ಹುಬ್ಬಳ್ಳಿ, [ಆ.11]: ಕುಂಭದ್ರೋಣ ಮಳೆ. ಎದೆಯವರೆಗೂ ನೀರು. ಭಾರೀ ನೀರಿನ ಸೆಳವು, ನಡೆದಾಡಲೂ ಸಹ ಸಾಧ್ಯವಾಗದಂಥ ಪರಿಸ್ಥಿತಿ. ಬುಟ್ಟಿಯಲ್ಲಿ ಹಸುಗೂಸು ಹೊತ್ತುಕೊಂಡು ಸಾಗುತ್ತಿದ್ದ ಯುವಕ. ಹಿಂದೆ ನಾಲ್ಕೈದು ಜನ ಸೇರಿಕೊಂಡು ಒಬ್ಬರ ಕೈ ಮತ್ತೊಬ್ಬರು ಹಿಡಿದುಕೊಂಡು ಮಹಿಳೆಯನ್ನು ಸಾವಕಾಶವಾಗಿ ಮಳೆ ನೀರಲ್ಲೇ ಸಾಗಿಸಿದರು..

ಇದು ಯಾವುದೇ ಚಿತ್ರದ ದೃಶ್ಯವಲ್ಲ. ಆದರೆ, ಬಾಹುಬಲಿ ಚಿತ್ರದಲ್ಲಿ ಅಮರೇಂದ್ರ ಬಾಹುಬಲಿ ಮಗುವಿದ್ದಾಗ ಅಜ್ಜಿ ದೇವಯಾನಿ ತುಂಬಿದ ಹೊಳೆಯಲ್ಲಿ ರಕ್ಷಿಸಿದ ದೃಶ್ಯ ನೆನಪಿಗೆ ಬಾರದೇ ಇರದು. ಇಂತಹದೊಂದು ದೃಶ್ಯಕ್ಕೆ ಸಾಕ್ಷಿಯಾಗಿದ್ದು ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮ.

ಸಂತ್ರಸ್ತರಿಗೆ ನೆರವು ನೀಡಿದ್ದಾಯ್ತು, ಈಗ ಜಾನುವಾರುಗಳಿಗೂ ಬೇಕು ನೆರವು

ಹೆಬಸೂರು ನಿವಾಸಿ ನಾಗಪ್ಪ ಹಡಪದ ಅವರ ಮಗಳು ಮಂಜುಳಾ ಹಾಗೂ ಆಕೆಯ ಒಂದು ತಿಂಗಳ ಕೂಸನ್ನು ಬಾಹುಬಲಿ ರೀತಿ ಗ್ರಾಮದ ನಾಲ್ಕಾರು ಜನ ಯುವಕರ ತಂಡ ರಕ್ಷಿಸಿ ಶ್ಲಾಘನೆಗೆ ಪಾತ್ರವಾಗಿದೆ. ಮಂಜುಳಾ ಚೊಚ್ಚಲ ಹೆರಿಗೆಗೆ ತವರು ಮನೆಗೆ ಬಂದಿದ್ದಳು. ಹೆರಿಗೆಯೂ ಆಗಿದೆ. ಆದರೆ ಅದೇ ಸಂದರ್ಭದಲ್ಲಿ ನೀರು ಉಕ್ಕೇರಿ ಗ್ರಾಮವನ್ನು ಆವರಿಸಿದ್ದು, ಇವರ ಮನೆಯೂ ಜಲಾವೃತವಾಗಿತ್ತು. ಈ ವೇಳೆಯಲ್ಲೇ ಇಂಥದೊಂದು ಘಟನೆ ನಡೆದಿದೆ.

ಘಟನೆ ಹಿನ್ನೆಲೆ
ಹೆಬಸೂರು ಗ್ರಾಮದಲ್ಲಿ ಬೆಣ್ಣಿಹಳ್ಳದ ಉಪಹಳ್ಳವಾದ ನಿರಗಿ ಹಳ್ಳ ಹರಿಯುತ್ತಿದೆ. ನಾಲ್ಕಾರು ದಿನಗಳಿಂದ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮಳೆಯ ಅಬ್ಬರಕ್ಕೆ ನಿರಗಿ ಹಳ್ಳ ಮೈದುಂಬಿ ಹರಿಯಲಾರಂಭಿಸಿದೆ. ಈ ಹಳ್ಳದ ಪಕ್ಕ ಗಣೇಶ ನಗರ ಬಡಾವಣೆಯಲ್ಲಿ 100ಕ್ಕೂ ಅಧಿಕ ಮನೆಗಳಿವೆ. ಅಲ್ಲಿಯೇ ಹಡಪದ ಅವರ ಮಣ್ಣಿನ ಮನೆಯೂ ಇದೆ. ಇದೇ ಮನೆಯಲ್ಲಿ ತಿಂಗಳ ಹಿಂದೆ ಮಂಜುಳಾ ಅವರ ಹೆರಿಗೆಯಾಗಿದೆ.

ಗುರುವಾರ ರಾತ್ರಿ 11 ಗಂಟೆಯ ಹೊತ್ತಿಗೆ ಹಳ್ಳದ ನೀರು ಮನೆಯೊಳಗೆಲ್ಲ ಹೊಕ್ಕಿದೆ. ಸ್ವಲ್ಪ ಹೊತ್ತಿನಲ್ಲೇ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಸ್ವಲ್ಪದರಲ್ಲೇ ಬಾಣಂತಿ, ಮಗು ಸೇರಿದಂತೆ ನಾಲ್ಕು ಜನ ಪಾರಾಗಿದ್ದಾರೆ. ಕೂಡಲೇ ಬಾಣಂತಿ ಹಾಗೂ ಮಗುವನ್ನು ನೆರೆಮನೆಗೆ ಸಾಗಿಸಲಾಗಿದ್ದು, ಆ ನೆರೆಮನೆಯೂ ಜಲಾವೃತ್ತವಾಗಿದೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರುತ್ತಲೇ ಇತ್ತು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗ್ರಾಮದ ಎಲ್ಲ ಕಡೆ ನೀರೇ ನೀರು. ಏನು ಮಾಡಬೇಕೆಂದು ಈ ದಂಪತಿಗಳಿಗೆ ತೋಚದಾಯಿತು. ಮುಂಜಾನೆಯ ವರೆಗೆ ಕಾದು ನೋಡಿದರಾಯಿತು ಎಂದು ಒಂದು ಕ್ಷಣ ಯೋಚಿಸಿದರೂ ಸಹ, ಅದು ದುಸ್ಸಾಹಸ ಎನಿಸಿ, ಬಾಣಂತಿ, ಮಗು ಇಬ್ಬರನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ರಾತ್ರಿಯೇ ಅಲ್ಲಿಂದ ಅವರನ್ನು ಸ್ಥಳಾಂತರ ಮಾಡಬೇಕೆಂದು ನಿರ್ಧರಿಸಿದರು. 

ಆದರೆ ಹೊರಗೆ ಎದೆಯ ಮಟ್ಟದ ವರೆಗೂ ನೀರು. ಮತ್ತಷ್ಟು ಏರುತ್ತಲೇ ಇತ್ತು. ಏನು ಮಾಡಬೇಕೆಂದು ತೋಚದೆ ತಲೆಯ ಮೇಲೆ ಕೈಹೊತ್ತು ಕುಳಿತರು. ಆದರೆ, ನೆರೆಯವರು ಎಲ್ಲರೂ ಧೈರ್ಯ ತುಂಬಿ ಸುರಕ್ಷಿತ ಸಾಗಿಸುವ ಬಗ್ಗೆ ಧೈರ್ಯ ಮಾಡಿದರು. ಕೊನೆಗೆ ಮಗುವನ್ನು ಬಟ್ಟೆಯಲ್ಲಿ ಗಟ್ಟಿಯಾಗಿ ಸುತ್ತಿ ಪ್ಲಾಸ್ಟಿಕ್ ಬುಟ್ಟಿಯಲ್ಲಿಟ್ಟಿದ್ದಾರೆ. 

ಆ ಪ್ಲಾಸ್ಟಿಕ್ ಬುಟ್ಟಿಯನ್ನು ನೆರೆಮನೆಯ ಬೂದಪ್ಪ ಕೋಳಿವಾಡ ತಲೆ ಮೇಲೆ ಹೊತ್ತು ಮಳೆಯಲ್ಲೇ ಮುಂದೆ ಹೆಜ್ಜೆ ಇಟ್ಟಿದ್ದಾನೆ. ಇನ್ನು ಬಾಣಂತಿ ಮಂಜುಳಾಳನ್ನು ತಂದೆ ನಾಗಪ್ಪ ಹಡಪದ, ತಾಯಿ ಗಿರಿಜವ್ವ ಹಾಗೂ ನೆರೆ ಮನೆಯವರಾದ ಕರಬಸಪ್ಪ ಹಡಪದ, ನಿಂಗಯ್ಯ ಕೋಳಿವಾಡ ಎಲ್ಲರೂ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಕರೆದುಕೊಂಡು ಹೋಗಿ ಅರ್ಧ ಕಿಲೋಮೀಟರ್ ವರೆಗೂ ಇರುವ ನೀರನ್ನು ದಾಟಿಸಿ ರಕ್ಷಿಸಿದ್ದಾರೆ. ಇದೀಗ ಬಾಣಂತಿ ಹಾಗೂ ಮಗು ಸುರಕ್ಷಿತವಾಗಿದ್ದಾರೆ.

ಫೋಟೋಗಳು: ಮುರಿದ ಮನೆಯಲ್ಲಿ ಸಾಮಗ್ರಿಗಳನ್ನು ಹುಡುಕುತ್ತಿರುವ ನಾಗಪ್ಪ ಹಡಪದ ದಂಪತಿ.