ಶಿವಾನಂದ ಗೊಂಬಿ
ಹುಬ್ಬಳ್ಳಿ[ಆ. 11]  ಇಲ್ಲಿಂದ ಜೀವಂತ ಹೋದ್ರೆ ಈ ಸಣ್ಣ ರಾಮ್ಯಾ, ದೊಡ್ಡ ರಾಮ್ಯಾನ (2 ನಾಯಿಗಳು) ಕರ‌್ಕೊಂಡೇ ಹೋಗ್ಬೇಕು. ಇಲ್ಲಂದ್ರೆ ಇಲ್ಲೇ ನಾನೂ ಸಾಯಬೇಕು ಅಂಥ ಅನ್ಕೊಂಡಿದ್ದೆ. ಕೊನೆಗೂ ಎಲ್ರೂ ಬದುಕಿ ಬಂದೇವು. ಭಾಳ ಖುಷಿ ಆತ್!’

ಇದು ನವಲಗುಂದ ತಾಲೂಕಿನ ಇಂಗಳಹಳ್ಳಿ ಹಾಗೂ ಅಣ್ಣಿಗೇರಿ ತಾಲೂಕಿನ ಶಿಶ್ವಿನಹಳ್ಳಿ ಮಧ್ಯದಲ್ಲಿ ಬರುವ ಬೆಣ್ಣಿಹಳ್ಳದಲ್ಲಿ ಸಿಲುಕಿ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಹೊರಬಂದ ವಾಚ್‌ಮನ್ ಹನುಮಂತಪ್ಪ ನಲವಡಿ (60) ಅವರ ಸಾವು ಗೆದ್ದು ಬಂದ ನಂತರದ ಮಾತು.

ಉತ್ತರ ಕರ್ನಾಟಕ ಪ್ರವಾಹಕ್ಕೆ ಸನ್ನಿ ಲಿಯೋನ್‌ರಿಂದ 2 ಕೋಟಿ, ಸತ್ಯವೇ?

ಈ ಮಾತು ಹೇಳುವಾಗ ಆತನ ಮೊಗದಲ್ಲಿ ತನ್ನೆರಡೂ ನಾಯಿಗಳೊಂದಿಗೆ ಜೀವಂತವಾಗಿ ಹೊರಬಂದ ಖುಷಿ ಮಿನುಗುತ್ತಿತ್ತು. ತನಗೆ ಹಳ್ಳ ದಾಟಿಕೊಂಡು ಬರಲು ಅವಕಾಶ ಇದ್ದಾಗಲೂ ತನ್ನೆರಡೂ ನಾಯಿಗಳನ್ನು ಕರೆದುಕೊಂಡು ಬರಲು ಸಧ್ಯವಾಗದೇ ಇದ್ದಾಗ ರಾತ್ರಿಯಿಡೀ ಅವುಗಳೊಂಡಿಗೆ ಪ್ರವಾಹದಲ್ಲೇ ಕಳೆದಿದ್ದಾನೆ.

ಯಾರೀತ; ಏನೀ ಕಥೆ: ಈತ ಇಂಗಳಹಳ್ಳಿ ಗ್ರಾಮದವನು. ಕಳೆದ ಐದಾರು ತಿಂಗಳಿಂದ ಈತ ಹಾಗೂ ಈತನ ಮಗ ಇಬ್ಬರು ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ವಾಚ್‌ಮನ್ ಕೆಲಸ ಮಾಡುತ್ತಿದ್ದಾರೆ. ಹಗಲು ರಾತ್ರಿ ಇಲ್ಲೇ ಠಿಕಾಣಿ ಇವರದ್ದು. ಮಗನಿಗೆ ಮೈಯಲ್ಲಿ ಹುಷಾರಿಲ್ಲವೆಂದು ಮನೆಯಲ್ಲೇ ಉಳಿದಿದ್ದ. ಹೀಗಾಗಿ ಈತ ಒಬ್ಬನೇ ಕಾರ್ಮಿಕರೊಂದಿಗೆ ರಾತ್ರಿ ಉಳಿದಿದ್ದ. ತನ್ನ ಸಾಕು ನಾಯಿಗಳಾದ ಸಣ್ಣ ರಾಮ್ಯಾ ಹಾಗೂ ದೊಡ್ಡ ರಾಮ್ಯಾ ಅವನ್ನು ಬಿಟ್ಟು ಇರುವುದಿಲ್ಲ. ವು ಕೂಡ ಅಷ್ಟೇ ಆತನನ್ನು ಬಿಟ್ಟು ಕದಲುವುದಿಲ್ಲ.

ತನ್ನ ಕೆಲಸದ ಸ್ಥಳದಲ್ಲೇ ಇವುಗಳನ್ನು ಇಟ್ಟುಕೊಂಡಿದ್ದಾನೆ. ನಿನ್ನೆ ರಾತ್ರಿ ಕೂಡ ಮೊದಲು ಅವುಗಳಿಗೆ ಊಟ ಹಾಕಿದ್ದಾನೆ. ಬಳಿಕ ತಾನು ಊಟ ಮಾಡಬೇಕು ಎಂದುಕೊಂಡು ಹೊರಗೆ ಹೋಗಿ ಮುಖ ತೊಳೆಯಲು ಹೋದಾಗ ಸುತ್ತಲೂ ನೀರು ಬರುತ್ತಿರುವುದು ಗೊತ್ತಾಗಿದೆ. ಇನ್ನು ಇಲ್ಲೇ ಸಿಲುಕುತ್ತೇವೆ ಈಗಲೇ ಹೋಗಿಬಿಟ್ಟರಾಯ್ತು ಎಂದುಕೊಂಡು ತನ್ನೊಂದಿಗೆ ಇದ್ದ ಇತರೆ ಓಡಿಸಾ ಮೂಲದ ಕಾರ್ಮಿಕರಿಗೆ, ‘ಚಲೋ ಮೇ ಲೇಕೆ ಚಲ್ತಾವೂಂ’ ಅಂತ ಹೇಳಿದ್ದಾನೆ.

ತನ್ನೊಂದಿಗೆ ಸಣ್ಣ ನಾಯಿಮರಿಯನ್ನು ಎತ್ತಿಕೊಂಡಿದ್ದಾನೆ. ಇನ್ನೊಂದು ನಾಯಿ ದೊಡ್ಡದಿದೆ. ಹೀಗಾಗಿ ಹಿಂದೆ ಬರುತ್ತದೆ ಎಂದುಕೊಂಡು ಮುಂದೆ ಸಾಗಿದ್ದಾನೆ. ಈತನೊಂದಿಗೆ ಓಡಿಸಾ ಮೂಲದ ಇಬ್ಬರು ಕಾರ್ಮಿಕರು ಇನ್ನೊಂದು ನಾಯಿಯನ್ನು ಎತ್ತಿಕೊಂಡು ಸಾಗಿದ್ದಾರೆ. ಆದರೆ, ಐವತ್ತು ಹೆಜ್ಜೆ ದಾಟುವಷ್ಟರಲ್ಲೇ ಪ್ರವಾಹ ಹೆಚ್ಚಲು ಪ್ರಾರಂಭವಾಗಿದೆ. ಆಗ ಈತನೊಂದಿಗೆ ಬಂದಿದ್ದ ಓಡಿಸ್ಸಾದ ಇಬ್ಬರು ಕಾರ್ಮಿಕರು ಜೆಸಿಬಿಯತ್ತ ಓಡಿ ಹೋಗಿ ನಾಯಿಯೊಂದಿಗೆ ಜೆಸಿಬಿ ಏರಿದ್ದಾರೆ. ಇನ್ನು ತಾನಷ್ಟೇ ಒಂದೇ ನಾಯಿಮರಿಯೊಂದಿಗೆ ಹೋಗಿ ಏನು ಮಾಡಲಿ. ಇಲ್ಲಿಂದ ಹೋದರೆ ಎರಡು ನಾಯಿಗಳೊಂದಿಗೆ ಹೋದರಾಯ್ತು. ಇಲ್ಲವೇ ಅವುಗಳೊಂದಿಗೆ ಇಲ್ಲೇ ಇಹಲೋಕ ತ್ಯಜಿಸಿದರಾಯ್ತು ಎಂದುಕೊಂಡು ಈಜು ಬರುತ್ತಿದ್ದರೂ, ಹಳ್ಳ ದಾಟಿ ರೂಢಿಯಿದ್ದರೂ ತಾನು ಕೂಡ ತಾನೊಬ್ಬನೆ ಹೋಗದೇ ನಾಯಿಮರಿಯೊಂದಿಗೆ ಜೆಸಿಬಿ ಏರಿ ಕುಳಿತಿದ್ದಾನೆ. 

ಹುಬ್ಬಳ್ಳಿ: ಎದೆಮಟ್ಟದ ನೀರಿನಲ್ಲಿ ಹಸುಗೂಸನ್ನು ಹೊತ್ತು ಸಾಗಿದ ಭೂಪ

ನಂಬಿಕೆ ಇರಲಿಲ್ಲ: ಆದರೆ, ರಾತ್ರಿಯಿಡೀ ಹೀಗೆ ಜೆಸಿಬಿಯಲ್ಲೇ ಇಬ್ಬರು ಕಾರ್ಮಿಕರು ಹಾಗೂ ತನ್ನೆರಡು ನಾಯಿಗಳೊಂದಿಗೆ ಕುಳಿತ್ತಿದ್ದ ಈತನಿಗೆ ಜೀವಂತವಾಗಿ ಊರು ಸೇರುವ ಯಾವುದೇ ಭರವಸೆ ಇರಲಿಲ್ಲ. ನೀರಿನ ಸೆಳೆವೂ ಜೋರಾಗಿತ್ತು. ಇಲ್ಲಿಂದ ಹೋದರೆ ನಾಯಿಗಳೊಂದಿಗೆ ಹೋಗಬೇಕು, ಇಲ್ಲವೇ ಇಲ್ಲಿ ಪ್ರಾಣಬಿಡಬೇಕು ಎಂದುಕೊಂಡಿನಂತೆ ಹನುಮಂತಪ್ಪ.

ಕೊನೆಗೆ ಎನ್‌ಡಿಆರ್‌ಎಫ್ ಈತನನ್ನು ನಾಯಿಗಳ ಸಮೇತ ಸುರಕ್ಷಿತವಾಗಿ ದಡಕ್ಕೆ ತಂದಾಗಲೂ ನಾಯಿಮರಿಯನ್ನು ಬಿಗಿದಪ್ಪಿಯೇ ಹಿಡಿದುಕೊಂಡಿದ್ದ. ನಗು ಮುಖದಿಂದಲೇ ‘ಈ ಎರಡು ರಾಮ್ಯಾಗಳು ನನ್ನ ಪ್ರಾಣಾ ರ‌್ರಿ. ಇವನ್ ಬಿಟ್ ಹ್ಯಾಂಗ್ ಬರಲಿ. ಮನಸ್ ಬರಲಿಲ್ಲ... ಹೀಂಗಾಗಿ ರಾತ್ರಿ ಅಲ್ಲೇ ಕಳೆದೆ’ ಎಂದು ನಾಯಿಯೊಂದಿಗೆ ಹೆಜ್ಜೆ ಹಾಕಿದ. ಈತನಿಗೆ ನಾಯಿಗಳ ಮೇಲೆ ಇರುವ ಪ್ರೀತಿ ಕಂಡು ಶಾಸಕರು, ಅಧಿಕಾರಿಗಳು ಸಹ ಒಂದು ಕ್ಷಣ ಮೌನವಾದರು.