ಉಡುಪಿ ಜಿಲ್ಲೆಯಾಗಿ 25 ವರ್ಷ: ಮೊದಲ ಉಸ್ತುವಾರಿ ಸಚಿವ ಜಯಪ್ರಕಾಶ್ ಹೆಗ್ಡೆ ಜೊತೆ ಸಂವಾದ
ಉಡುಪಿ ಜಿಲ್ಲೆ ಎಂದು ಘೋಷಣೆಯಾಗಿ 25 ವರ್ಷ ಕಳೆಯಿತು. ಈ ಬೆಳ್ಳಿ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಆಗಸ್ಟ್ 25ಕ್ಕೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಉಡುಪಿಗೆ ಭೇಟಿ ನೀಡಿ ರಜತ ಮಹೋತ್ಸವ(Silver Jubilee)ಕ್ಕೆ ಚಾಲನೆ ನೀಡಲಿದ್ದಾರೆ. ಮುಂದಿನ ಜನವರಿ ತಿಂಗಳವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿ (ಆ.24) : ಉಡುಪಿ ಜಿಲ್ಲೆ ಎಂದು ಘೋಷಣೆಯಾಗಿ 25 ವರ್ಷ ಕಳೆಯಿತು. ಈ ಬೆಳ್ಳಿ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಆಗಸ್ಟ್ 25ಕ್ಕೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್(Thawar Chand Gehlot) ಉಡುಪಿಗೆ ಭೇಟಿ ನೀಡಿ ರಜತ ಮಹೋತ್ಸವ(Silver Jubilee)ಕ್ಕೆ ಚಾಲನೆ ನೀಡಲಿದ್ದಾರೆ. ಮುಂದಿನ ಜನವರಿ ತಿಂಗಳವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ವಾತಂತ್ರದ ಕತೆ ಹೇಳುತ್ತಿದೆ ಮೊದಲ ಧ್ವಜ: ತ್ರಿವರ್ಣದಲ್ಲಿ ಕಂಗೊಳಿಸಿದ ಉಡುಪಿ ಶ್ರೀಕೃಷ್ಣ
ಉಡುಪಿ(Udupi) ಜಿಲ್ಲೆ ಎಂದು ಘೋಷಣೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಿಲ್ಲೆಯ ಪ್ರಥಮ ಉಸ್ತುವಾರಿ ಸಚಿವ ಹಾಗೂ ಹಾಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಢೆ(Jayaprakash Hegde) ಅವರೊಂದಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವಿಶೇಷ ಸಂವಾದ ನಡೆಸಿತು.
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಹೊಸ ಜಿಲ್ಲೆ ರಚನೆಗೆ ಕಾರಣಿಕರ್ತರಾದ ಅಂದಿನ ಸಿಎಂ ಜೆ.ಹೆಚ್ ಪಟೇಲ್(J.H.Patel) ಮತ್ತು ಸಂಪೂರ್ಣ ಮಂತ್ರಿಮಂಡಲಕ್ಕೆ ಧನ್ಯವಾದ ಸಲ್ಲಿಸಿದರು ಅಂದಿಗೂ ಇಂದಿಗೂ ಬಹಳ ಬದಲಾವಣೆ ಯನ್ನು ಜಿಲ್ಲೆಯ ಜನ ಅರಿತಿದ್ದಾರೆ. ಅಧಿಕಾರದಲ್ಲಿ ಎಷ್ಟು ಕಾಲ ಇದ್ದೆವು ಎನ್ನುವುದು ಮುಖ್ಯವಲ್ಲ. ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಕೇವಲ ಅಂದು ಕೇವಲ ಮೂರು ದಿನಗಳಲ್ಲಿ ಜಿಲ್ಲೆ ಉದ್ಘಾಟನೆಗೆ ಸಿದ್ಧವಾಗಿತ್ತು. ಅಂದು ಒಂದು ರಾಜಕೀಯ ಪಕ್ಷದಲ್ಲಿದ್ದೆ ಆದರೆ ಇಂದು ಸಾಂವಿಧಾನಿಕ ಹುದ್ದೆಯಲ್ಲಿ ಇದ್ದೇನೆ. ಪಕ್ಷದ ಸದಸ್ಯ ಅಲ್ಲ, ಆದರೂ ಕೆಲಸ ಮಾಡಲು ಸಾಧ್ಯ ಆಗುತ್ತದೆ ಎಂದರು.
ಜಿಲ್ಲೆಯಲ್ಲಿ ಅಭಿವೃದ್ಧಿ(Developmnet) ಬಹಳ ಆಗಿದೆ. ಆದರೆ ಎಲ್ಲರಿಗೂ ಅಭಿವೃದ್ಧಿ ಮುಟ್ಟಿದೆ ಎನ್ನಲು ನಾನು ತಯಾರಿಲ್ಲ. ಇಲ್ಲಿ ಪರಿಸರ ಸ್ನೇಹಿ ಯೋಜನೆ ಬರಲು ಮಾತ್ರ ಅವಕಾಶ ಇದೆ. ಸಮುದ್ರ, ನದಿ, ಪಶ್ಚಿಮ ಘಟ್ಟ ಇರುವುದರಿಂದ ಯೋಜನೆ ಬರಲು ಸಾಧ್ಯವಾಗಿಲ್ಲ. ದೊಡ್ಡ ದೊಡ್ಡ ಸಾಫ್ಟ್ ವೇರ್ ಕಂಪನಿ ಉಡುಪಿಗೆ ಬರುವ ಅವಶ್ಯಕತೆ ಇದೆ. ಇಲ್ಲಿನ ಮಕ್ಕಳು ಹೊರಗೆ ಹೋಗುವುದನ್ನು ತಡೆಯಬೇಕು ಎಂದು ಹೇಳಿದರು.
ಕರಾವಳಿ ಪ್ರವಾಸೋದ್ಯಮ(Coastal tourism) ಎಷ್ಟೊಂದು ಅಭಿವೃದ್ಧಿ ಆಗಬೇಕಿತ್ತೋ ಆ ಮಟ್ಟಿನಲ್ಲಿ ಅಭಿವೃದ್ಧಿ ಆಗಿಲ್ಲ. ದೇವಸ್ಥಾನ, ಪ್ರವಾಸೋದ್ಯಮ, ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ. ವೈದ್ಯಕೀಯ ವೆಚ್ಚ ಬಹಳ ದುಬಾರಿಯಾಗಿದ್ದು, ಕಡಿಮೆ ಖರ್ಚು, ಉಚಿತ ಚಿಕಿತ್ಸೆ ಸಿಗಬೇಕಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೃಷಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಯುವಜನರು ಕೃಷಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅಂದಿನ ದಿನಗಳಲ್ಲಿ ನೀಲಾವರ ವೆಂಟೆಡ್ ಡ್ಯಾಂ ನಿರ್ಮಿಸುವಾಗ ಬಹಳ ವಿರೋಧ ಇತ್ತು. ಆದರೆ ಅದರ ಉಪಯೋಗ ತಿಳಿದ ಮೇಲೆ ಇಂದು ಹತ್ತಾರು ಡ್ಯಾಂಗಳಾಗಿವೆ.
ಬ್ರಹ್ಮಾವರ ಪುರಸಭೆ(Brahmavar Municipality) ಆಗಬೇಕು ಎನ್ನುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಹೆಗ್ಡೆ ಪುರಸಭೆಯಾದಲ್ಲಿ ಅಲ್ಲಿನ ಮಕ್ಕಳಿಗೆ ಗ್ರಾಮೀಣ ಕೃಪಾಂಕ ಹೋಗಲಿದೆ. ಆದರೆ ಪ್ರಯತ್ನ ಬಿಟ್ಟಿಲ್ಲ. ಬೇಕು ಬೇಡ ಎಂಬ ಎರಡೂ ಅಭಿಪ್ರಾಯಗಳಿವೆ.
ಜಮೀನಿನ ಮೇಲೆ ಸಾಲ ಪಡೆದಿದ್ದೆ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ನನ್ನ ಜಮೀನನ ಮೇಲೆ ಸಾಲ ಪಡೆದಿದ್ದೆ. ಬಳಿಕ ಸಕ್ಕರೆ ಮಾರಿ ಸಾಲ ಕಟ್ಟುತ್ತಿದ್ದೆ. ಶಿವಮೊಗ್ಗದಿಂದ ಬರುತ್ತಿದ್ದ ಕಬ್ಬಿನ ಸಾಗಾಟ ದುಬಾರಿಯಾಗಿದ್ದು, ಸಕ್ಕರೆಯ ಜೊತೆ ಉಪ ಉತ್ಪನ್ನ ಮಾಡಿದರೆ ಮಾತ್ರ ಲಾಭದಾಯಕವಾಗಲಿದೆ ಎಂದರು.
ಉಡುಪಿಗೆ ಉತ್ತಮವಾದ ವಿಮಾನ ನಿಲ್ದಾಣ ನಿರ್ಮಾಣದ ಕನಸು ಹಿಂದಿನಿಂದಲೇ ಇದ್ದು ಅದರ ಕುರಿತ ಪ್ರಯತ್ನ ಇನ್ನೂ ನಡೆಯುತ್ತಿದೆ. ಶಿರೂರು ಭಾಗದಲ್ಲಿ ಇದರ ನಿರ್ಮಾಣವಾದರೆ ಭಟ್ಕಳ ಉತ್ತರಕನ್ನಡದ ನಾಗರಿಕರಿಗೂ ಸಹ ಇದರ ಪ್ರಯೋಜನ ಸಿಗಲಿದೆ ಎಂದರು.
Udupi; ಕಲ್ಮಾಡಿಯ ವೆಲಂಕಣಿ ಚರ್ಚ್ ಗೆ ಪುಣ್ಯಕ್ಷೇತ್ರ ದ ಮಾನ್ಯತೆ
ಪರಿಸರಕ್ಕೆ ಹಾನಿಯಾಗದ ಉದ್ದಿಮೆ ಸ್ಥಾಪನೆ: ಕೆಲವು ವರ್ಷಗಳ ಹಿಂದೆ ತುಳು ಅಕಾಡೆಮಿ ಬೇಕು ಬೇಡ ಚರ್ಚೆ ಆಗುತ್ತಿತ್ತು. ತುಳು ನಿಘಂಟಿಗೆ ಸರಕಾರದಿಂದ ಅನುದಾನ ಕೊಡಿಸಿದ್ದೆ. ಕುಂದಗನ್ನಡ ವಿಚಾರದಲ್ಲಿ ಕೆಲಸ ಮಾಡಲು ಸರಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮುಂದಿನ ದಿನಗಳಲ್ಲಿ ಇದರ ಕುರಿತು ಪ್ರಯತ್ನ ಮುಂದುವರೆಸಲಾಗುವುದು. ಅಧಿಕಾರದಲ್ಲಿ ಇಲ್ಲದೆ ಇದ್ದರೂ ಕೂಡ ಅಭಿವೃದ್ದಿ ವಿಚಾರದಲ್ಲಿ ಸರಕಾರಗಳೊಂದಿಗೆ ಸಂಪರ್ಕ ಸಾಧಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಅಭಿವೃದ್ಧಿ ಆಗಿದೆ. ಅಂದಿನ ಪರಿಸ್ಥಿತಿ ಗೊತ್ತಿಲ್ಲದೆ ಕೆಲವರು ಮಾತನಾಡುತ್ತಿದ್ದಾರೆ. ಆದರೆ ಅಭಿವೃದ್ಧಿ, ಹರಿಯುವ ನೀರು, ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೆಚ್ಚು ಹೆಚ್ಚು ಪರಿಸರಕ್ಕೆ ಹಾನಿಯಾಗದ ಉದ್ದಿಮೆ ಸ್ಥಾಪನೆ ಆಗಬೇಕಿದೆ.
ನೂತನ ಜಿಲ್ಲೆಯ ಕಲ್ಪನೆಯ ಬ್ಲೂಪ್ರಿಂಟ್ ಇರಲಿಲ್ಲ. ಆಯಾಯ ಕಾಲಕ್ಕೆ ಅಭಿವೃದ್ಧಿ ಆಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಿದೆ. ಕೆಲಸಗಳು ಕೇವಲ ಕಾಂಟ್ರಾಕ್ಟರ್ ಗಳಿಗಾಗಿ ಅಲ್ಲ. ರಸ್ತೆಗಿಂತ ಹಳ್ಳಿಯ ಅಭಿವೃದ್ಧಿ ಆಗಬೇಕು ಎಂದರು.
ನೆರೆಯ ಜಿಲ್ಲೆಗಳಲ್ಲಿ ಆಗಾಗ ಕೋಮುಗಲಭೆಗಳು ಸಂಭವಿಸಿದ್ದರೂ ಕೂಡ ಅದು ಉಡುಪಿ ಗಡಿಭಾಗಕ್ಕೆ ಬಾರದಂತೆ ಇಂದಿನ ತನಕ ಎಚ್ಚರ ವಹಿಸುವ ಕೆಲಸ ನಡೆದಿದೆ. ಗಲಭೆಗಳು ಅಭಿವೃದ್ಧಿಗೆ ಮಾರಕವೂ ಹೌದು. ಆದರೆ ಪೊಲೀಸ್ ಜಿಲ್ಲಾಡಳಿತ ಗಮನ ಕೊಟ್ಟರೆ ತಡೆಯಬಹುದು ಮತ್ತು ಈ ಮೂಲಕ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದರು
ಇದೇ ವೇಳೆ ಉಡುಪಿ ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿಯಾಗಿದ್ದ ಕಲ್ಪನಾ ಗೋಪಾಲನ್(Kalpana Gopalan) ಅವರು ವರ್ಚ್ಯುವಲ್ ಮೀಟ್(Virtual Meet) ಮೂಲಕ ಸಂವಾದವನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಸಂಜೀವ ಕುಂದರ್ (ಪಿಟಿಐ), ದಿನೇಶ್ ಕಿಣಿ(ಕನ್ನಡ ಜನ ಅಂತರಂಗ), ಆರೀಫ್ ಪಡುಬಿದ್ರಿ(ಕರಾವಳಿ ಅಲೆ), ರಾಮಕೃಷ್ಣ ಮೂರ್ತಿ (ಪ್ರಜಾವಾಣಿ), ಈಶ್ವರ ಭಟ್ (ಹೊಸದಿಂಗತ), ಆಸ್ಟ್ರೋ ಮೋಹನ್ (ಉದಯ ವಾಣಿ), ಚಂದ್ರಶೇಖರ್ ಹೆಗ್ಡೆ ಗುಲ್ವಾಡಿ(ಜನವಾಹಿನಿ) , ದಿನಕರ ಬೆಂಗ್ರೆ (ಹೊಸಸಂಜೆ), ಬಾ.ನಾ.ಶಾಂತಪ್ರಿಯ (ಟೈಮ್ಸ್ ಆಫ್ ಇಂಡಿಯಾ), ಸವಿತಾ ಶಾಂತಪ್ರಿಯ (ಮಾರ್ನಿಂಗ್ ನ್ಯೂಸ್), ಜಯಪ್ರಕಾಶ್ ಕಿಣಿ(ಪತ್ರಿಕಾ ಛಾಯಾಗ್ರಾಹಕರು), ಗಣೇಶ್ ಕಲ್ಯಾಣಪುರ (ಪತ್ರಿಕಾ ಛಾಯಾಗ್ರಾಹಕರು) ಇವರುಗಳಿಗೆ ಸನ್ಮಾನ ಮಾಡಲಾಯಿತು.