ಉಡುಪಿ ಜಿಲ್ಲೆಗೆ 25ರ ಸಂಭ್ರಮ: ರಜತ ಮಹೋತ್ಸವಕ್ಕೆ ರಾಜ್ಯಪಾಲರಿಂದ ಚಾಲನೆ
ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಮಟ್ಟದಲ್ಲಿ ಆಗಬೇಕಾದ ಕೆಲಸಗಳಿಗೆ ತಾನು ಜಿಲ್ಲೆಯ ಜನತೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ(ಆ.25): ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಮಟ್ಟದಲ್ಲಿ ಆಗಬೇಕಾದ ಕೆಲಸಗಳಿಗೆ ತಾನು ಜಿಲ್ಲೆಯ ಜನತೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ಇಂದು(ಗುರುವಾರ) ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲೆ ಸ್ಥಾಪನೆಯ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿಯಲ್ಲಿ ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು, ಇದು ದೇಶದ ಬೇರೆ ಯಾವುದೇ ಜಿಲ್ಲೆಯಲ್ಲಿ ಇಲ್ಲ ಎಂದ ರಾಜ್ಯಪಾಲರು ಅಭಿನಂದಿಸಿದರು.
ಉಡುಪಿ ಜಿಲ್ಲೆಯೂ ಮೂಲಭೂತ ಸೌಕರ್ಯಗಳು, ಶಿಕ್ಷಣ ಮತ್ತು ಉದ್ಯಮ, ಧರ್ಮ ಸಮನ್ವಯತೆ, ಕಲೆ ಮತ್ತು ಸಂಸ್ಕೃತಿಗಳ ಬೆಳವಣಿಗೆಯಿಂದ ಅತೀವೇಗದಲ್ಲಿ ರಾಜ್ಯದಲ್ಲಿಯೇ ಅಗ್ರಣೀ ಸ್ಥಾನದತ್ತ ದಾಪುಗಾಲು ಹಾಕುತ್ತಿದೆ ಎಂದವರು ಶ್ಲಾಘಿಸಿದರು.
ಕೇರಳದ ಕಳರಿ ಪಯಟ್ಟು ಕಲೆಗೆ ಉಡುಪಿಯ ಜನರು ಫಿದಾ; ಈ ಕಲೆಯ ಮೂಲ ಕನ್ನಡ ನಾಡು!
ಉಡುಪಿ ಜಿಲ್ಲೆಯ ಪ್ರಥಮ ಉಸ್ತುವಾರಿ ಸಚಿವ ಜಯಪ್ರಕಾಶ ಹೆಗ್ಡೆಯವರು ಮಾತನಾಡಿ ಉಡುಪಿಯ ಜನರು ತಮ್ಮ ಕೆಲಸಗಳಿಗೆ ಮಂಗಳೂರಿಗೆ ಹೋಗುವ ಕಷ್ಟವನ್ನು ತಪ್ಪಿಸುವುದಕ್ಕಾಗಿ ಪ್ರತ್ಯೇಕ ಜಿಲ್ಲೆಯನ್ನು ಹುಟ್ಟುಹಾಕಲಾಯಿತು. ಇಂದಿಗೂ ಜನರು ಸರ್ಕಾರಿ ಕಚೇರಿಗೆ ಬಂದಾಗ ಅವರ ಕೆಲಸಗಳು ತಕ್ಷಣ ಪೂರ್ಣಗೊಂಡು ಹಿಂದಕ್ಕೆ ಹೋಗುವಂತಾಗಬೇಕು. ಆಗ ಜಿಲ್ಲೆ ಪ್ರತ್ಯೇಕಗೊಂಡಿರುವುದಕ್ಕೆ ಸಾರ್ಥಕವಾಗುತ್ತದೆ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಅಲ್ಲದೇ ಜಿಲ್ಲೆಗೆ ಇನ್ನು 2 ಉಪವಿಭಾಗಧಿಕಾರಿ ಕಚೇರಿಯ ಅಗತ್ಯ ಇದ್ದು, ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದೇನೆ. ಅದು ಲಭಿಸುವ ಸಾಧ್ಯತೆ ಇದೆ, ಜೊತೆಗೆ ಹೆಚ್ಚುವರಿ ಆರ್.ಟಿ.ಓ, ಡಿ.ಸಿ.ಎಫ್ ಕಚೇರಿಗಳು ಒದಗಿಸುವಂತೆ ಮನವಿ ನೀಡಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿಯವರು ಮಾತನಾಡಿ ಸಣ್ಣ ಜಿಲ್ಲೆಗಳಲ್ಲಿ ದಕ್ಷ ಆಡಳಿತ ಸಾಧ್ಯ, ಅದು ಉಡುಪಿ ಜಿಲ್ಲೆಯಲ್ಲಿ ಸಾಧ್ಯವಾಗಿದೆ, ಈ ಜಿಲ್ಲೆಗೆ ಅದ್ಭುತ ಭೂತಕಾಲ ಇತ್ತು, ಅದ್ಭುತ ವರ್ತಮಾನ ಕಾಲ ಇದೆ, ಅದ್ಭುತ ಭವಿಷ್ಯ ನಿರ್ಮಾಣವಾಗಬೇಕಾಗಿದೆ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಮೂರು ಬ್ಯಾಂಕ್ ಗಳು ಆರಂಭವಾದ ಜಿಲ್ಲೆ ಉಡುಪಿ. ಈ ಜಿಲ್ಲೆ ಶಿಕ್ಷಣ, ಬ್ಯಾಂಕಿಂಗ್ ನಲ್ಲಿ ಮುಂದಿದೆ. ಜೊತೆಗೆ ಉಡುಪಿಯ ಹೋಟೆಲ್ ಜಗ್ಗತ್ತಿನಲ್ಲೇ ಸದ್ದು ಮಾಡಿದ್ದು, ಅತಿಥಿ ಸತ್ಕಾರದಲ್ಲೂ ನಾವು ಮುಂದಿದೆ. ದಿ| ಡಾ.ವಿ.ಎಸ್. ಆಚಾರ್ಯರು ಈ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಿದ್ದು ಅವರನ್ನು ನಾವೆಲ್ಲಾ ಸ್ಮರಿಸೋಣ ಎಂದರು. ಈ ಜಿಲ್ಲೆಯನ್ನು ಭಾರತ 100 ಉಡುಪಿ 50 ರ ಸಂಭ್ರಮದ ವೇಳೆಗೆ ಜಾತಿ,ಮತ, ಪಕ್ಷವನ್ನು ಹೊರತು ಪಡಿಸಿ ಇನ್ನಷ್ಟು ಅಭಿವೃದ್ಧಿ ಪಥಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದರು.
ಉಡುಪಿ ಜಿಲ್ಲೆಯಾಗಿ 25 ವರ್ಷ: ಮೊದಲ ಉಸ್ತುವಾರಿ ಸಚಿವ ಜಯಪ್ರಕಾಶ್ ಹೆಗ್ಡೆ ಜೊತೆ ಸಂವಾದ
ಈ ಸಂದರ್ಭದಲ್ಲಿ ಉಡುಪಿ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಲಾಲಾಜಿ ಆರ್ ಮೆಂಡನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ, ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೂರ್ಮಾ ರಾವ್ ಸ್ವಾಗತಿಸಿ, ಜಿ.ಪಂ ಸಿಇಓ ಪ್ರಸನ್ನ ವಂದಿಸಿದರು. ಶಂಕರ್ ಪ್ರಸಾದ್ ನಿರೂಪಿಸಿದರು.
ಸಭಾ ಕಾರ್ಯಕ್ರಮ ಆರಂಭಕ್ಕೂ ಮೊದಲು ಉಡುಪಿ ನಗರದ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡು ಮೈದಾನದವರೆಗೆ ಜಿಲ್ಲೆಯ ಶಾಲಾ ಕಾಲೇಜಿನ ಮಕ್ಕಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮೆರವಣಿಗೆಯಲ್ಲಿ ಬಂದರು.
ಈ ಜಿಲ್ಲೆಗೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಪ್ರಥಮ ಜಿಲ್ಲಾಧಿಕಾರಿ ಕಲ್ಪನಾ, ಪ್ರಥಮ ಉಸ್ತುವಾರಿ ಸಚಿವ ಜಯಪ್ರಕಾಶ್ ಹೆಗ್ಡೆ ಹಾಗು ಜಿಲ್ಲೆಯ ಅಭಿವೃದ್ಧಿ ಪಾತ್ರರಾಗಿರುವ ಮಣಿಪಾಲ ಶಿಕ್ಷಣ ಸಂಸ್ಥೆಯ ಲೆ| ಕ| ವೆಂಕಟೇಶ್, ಉದ್ಯಮಿ ಜಿ.ಶಂಕರ್ ಹಾಗು ನಿಟ್ಟೆ ಶಿಕ್ಷಣ ಸಂಸ್ಥೆಯ ವಿನಯ್ ಹೆಗ್ಡೆಯವರ ಪುತ್ರ ವಿಶಾಲ್ ಹೆಗ್ಡೆಯವರನ್ನು ಸನ್ಮಾನಿಸಲಾಯಿತು.