ಕರುನಾಡ ಮಹಾಮಳೆ ಇನ್ನೆಷ್ಟು ದಿನ, ಲೆಕ್ಕ ಕೊಟ್ಟ ಹವಾಮಾನ ಇಲಾಖೆ
ಅಯ್ಯಯ್ಯೋ ಮಳೆಗೆ ಮುಳುಗೇ ಹೋಯ್ತು ಬದುಕು/ ರಣ ಭಯಂಕರ ಪ್ರವಾಹಕ್ಕೆ 12 ಜೀವ ಬಲಿ/ ಕಣ್ಣೆದುರೆ ಮುರಿದು ಬಿದ್ದ ಮನೆಗಳು, ಸಹಾಯಕ್ಕಾಗಿ ಅಂಗಲಾಚಿದ ಜನರು/
ಬೆಂಗಳೂರು[ಆ. 08] ಮಹಾರಾಷ್ಟ್ರ, ಮಲೆನಾಡಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಕರುನಾಡನ್ನೇ ಮುಳುಗಿಸಿದೆ. ನೆರೆ ಅಬ್ಬರ, ನದಿಗಳ ಭೋರ್ಗರೆತಕ್ಕೆ ಗ್ರಾಮ, ಗ್ರಾಮಗಳೇ ಜಲಾವೃತವಾಗಿವೆ. ಎಷ್ಟೋ ಕುಟುಂಬಗಳು ಸೂರು ಕಳೆದುಕೊಂಡು ಕಂಗಾಲಾಗಿವೆ.
ಇನ್ನು 2 ದಿನ ಇದೇ ರೀತಿಯ ರಣ ಮಳೆ ಮುಂದುವರಿಯಲಿದೆ. ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಹೇರಲಾಗಿದ್ದು ಎರಡು ದಿನ ಮಹಾಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜಲಪ್ರಳಯದಲ್ಲಿ ಕರುನಾಡು: ಸರ್ಕಾರ ಕೊಟ್ಟ ಮಾಹಿತಿ ಜಾಲಾಡು!
ಯಾದಗಿರಿಯ ಕೌಳೂರಿನಲ್ಲಿ ಪಂಪ್ಸೆಟ್ ರಿಪೇರಿಗೆ ಹೋಗಿದ್ದ ಸಾಬರೆಡ್ಡಿ ಭೀಮಾ ನದಿಯಲ್ಲಿ ಕೊಚ್ಚಿ ಹೋಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಉಡುಪಿಯ ಬ್ರಹ್ಮಾವರ ಎಂಬಲ್ಲಿ ಮನೆಯ ಗೋಡೆ ಕುಸಿದು ಚನ್ನಮ್ಮ ಪಾಲಿಕಾರ್ ಸಾವನ್ನಪ್ಪಿದ್ದಾರೆ.
ಮುಧೋಳದಲ್ಲಿ ಪ್ರವಾಹಕ್ಕೆ ಸಿಲುಕಿದ ಇಬ್ಬರು ಯುವಕರು ಜೀವ ರಕ್ಷಣೆಗೆ ಅಂಗಲಾಚುತ್ತಿದ್ದ ದೃಶ್ಯವೆಂತೂ ಮಳೆಯ ಘೋರ ಕತನ ಸಾರುತ್ತಿತ್ತು. ಹುಬ್ಬಳ್ಳಿಯ ಬೆಣ್ಣೆಹಳ್ಳದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ, ಹೆಬಸೂರು ಸಿದ್ದಯ್ಯ ಸ್ವಾಮೀಜಿ ಹಾಗೂ ಭಕ್ತರು ನೆರವಾಗಿ ಅಂಗಲಾಚಿದರು.
ಮಹಾ ಮಳೆಗೆ ಮೂಕ ಪ್ರಾಣಿಗಳ ಕಥೆ ಕೇಳತೀರಾದಾಗಿದೆ. ಗದಗದಲ್ಲಿ ಮಳೆಯ ಒಡೆತಕ್ಕೆ 25ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, ರೈತರು ಕಣ್ಣೀರಿಟ್ಟಿದ್ದಾರೆ- ಚಿಕ್ಕಮಗಳೂರಿನ ಮಳೆಯ ರೌದ್ರ ನರ್ತನ ಜೋರಾಗಿದೆ. ಹೇಮಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ನೀರಲ್ಲಿ ಕೊಚ್ಚಿಹೋದ ಯುವಕನ ಮೃತದೇಹಕ್ಕಾಗಿ ಶೋಧ ನಡೆದಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರದಲ್ಲೂ ಗೊಂದಲ ಮುಂದುವರಿದಿದೆ. ಸಿಎಂ ಯಡಿಯೂರಪ್ಪಗೆ ನೋವು ಹೇಳಲು ಬಂದ ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಬಿಡದೆ ಪೊಲೀಸರು ದರ್ಪ ತೋರಿದ ಘಟನೆಯೂ ವರದಿಯಾಗಿದೆ. 40 ವರ್ಷಗಳ ಬಳಿಕ ರಾಜ್ಯದಲ್ಲಿ ಸುರಿಯುತ್ತಿರುವ ಕುಂಭದ್ರೊಣ ಮಳೆಗೆ 21 ತಾಲೂಕುಗಳು ಮುಳುಗಿ, 283 ಹಳ್ಳಿಗಳು ಅಕ್ಷರಶಃ ತತ್ತರಿಸಿದ್ದು, ಸಂತ್ರಸ್ತರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.