ಬೆಂಗಳೂರು, [ಆ.08]: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ 12 ಜಿಲ್ಲೆಗಳ 51 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಸಮರೋಪಾದಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದಾಗಿ ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಮಲಪ್ರಭಾ ಮತ್ತು ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಿಎಂ ಬಿ.ಎಸ್​. ಯಡಿಯೂರಪ್ಪ 2 ದಿನಗಳಿಂದ ಪ್ರವಾಹದಿಂದಾಗಿ ತೀವ್ರ ಹಾನಿಗೊಳಗಾಗಿರುವ ಬೆಳಗಾವಿ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿದ್ದು, ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. 

ಈಗ ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿ ಕುರಿತು ಇಂದು [ಗುರುವಾರ] ಮಾಹಿತಿ ಬಿಡುಗಡೆ ಮಾಡಿದ್ದು, ಪ್ರವಾಹದಿಂದಾಗಿ 503 ಹಳ್ಳಿಗಳು ಸಂಪೂರ್ಣವಾಗಿ ಮುಳುಗಡೆಯಾಗಿದೆ. 44,000 ಸಂತ್ರಸ್ತರನ್ನು ರಕ್ಷಣೆ ಮಾಡಲಾಗಿದೆ. ಪ್ರವಾಹದಿಂದಾಗಿ ಇದುವರೆಗೆ 9 ಜನರು ಮೃತಪಟ್ಟಿದ್ದು, 52 ಜಾನುವಾರುಗಳು ಅಸುನೀಗಿವೆ ಎಂದು ತಿಳಿಸಿದೆ.

ತತ್ತರಿಸಿದ ಉತ್ತರಕರ್ನಾಟಕಕ್ಕೆ ಸುಧಾಮೂರ್ತಿ 10 ಕೋಟಿ ರು ನೆರವು

ಒಟ್ಟು 1,48,293 ಹೆಕ್ಟೇರ್​ ಬೆಳೆ ಪ್ರವಾಹದಿಂದಾಗಿ ನಾಶವಾಗಿದೆ. 2611 ಮನೆಗಳು ಹಾನಿಗೀಡಾಗಿವೆ. ಪ್ರವಾಹ ಸಂತ್ರಸ್ತರಿಗಾಗಿ 272 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿ 17 ಸಾವಿರ ಜನರಿಗೆ ಆಶ್ರಯ ನೀಡಲಾಗಿದೆ.

ಇದುವರೆಗೆ 17 ಸಾವಿರ ಜಾನುವಾರುಗಳನ್ನು ರಕ್ಷಿಸಲಾಗಿದ್ದು, 3000 ಜಾನುವಾರುಗಳಿಗೆ ಕ್ಯಾಂಪ್​ನಲ್ಲಿ ರಕ್ಷಣೆ ನೀಡಲಾಗಿದೆ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 71 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. 7650 ಕುಟುಂಬಗಳ 27699 ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.