ಪುತ್ತೂರಿನ ಹನುಮಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ನೂತನ ಗೋಪುರವನ್ನು ಲೋಕಾರ್ಪಣೆ ಮಾಡಿದರು. ಹನುಮಂತನ ಸೇವೆ ಮತ್ತು ಶ್ರೀರಾಮನ ಧರ್ಮಪಾಲನೆಯನ್ನು ಸ್ಮರಿಸಿದ ಅವರು, ಧರ್ಮ-ಸಂಸ್ಕೃತಿ ಬಲಪಡಿಸಲು ಸಂಘಟಿತರಾಗಲು ಕರೆ ನೀಡಿದರು. 

ಪುತ್ತೂರು (ಏ.12): ಹನುಮಂತನಂತೆ ಸೇವೆ, ಕರ್ತವ್ಯ ಮತ್ತು ಸಮರ್ಪಣಾ ಮನೋಭಾವವೇ ಜೀವನದ ನಿಜವಾದ ಮಾರ್ಗವಾಗಿದ್ದು, ಕಷ್ಟ ಕಾಲಕ್ಕೆ ನಿತ್ಯ ಪ್ರೇರಣೆಯಾಗಿದೆ. ಶ್ರೀರಾಮನಂತೆ ಕಠಿಣ ಸಂದರ್ಭದಲ್ಲೂ ಸತ್ಯ, ಧರ್ಮ ಮತ್ತು ಮಾರ್ಯಾದೆ ಪಾಲನೆ ಮಾಡಬೇಕಿದೆ. ಧರ್ಮ-ಸಂಸ್ಕೃತಿ ಮತ್ತಷ್ಟು ಬಲಪಡಿಸಲು ಮತ್ತು ಸಮಾಜಮುಖಿ ಕಾರ್ಯಗಳನ್ನು ಮಾಡಲು ಎಲ್ಲರೂ ಸಂಘಟಿತರಾಗಬೇಕಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಶುಕ್ರವಾರ, ಕ್ಷೇತ್ರದ ಮುಖ್ಯ ನೂತನ ಗೋಪುರ ಹಾಗೂ ನವೀಕೃತ ಉದ್ಯಾನವನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಹನುಮಗಿರಿ ಕ್ಷೇತ್ರವು ಆಧ್ಮಾತ್ಮ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರೇರಣೆಯ ಕೇಂದ್ರವಾಗಿದೆ. ಸಮಾಜಕ್ಕೆ ನೈತಿಕ ಮೌಲ್ಯ, ಏಕತೆ ಮತ್ತು ಸದ್ಭಾವನೆಯ ಸಂದೇಶ ಸಾರುವ ಕೆಲಸ ಇಲ್ಲಿ ಆಗುತ್ತಿದೆ ಎಂದ ಅವರು, ನಮ್ಮ ಸಂಸ್ಕೃತಿಯು ವಿಶ್ವ ಭ್ರಾತೃತ್ವ, ವಿಶ್ವ ಕಲ್ಯಾಣ, ವಿಶ್ವ ಶಾಂತಿ ಮತ್ತು ಸಮಾನತೆಯ ಪ್ರೇರಣೆಯನ್ನು ನೀಡುತ್ತಿದೆ ಎಂದರು.ಆಶೀರ್ವಚನ ನೀಡಿದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ, ಧರ್ಮದ ಮೇಲಿನ ಭಕ್ತಿ ಮತ್ತು ದೇಶದ ಮೇಲಿನ ಭಕ್ತಿ ಎರಡೂ ಅನುಭವವೂ ಹನುಮಗಿರಿಯಲ್ಲಿದೆ. ದೈವ ಭಕ್ತಿ ಮತ್ತು ದೇಶ ಭಕ್ತಿ ಪ್ರತ್ಯಕ್ಷವಾಗಿ ಕಾಣಬಹುದಾದ ಹನುಮಗಿರಿ ನಿಜಕ್ಕೂ ಅದ್ಭುತ ಕ್ಷೇತ್ರವಾಗಿದೆ. ಇಲ್ಲಿ ಸಂಘದ ಪ್ರೇರಣೆಯೂ ಇದೆ, ಸಂತರ ಆಶೀರ್ವಾದವೂ ಇದೆ ಎಂದರು.

ದೇವ ಭಕ್ತಿ, ದೇಶ ಭಕ್ತಿ ಎರಡೂ ಹನುಮಗಿರಿ ಕ್ಷೇತ್ರದಲ್ಲಿ ಮೇಳೈಸಿದೆ. ಕಾರ್ಯ ಶಾಶ್ವತವಾದರೆ, ಕಾರ್ಯಕ್ರಮ ಅರ್ಥಪೂರ್ಣವೆನ್ನುವಂತೆ ಬ್ರಹ್ಮಕಲಶ ಉತ್ಸವವನ್ನು ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಇಲ್ಲಿ ಸಂಯೋಜಿಸಲಾಗಿದೆ. ರಾಮ, ಹನುಮ ಅದ್ವೈಕ ಜ್ಯೋತಿ ಇಲ್ಲಿಗೆ ಬಂದಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ಸ್ವಾಗತಿಸಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ಅವರು ವೇದಿಕೆಯಲ್ಲಿ ರಾಜ್ಯಪಾಲರನ್ನು ಗೌರವಿಸಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.