ಬೆಳ್ತಂಗಡಿ[ಆ.12]: ತಾಲೂಕಿನ ಮೂರು ದಿಕ್ಕುಗಳಲ್ಲಿ ಆದ ಭೂ ಕುಸಿತ, ನಾಲ್ಕು ನದಿಗಳಲ್ಲಿ ಕಂಡು ಬಂದ ಭೀಕರ ಪ್ರವಾಹ ಕಳೆದ ಮಳೆಗಾಲದಲ್ಲಿ ಕೊಡಗು ಮತ್ತಿತರ ಕಡೆಗಳಲ್ಲಿ ನಡೆದ ಪ್ರಕೃತಿ ವಿಕೋಪಗಳಂತೆಯೇ ಶುಕ್ರವಾರ ನಡೆದಿರುವುದು ನಿಧಾನವಾಗಿ ಬೆಳಕಿಗೆ ಬರುತ್ತಿದೆ. ದಿಡುಪೆ ಎಂಬಲ್ಲಿಂದ ನೋಡಿದರೆ ಇದರ ಸಂಪೂರ್ಣ ಚಿತ್ರಣ ದೊರಕುತ್ತದೆ. ಜೋಡುಪಾಲದ ದೃಶ್ಯಗಳು ಕಣ್ಣ ಮುಂದೆ ಬರುತ್ತವೆ. ಇಲ್ಲಿನ ಸುತ್ತಲಿನ ಗ್ರಾಮಗಳ ಸ್ವರೂಪವೇ ಬದಲಾಗಿದೆ.

ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ನಡೆದ ಈ ಭೂ ಕುಸಿತವು ಅಪಾರ ಪ್ರಮಾಣದ ಮಣ್ಣು ಮಾತ್ರವಲ್ಲದೆ, ಬೃಹತ್‌ ಮರಗಳನ್ನು, ಟನ್‌ಗಟ್ಟಲೆ ಮರಳನ್ನು ಕೆಳಗಿನ ಪ್ರದೇಶಗಳಿಗೆ ದೂಡಿದೆ. ಇದರಿಂದ ತೊಂದರೆಗೆ ಒಳಗಾದ ಅರಣ್ಯದ ತಪ್ಪಲು ಪ್ರದೇಶಗಳಲ್ಲಿ ವಾಸಿಸುತ್ತಿರುವ ಹಲವಾರು ಕುಟುಂಬಗಳನ್ನು ಎನ್‌ಡಿಆರ್‌ಎಫ್‌ ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ. ಕಳೆದೆರಡು ದಿನಗಳಿಂದ ಬೆಟ್ಟದ ಬೆನ್ನಿನ ಭಾಗದಲ್ಲಿ ಹಲವೆಡೆ ಬಂಡೆ,ಮಣ್ಣುಜಾರಿದ ಸ್ಥಿತಿಯಲ್ಲಿರುವುದು ಶನಿವಾರ ರಾತ್ರಿ ಕುಸಿದಿದೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ನೂರಾರು ಮೀಟರ್‌ನಷ್ಟುಜಾರಿ ಹೋಗಿದೆ. ಭೂಕುಸಿತದೊಂದಿಗೆ ಬಂದ ಭಾರಿ ಮಳೆಯಿಂದಾಗಿ ಮಣ್ಣಿನ ಕೆಳಪದರದಲ್ಲಿ ನೀರು ಸೇರಿಕೊಂಡು ಮೇಲ್ಪದರವೇ ಜಾರಿಹೋಗುವ ಪ್ರಕೃತಿಯ ವಿದ್ಯಮಾನ ದಿಡುಪೆ, ಚಾರ್ಮಾಡಿ ಹಾಗೂ ಶಿಶಿಲದಲ್ಲಿ್ಲ ನಡೆದಿದೆ. ಕುದುರೆಮುಖ ಶ್ರೇಣಿಯ ತೆಕ್ಕೆಯಲ್ಲಿರುವ ನಾವೂರು, ಇಂದಬೆಟ್ಟು, ದಿಡುಪೆ, ಕೊಲ್ಲಿ ಮುಂತಾದ ಹಳ್ಳಿಗಳು ಪ್ರಕೃತಿ ವಿಕೋಪಕ್ಕೆ ಬಲಿಯಾಗಿವೆ.

ಉರುಳಿದ ಧರೆ:

ದಿಡುಪೆಯ ಎದುರಿನ ಪರ್ವತ ಶ್ರೇಣಿಯಲ್ಲಿರುವ ಬಲ್ಲಾಳರಾಯನ ದುರ್ಗ, ಎರ್ಮಾಯಿ ಫಾಲ್ಸ್‌ ಇರುವ ಪ್ರದೇಶ, ಆನಡ್ಕ ಜಲಪಾತದ ಸ್ಥಳ, ಆನಡ್ಕ ಜಲಪಾತದ ಪರಿಸರದಲ್ಲಿ ಬೃಹತ್‌ ಪ್ರಮಾಣದಲ್ಲಿ ಧರೆ ಉರುಳಿದೆ.

ಶುಕ್ರವಾರ ಸಂಜೆ ಬೃಹತ್‌ ಪ್ರಮಾಣದಲ್ಲಿ ಮರಗಳೊಂದಿಗೆ ನೀರುಕೂಡಾ ಭಾರಿ ಪ್ರವಾಹದಲ್ಲಿ ಹರಿದುಬಂದಿತ್ತು. ಸಣ್ಣ ತೊರೆ ಹರಿಯುತ್ತಿದ್ದಜಾಗವೀಗ ಮೂರು ಪಟ್ಟು ದೊಡ್ಡದಾಗಿ ನದಿಯಾಗಿ ಮಾರ್ಪಾಡು ಹೊಂದಿದೆ ಎನ್ನುತ್ತಾರೆ ಸ್ಥಳೀಯರು. ದಿಡುಪೆ ಗ್ರಾಮದ ಎಡ ಬಲಗಳಲ್ಲಿ ಗುಡ್ಡಗಳು ಕಾಣ ಸಿಗುತ್ತವೆ. ಅಲ್ಲಿ ದುರ್ಗದ ಬೆಟ್ಟ, ಸುಂಕಸಾಲೆ, ಹಳಿಗುಂದ, ಇರಬೈಲು ಊರುಗಳಿದ್ದು ಅಲ್ಲಿ ಕನಿಷ್ಠ 12 ಕಡೆಗಳಲ್ಲಿ ಹೊಸ ಕುಸಿತಗಳು ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬದಲಾಯ್ತು ಊರಿನ ಚಿತ್ರಣ:

ಕಂಡರಿಯದ ಜಲಪ್ರವಾಹದಿಂದಾಗಿ ತಾಲೂಕಿನ ಉತ್ತರ ದಿಕ್ಕಿನ ಕೊಲ್ಲಿ, ಕಿಲ್ಲೂರು, ಕಾಜೂರು, ದಿಡುಪೆ, ಕಡಿರುದ್ಯಾವರ, ನಿಡಿಗಲ್‌, ಕುಲ್ಲಾವು, ಮಲ್ಲ, ನಾವೂರು, ಸುಳ್ಯೋಡಿ, ಕುಂಡಡ್ಕ, ಮುಳಿಪಡ್ಪು, ನರ್ನೊಟ್ಟು, ಬರೆಮೇಲು, ಪುಣ್ಕೆದಡಿ, ಕೂಡುಬೆಟ್ಟು ಹಾಗೂ ಪೂರ್ವ ದಿಶೆಯಚರ್ಮಾಡಿ, ನೆರಿಯ, ಬೀಟಿಗೆ, ಚಿಬಿದ್ರೆ, ಅಂತರ, ಕೊಳಂಬೆ, ಅನಾರು, ಹೊಸ್ಮಠ, ಬಾಂಜಾರುಮಲೆ, ಕಾಟಾಜೆ, ಪರ್ಪಳ ಮುಂತಾದ ಪ್ರದೇಶಗಳು ತಮ್ಮ ಮೊದಲಿನ ಚಿತ್ರಣವನ್ನು ಬದಲಿಸಿಕೊಂಡಿವೆ. ಮತ್ತೆ ಎಂದಿನಂತಾಗಲು ವರ್ಷಗಳೇ ಬೇಕು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.