಗೆಗೆ ಅಡ್ಡಗಾಲು ಹಾಕಿದರು ಎಂದು 2009ರಲ್ಲಿ ಕಾಂಗ್ರೆಸ್‌ ತೊರೆದು ಕಮಲದ ತೆಕ್ಕೆಗೆ ಜಾರಿದರು. ಕೆಎಸ್‌ಐಸಿ ಅಧ್ಯಕ್ಷರಾಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮರು ಚುನಾವಣೆಯಲ್ಲಿ ಗೆದ್ದು ಸಚಿವರಾದರೂ ಯೋಗೇಶ್ವರ್‌ ಆರ್‌ಎಸ್‌ಎಸ್‌ ಜತೆ ಒಡನಾಟ ಬೆಳೆಸಿಕೊಂಡಿರಲಿಲ್ಲ.

ಇತ್ತೀಚೆಗೆæ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಗೊಳಿಸುವ ಹುಮ್ಮಸ್ಸಿನೊಂದಿಗೆ ಕಮಲ ಪಕ್ಷಕ್ಕೆ ಮತ್ತೆ ಹಿಂದಿರುಗಿದಾಗಲೂ ಅವರು ಆರ್‌ಎಸ್‌ಎಸ್‌ನೊಂದಿಗೆ ಯಾವುದೇ ಒಡನಾಟ ಇರಿಸಿಕೊಂಡಿರಲಿಲ್ಲ. ಆದರೆ, ಇದೇ ಮೊದಲಬಾರಿಗೆ ಗಣವೇಷ ದಾರಿಯಾಗಿ ತಮ್ಮ ಪುತ್ರರಾದ ಶ್ರವಣ್‌ ಯೋಗೇಶ್ವರ್‌ ಮತ್ತು ಧ್ಯಾನ್‌ ಯೋಗೇಶ್ವರ್‌ ಜತೆ ಕಾಣಿಸಿಕೊಂಡಿದ್ದಾರೆ.

ಆರ್‌ಎಸ್‌ಎಸ್‌ ಪಥ ಸಂಚಲನದಲ್ಲಿ ಭಾಗಿ:

ಭಾನುವಾರ ರಾಮನಗರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯೋಗೇಶ್ವರ್‌ ಪಾಲ್ಗೊಳ್ಳಲಿದ್ದಾರೆ ಎಂದು ಸಿಪಿವೈ ಆಪ್ತಮೂಲಗಳು ತಿಳಿಸಿವೆ. ಆರ್‌ಎಸ್‌ಎಸ್‌ ದಕ್ಷಿಣ ಮಧ್ಯಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಡಾ.ಕಲಡ್ಕ ಪ್ರಭಾಕರ ಭಟ್‌ ಈ ಪಥಸಂಚಲನದ ನೇತೃತ್ವ ವಹಿಸಲಿದ್ದಾರೆ. ಈ ಪಥ ಸಂಚಲನವನ್ನು ಯಶಸ್ವಿಗೊಳಿಸಲು ಖುದ್ದು ಯೋಗೇಶ್ವರ್‌ ಸಿದ್ಧತೆ ನಡೆಸುತ್ತಿದ್ದು, ತಮ್ಮ ಅಪಾರ ಬೆಂಬಲಿಗರಿಗೆ ಈಗಾಗಲೇ ಗಣವೇಷ ತೊಟ್ಟು ಪಥಸಂಚಲನದಲ್ಲಿ ಪಾಲ್ಗೊಳ್ಳುವಂತೆ ಫರ್ಮಾನು ಹೊರಡಿಸಿದ್ದಾರೆ.

ಆರ್‌ಎಸ್‌ಎಸ್‌ ಮೇಲೆ ಒಲವೇಕೆ?

ದೋಸ್ತಿ ಸರ್ಕಾರವನ್ನು ಕೆಡವಲು ಆಪರೇಷನ್‌ ಆರಂಭಿಸಿದ ಬಳಿಕ ಯೋಗೇಶ್ವರ್‌ ಮತ್ತು ಆರ್‌ಎಸ್‌ಎಸ್‌ ಮುಖಂಡರೊಂದಿಗಿನ ಒಡನಾಟ ಹೆಚ್ಚಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ಜಿ ಹಾಗೂ ಡಾ.ಕಲ್ಲಡ್ಕ ಪ್ರಭಾಕರ್‌ ಭಟ್‌ರೊಂದಿಗೆ ಯೋಗೇಶ್ವರ್‌ ಸಖ್ಯ ಬೆಳೆಸಿದ್ದು, ಇತ್ತೀಚೆಗೆ ಸಚಿವ ಸಂಪುಟ ಸೇರುವವರ ಪಟ್ಟಿಯಲ್ಲಿ ಇವರ ಹೆಸರು ಪ್ರಮುಖವಾಗಿ ಕೇಳಿಬರಲು ಆರ್‌ಎಸ್‌ಎಸ್‌ ಮುಖಂಡರು ಕಾರಣ ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್‌ ಆರ್‌ಎಸ್‌ಎಸ್‌ ಮೇಲೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎನ್ನ​ಲಾ​ಗಿ​ದೆ.

ಇನ್ನು ಡಿಕೆಶಿ ಮತ್ತು ಎಚ್‌ಡಿಕೆ ಪ್ರಾಬಲ್ಯ ಹೊಂದಿರುವ ಈ ಭಾಗದಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಂಘಟನೆ ಅಷ್ಟೇನು ಪ್ರಬಲವಾಗಿಲ್ಲ. ಕಾರಣ ಸಂಘ ಪರಿವಾರದ ಮುಖಂಡರು ಯೋಗೇಶ್ವರ್‌ ಅವರ ಮೂಲಕ ಇಲ್ಲಿ ಭದ್ರನೆಲೆ ಸ್ಥಾಪಿಸುವ ಕಾರ್ಯ ಯೋಜನೆ ರೂಪಿಸಿದ್ದಾರೆ. ಇತ್ತೀಚೆಗೆ ಹಿಂದೂಪರ ಸಂಘಟನೆಗಳು ಏಸು ಪ್ರತಿಮೆ ನಿರ್ಮಾಣ ಖಂಡಿಸಿ ಕರೆ ನೀಡಿದ್ದ ಕನಕಪುರ ಚಲೋ ಯಶಸ್ವಿಯ ಹಿಂದೆ ಯೋಗೇಶ್ವರ್‌ ಪಾತ್ರ ಇದ್ದುದನ್ನು ಅರಿತಿರುವ ಆರ್‌ಎಸ್‌ಎಸ್‌ ಮುಖಂಡರು ಯೋಗೇಶ್ವರ್‌ಗೆ ಸಾಥ್‌ ನೀಡುತ್ತಿದ್ದಾರೆ.

ಸಚಿವ ಸ್ಥಾನ ಕೈಜಾರಿದ ಬೆನ್ನಲ್ಲೇ ಯೋಗೇಶ್ವರ್‌ ಗಣವೇಷಧಾರಿಯಾಗಿ ಕಾಣಿಸಿಕೊಳ್ಳುವ ಮೂಲಕ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದ್ದಾರೆ. ಯೋಗೇಶ್ವರ್‌ ಹೊಸ ಗೆಟಪ್‌ ಬೆಂಬಲಿಗರಿಗೆ ಖುಷಿ ಕೊಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡುತ್ತಿದ್ದಾರೆ.

ದೇಶ ಮೊದಲು. ಪಕ್ಷ ನಂತರ. ವ್ಯಕ್ತಿ ಕೊನೆಗೆ ಎಂಬುದು ಬಿಜೆಪಿ ಸಿದ್ಧಾಂತ. ಇದನ್ನು ಯೋಗೇಶ್ವರ್‌ ಅಳವಡಿಸಿಕೊಂಡಿದ್ದಾರೆ. ಅವರ ಸೂಚನೆಯ ಮೇರೆಗೆ ದೇಶಕ್ಕಾಗಿ ನಾವೆಲ್ಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯಾಗಿ ತೊಡಗಿಸಿಕೊಳ್ಳುತ್ತಿದ್ದೇವೆ.

- ಕುಮಾರ್‌, ಎಪಿಎಂಸಿ ಮಾಜಿ ಅಧ್ಯಕ್ಷ