ಮೈಸೂರು (ಫೆ.08):  ಖ್ಯಾತ ಕಾದಂಬರಿಕಾರ ಡಾ. ಎಸ್‌.ಎಲ್‌.ಭೈರಪ್ಪ ಅವರ ಹುಟ್ಟೂರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೆ ಶಿವರದ ಅಭಿವೃದ್ಧಿಗೆ ಮತ್ತು ಅಲ್ಲಿ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರ ತರಬೇತಿ ಕೇಂದ್ರ ತೆರೆಯಲು ಯೋಜಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಖ್ಯಾತ ಕಾದಂಬರಿಕಾರ ಡಾ.  ಎಸ್‌.ಎಲ್‌.ಭೈರಪ್ಪ ಅವರ ಮೈಸೂರಿನ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಂತೆಶಿವರದ ಅಭಿವೃದ್ಧಿ ಮತ್ತು ಸಾಹಿತ್ಯಾಸಕ್ತರ ತರಬೇತಿ ಕೇಂದ್ರಕ್ಕಾಗಿ 5 ಕೋಟಿ ರು. ಅನುದಾನ ಅಂತಹ ತರಬೇತಿ ಕೇಂದ್ರ ಹೇಗಿರಬೇಕು ಎಂಬ ಕುರಿತು ಚರ್ಚಿಸಲಾಗಿದೆ. ಒಮ್ಮೆ ಭೈರಪ್ಪ ಅವರನ್ನೇ ಕರೆದುಕೊಂಡು ಹೋಗಿ ಮಾಹಿತಿ ಪಡೆದು ಅದರ ಸಣ್ಣಪುಟ್ಟವ್ಯತ್ಯಾಸಗಳಿದ್ದರೂ ಸರಿಪಡಿಸಲು ಉದ್ದೇಶಿಸಲಾಗಿದೆ. ಈ ಆರ್ಥಿಕ ವರ್ಷದೊಳಗೆ ಇದರ ಹಣ ವರ್ಗಾವಣೆ ಮಾಡಲಾಗುವುದು ಎಂದು ಅವರು ಹೇಳಿದರು.

ರಂಗಾಯಣ ಮಹಾ ಪರ್ವ; ಭೈರಪ್ಪನವರ ಮಹಾಕಾದಂಬರಿ ಪರ್ವ ಈಗ ಏಳೂವರೆ ಗಂಟೆಗಳ ನಾಟಕ!

ಭೈರಪ್ಪ ಅವರು ರಾಜ್ಯದ ಹಿರಿಯ ಸಾಹಿತಿಗಳು, ನನ್ನ ಮಾರ್ಗದರ್ಶಕರು ಹಾಗೂ ಆತ್ಮೀಯರು. ಆದ್ದರಿಂದ ಅವರ ಸಲಹೆ, ಸೂಚನೆ, ಆಶೀರ್ವಾದ ಪಡೆಯಲು ಬಂದಿದ್ದೇನೆ. ಪರ್ವ ನಾಟಕ ಪ್ರದರ್ಶನದ ಜೊತೆಗೆ ಅನುದಾನ ಬಿಡುಗಡೆ ಸ್ಥಿತಿ ಏನು ಎಂಬ ಮಾಹಿತಿ ಕೇಳಿದರು. ಈ ಮಾಚ್‌ರ್‍ನಲ್ಲಿ ಮೈಸೂರಿನಿಂದಲೇ ಪರ್ವ ನಾಟಕದ ಪರ್ವ ಆರಂಭವಾಗಲಿದೆ ಎಂದು ತಿಳಿಸಿದರು. ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ಇತರರಿದ್ದರು.

ರಂಗಾಯಣಕ್ಕೆ 50 ಲಕ್ಷ

ಮೈಸೂರಿನ ರಂಗಾಯಣವು ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ ಕಾರ್ಯಕ್ರಮಕ್ಕಾಗಿ 4 ಕೋಟಿ ಅನುದಾನ ಕೇಳಿದೆ. ಈ ಪೈಕಿ ಮಾರ್ಚ್ ಅಂತ್ಯದೊಳಗೆ ಮೊದಲ ಕಂತಾಗಿ 50 ಲಕ್ಷ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು. ವಿವಿಧ ಅಕಾಡೆಮಿ ಮತ್ತು ರಂಗಾಯಣ ನಿರ್ದೇಶಕರ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದು, ಅನುದಾನ ಹಂಚಿಕೆ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.