Asianet Suvarna News Asianet Suvarna News

ಪೊಲೀಸ್‌ ಕುಟುಂಬದ ಬದುಕೇ ಮೂರಾಬಟ್ಟೆ!

ಪೊಲೀಸ್‌ ಸಿಬ್ಬಂದಿ ಬದುಕೇ ಮೂರಾಬಟ್ಟೆ| ಉಟ್ಟಬಟ್ಟೆ​ಯಲ್ಲಿ ಹೊರ​ಬಂದ ಪೊಲೀಸ್‌ ಕುಟುಂಬಗಳು| ಪೊಲೀಸ್‌ ತರಬೇತಿ ಶಾಲೆಯ ವಸತಿಗೃಹದಲ್ಲಿ ಅವಾಂತರ

Karnataka Floods Water Enters To Police Quarters At Khanapur
Author
Bangalore, First Published Aug 13, 2019, 8:57 AM IST

ಖಾನಾ​ಪುರ[ಆ.13]: ಆ.7 ನಮಗೆ ಕರಾಳ ದಿನ. ಅಂದು ರಾತ್ರಿ ಮಲಪ್ರಭಾ ನದಿ ಮತ್ತು ಕುಂಬಾರ ಹಳ್ಳದಿಂದ ಹರಿದುಬಂದ ಪ್ರವಾಹದಿಂದಾಗಿ ನಮ್ಮ ವಸತಿ ಗೃಹದ ಬಳಿ ಏಕಾಏಕಿ ನೀರು ನುಗ್ಗಿತ್ತು. ಇದ​ರಿಂದ ನಮ್ಮ ವಸತಿಗೃಹಗಳು ಮೂರು ದಿನಗಳ ಕಾಲ ಸತತವಾಗಿ ನೀರಲ್ಲೇ ನಿಂತಿದ್ದವು. ಆದರೆ ಈಗ ನೆರೆ ಕಡಿಮೆಯಾಗಿದೆ.

ವಸತಿ ಗೃಹಗಳಲ್ಲಿ ಹೂಳು, ಕೆಸರು ಮತ್ತು ಕೊಳಚೆ ನೀರು ಸಂಗ್ರಹವಾಗಿದೆ. ಈ ಪ್ರವಾಹ ನಮ್ಮ ಬದುಕನ್ನು ಮೂರಾಬಟ್ಟೆ ಮಾಡಿದೆ ಎಂದು ಹೇಳು​ವಾಗ ಪಟ್ಟಣದ ಕರ್ನಾಟಕ ರಾಜ್ಯ ಪೊಲೀಸ್‌ ತರಬೇತಿ ಶಾಲೆಯ ವಸತಿಗೃಹದ ನಿವಾಸಿ, ಪ್ರವಾಹ ಸಂತ್ರಸ್ತೆ ಗೀತಾ ಹಡಪದ ಅವರ ಕಣ್ಣಾಲಿಗಳು ತೇವಗೊಂಡವು.

ಬುಧವಾರ ರಾತ್ರಿ ಇನ್ನೇನು ಊಟ ಮಾಡಬೇಕು ಎನ್ನುವಾಗ ತರಬೇತಿ ಶಾಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಮ್ಮನ್ನು ಮನೆಯಿಂದ ಹೊರಗೆ ಬರುವಂತೆ ತಿಳಿಸಿದರು. ಏನೆಂದು ಹೊರಗೆ ಬಂದಾಗ ಉಟ್ಟಬಟ್ಟೆಯಲ್ಲೇ ನಮ್ಮನ್ನು ವಸತಿಗೃಹಗಳಿಂದ ಹೊರಬರುವಂತೆ ಕೂಗಿದರು. ಮನೆಯಿಂದ ಹೊರತಂದು ಪಟ್ಟಣ ಪಂಚಾಯ್ತಿ ಸಮುದಾಯ ಭವನದಲ್ಲಿ ದಾಖಲಿಸಿದಾಗಲೇ ತಮಗೆ ತಾವಿದ್ದ ಭಾಗ ಪ್ರವಾಹಪೀಡಿತವಾಗಿದೆ ಎಂಬ ಅರಿವು ಬಂದಿತು ಎಂದು ಭಾವುಕರಾದರು. ಹಲವು ವರ್ಷಗಳಿಂದ ಪಟ್ಟಣದ ಪೊಲೀಸ್‌ ತರಬೇತಿ ಶಾಲೆ ಆವರಣದಲ್ಲಿರುವ 24 ವಸತಿಗೃಹಗಳಲ್ಲಿ 24 ಕುಟುಂಬ ವಾಸವಾಗಿವೆ. ಪ್ರವಾಹ ತಗ್ಗಿದ್ದರಿಂದ ಅಲ್ಲಿ ಹೋಗಿ ನೋಡಿ​ದಾಗ ತಾವಿದ್ದ ಮನೆಗಳಲ್ಲಿ ಕೆಸರು, ಹೂಳು, ಕೊಳಚೆ ಸೇರಿ ಇಡೀ ಮನೆ ಸಂಪೂರ್ಣ ದುರ್ನಾತ ಬೀರುತ್ತಿರುವುದನ್ನು ಕಂಡು 24 ಕುಟುಂಬದವರೂ ದಿಗ್ಭ್ರಾಂತ​ರಾ​ಗಿ​ದ್ದಾರೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಪ್ರಕೃತಿ ವಿಕೋಪದಿಂದಾಗಿ ಪೊಲೀಸ್‌ ಸಿಬ್ಬಂದಿ ಮನೆಯಲ್ಲಿದ್ದ ಪಾತ್ರೆ-ಪಗಡೆ, ಬಟ್ಟೆ-ಹಾಸಿಗೆ, ಪೀಠೋಪಕರಣಗಳು, ಒಡವೆ-ವಸ್ತುಗಳು ಹೀಗೆ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಹಾನಿಗೊಳಗಾಗಿವೆ. ತಾತ್ಕಾಲಿಕವಾಗಿ ಸಂತ್ರಸ್ತರಿಗೆ ಧೈರ್ಯ ತುಂಬಿದ ನೆರೆಹೊರೆಯವರು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡುವುದರ ಜೊತೆಗೆ ತಾತ್ಕಾಲಿಕ ವಸತಿ, ಊಟೋಪಚಾರ, ಬಟ್ಟೆ-ಬರೆಗಳನ್ನು ಒದಗಿಸಿದ್ದಾರೆ. ಆದರೆ ಮನೆಯಲ್ಲಿದ್ದ ಗೃಹಬಳಕೆ ವಸ್ತುಗಳನ್ನು ಹೊರತೆಗೆಯಲು ನೆರವಾಗಲು ಯಾರೂ ಮುಂದೆ ಬರುತ್ತಿಲ್ಲ. ನಮಗಾದ ಹಾನಿ ಬಗ್ಗೆ ಯಾರೂ ಯೋಚಿಸುತ್ತಿಲ್ಲ ಎನ್ನುತ್ತಾರೆ ಪೊಲೀಸ್‌ ಸಿಬ್ಬಂದಿ ಕುಟುಂಬಸ್ಥರು. ಒಂದು ಕಡೆ ಪೊಲೀಸರು ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದರೆ ಇನ್ನೊಂದು ಕಡೆ ಅವರ ಕುಟುಂಬವೇ ಈಗ ಬೀದಿಗೆ ಬಿದ್ದಿದೆ.

Follow Us:
Download App:
  • android
  • ios