ಮೈಸೂರು [ಆ.10]:  ಕಳೆದ ನಾಲ್ಕು ದಿನಗಳಿಂದ ಸತತ ಮಳೆಯಾಗುತ್ತಿರುವುದರ ಜೊತೆಗೆ ಕಬಿನಿ ಜಲಾಶಯದಿಂದ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ಕಪಿಲಾ ನದಿಗೆ ಹರಿಯ ಬಿಡಲಾಗುತ್ತಿದೆ. ಇದರ ಪರಿಣಾಮ ಶುಕ್ರವಾರ ಮೈಸೂರು ಜಿಲ್ಲೆಯ ಹತ್ತಾರು ಸೇತುವೆಗಳು, ಗ್ರಾಮಗಳು ಜಲಾವೃತವಾಗಿವೆ. ಮನೆ ಕುಸಿದು ಒಬ್ಬ ವ್ಯಕ್ತಿ ಮೃತನಾಗಿದ್ದಾನೆ. ಹುಣಸೂರಿನಲ್ಲಿ ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹಕ್ಕೆ ಸಿಲುಕ್ಕಿದ್ದ ವೃದ್ಧರೊಬ್ಬರನ್ನು ನುರಿತ ಈಜುಗಾರರು ರಕ್ಷಿಸಿದ್ದಾರೆ.

ಹುಣಸೂರು ತಾಲೂಕು ವೀರನಹೊಸಳ್ಳಿ ಹಾಡಿಯಲ್ಲಿ ಮನೆ ಕುಸಿದು ಗಣಪತಿ (35) ಮೃತಪಟ್ಟಿದ್ದಾರೆ. ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಂಜನಗೂಡಿನ ಸಮೀಪ ಮಲ್ಲನಮೂಲೆ ತಿರುವಿನಲ್ಲಿ ಕಬಿನಿ ನದಿಯ ನೀರು ಹೆದ್ದಾರಿಗೆ ನುಗ್ಗಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹೆಜ್ಜಿಗೆæ ಸೇತುವೆ, ಹುಲ್ಲಹಳ್ಳಿ ಸಮೀಪದ ರಾಂಪುರ ಸೇತುವೆ ಮತ್ತು ಸುತ್ತೂರು ಸೇತುವೆಯಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಈ ಮಾರ್ಗಗಳನ್ನು ಮುಚ್ಚಲಾಗಿದೆ. ನಂಜನಗೂಡಿನ ಸೋಮೇಶ್ವರ ದೇವಸ್ಥಾನ ಜಲಾವೃತವಾಗಿದೆ. 3 ಪರಿಹಾರ ಕೇಂದ್ರ ತೆರೆಯಲಾಗಿದೆ.

ಎಚ್‌.ಡಿ.ಕೋಟೆ ತಾಲೂಕಿನ ಸರಗೂರು- ತಿಂಡಸೋಗೆ ರಸ್ತೆಯಲ್ಲಿನ ಸೇತುವೆ ಕುಸಿತವಾಗಿದೆ. ಹ್ಯಾಂಡ್‌ ಪೋಸ್ಟ್‌- ಸರಗೂರು ರಸ್ತೆ ಜಲಾವೃತಗೊಂಡಿದೆ. ತುಂಬಸೋಗೆ, ಮಾದಾಪುರ- ಚೆಕ್ಕೂರು, ಹೊಮ್ಮರಗಳ್ಳಿ ಎಂ.ಸಿ ತಳಲು- ಹೊಸಕೋಟೆ ಸೇತುವೆ ಜಲಾವೃತಗೊಂಡಿದೆ. ಡಿ.ಬಿ.ಕುಪ್ಪೆ, ತಿಮ್ಮನಹೊಸಹಳ್ಳಿ, ಕಡೆಗದ್ದೆ, ಡಿ.ಬಿ.ಕುಪ್ಪೆ ಆಣೆ ಮಾಳ ಗ್ರಾಮಗಳು ಜಲಾವೃತಗೊಂಡಿವೆ. ಮಚ್ಚೂರು, ಹೊಸೂರು ಮಚ್ಚೂರು ಹಾಡಿಗೆ ನೀರು ಬಂದಿರುವುದರಿಂದ ಅಲ್ಲಿಯ ಜನರನ್ನು ಸ್ಥಳಾಂತರಿಸಲಾಗಿದೆ. ಕಾನನ ಹೊಸಹಳ್ಳಿ ಗ್ರಾಮದಲ್ಲಿ ನೀರು ನುಗ್ಗಿರುವುದರಿಂದ ಸುಮಾರು 30 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನೇಗತ್ತೂರು, ಬಿಲ್ಲೇನಹೊಸಹಳ್ಳಿ ಮತ್ತು ಹನಗೋಡು ಗ್ರಾಮಗಳು ಜಲಾವೃತಗೊಂಡಿದ್ದು, ರಕ್ಷಣೆಗಾಗಿ ಬೋಟ್‌ಗಳನ್ನು ಕಳುಹಿಸಲಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆ ಅಣಗಳ್ಳಿ, ಹರಳೆ ಸೇರಿದಂತೆ ವಿವಿಧ ಹಳ್ಳಿಯ ಜನರಿಗೆ ಸುರಕ್ಷಿತ ಸ್ಥಳಕ್ಕೆ ಬರುವಂತೆ ಡಿಸಿ ಮನವಿ ಮಾಡಿದ್ದಾರೆ. ಬಂಡೀಪುರ ಹುಲಿಯೋಜನೆಯ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ವಲಯದ ಹಿರಿಕೆರೆ ತುಂಬಿ ಕೋಡಿ ಬಿದ್ದಿದೆ. ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಸುಮಾರು 1 ಲಕ್ಷ ಕ್ಯುಸೆಕ್‌ ದಾಟಿದೆ. ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಅಲ್ಲದೇ ತಾರಕ ಜಲಾಶಯದಿಂದ 15 ಸಾವಿರ, ನುಗು ಜಲಾಶಯದಿಂದ 10 ಸಾವಿರ ಕ್ಯುಸೆಕ್‌ ನೀರನ್ನು ಕಬಿನಿ ನದಿಗೆ ಬಿಡಲಾಗುತ್ತಿದೆ.