ಮೈಸೂರು (ಸೆ.24):  ಕೃಷಿ, ಎಪಿಎಂಸಿ ಕಾಯಿದೆ ತಿದ್ದುಪಡಿ ಸೇರಿ ಪ್ರಮುಖ ಮೂರು ಮಸೂದೆಗಳನ್ನು ಹಿಂದಕ್ಕೆ ಪಡಯುವಂತೆ ಆಗ್ರಹಿಸಿ ಸೆ. 25ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್‌ ಹಾಗೂ 28ಕ್ಕೆ ಕರ್ನಾಟಕ ಬಂದ್‌ಗೆ ಬೆಂಬಲ ನೀಡಲು ರೈತ, ದಲಿತ, ಕಾರ್ಮಿಕ ಐಕ್ಯತಾ ಸಮಿತಿ ನಿರ್ಧರಿಸಿದೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ರೈತರು, ದಲಿತರು, ಕಾರ್ಮಿಕರು ಸೇರಿ ವಿವಿಧ ಸಂಘಟನೆಯ ಪ್ರಮುಖರು ನಡೆಸಿ ಜಂಟಿ ಸುದ್ದಿಗೋಷ್ಠಿಯಲ್ಲಿ ಸಮಾಜವಾದಿ ಚಿಂತಕ ಪ. ಮಲ್ಲೇಶ್‌ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಹೋರಾಟದ ರೂಪುರೇಷೆಯನ್ನು ವಿವರಿಸಿದರು.

ಕೇಂದ್ರ ಸಮಿತಿಯ ತೀರ್ಮಾನದಂತೆ ಸೆ. 28ಕ್ಕೆ ಕರ್ನಾಟಕ್‌ ಬಂದ್‌ಗೆ ತೀರ್ಮಾನಿಸಲಾಗಿದೆ. ಇದಕ್ಕೆ ಮೈಸೂರು ಜಿಲ್ಲೆಯಲ್ಲಿಯೂ ಅಭೂತ ಪೂರ್ವ ಬೆಂಬಲ ನೀಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿರುವ ತಪ್ಪು ಸರಿಪಡಿಸಿಕೊಂಡು ಮಸೂದೆ ಹಿಂದಕ್ಕೆ ಪಡೆಯುವವರೆಗೆ ಹೋರಾಟ ಮುಂದುವರೆಯಲಿದೆ. ಬಂದ್‌ಗೆ ಬೆಂಬಲ ಸೂಚಿಸಿ ಎಲ್ಲಾ ಹಳ್ಳಿ, ತಾಲೂಕು ಕೇಂದ್ರಗಳಲ್ಲಿ ಹೋರಾಟ ನಡೆಯಲಿದೆ. ಆಟೋ ಚಾಲಕರು, ಕಾರ್ಮಿಕರು, ಹೊಟೇಲ್‌ ಮಾಲೀಕರ ಸಂಘದವರು, ವರ್ತಕರು ಈ ಹೋರಾಟಕ್ಕೆ ಬೆಂಬಲ ನೀಡಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಈ ಹಿಂದೆ ತಮ್ಮ ತಮ್ಮ ನಿಲುವಿನ ಕಾರಣಕ್ಕೆ ಪ್ರತ್ಯೇಕವಾಗಿ ಹೋರಾಟ ನಡೆಯುತ್ತಿತ್ತು. ಆದರೆ ಈಗ ಒಂದೇ ವೇದಿಕೆಯಡಿ ಎಲ್ಲರೂ ಐಕ್ಯ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವುದರಿಂದ ಎಲ್ಲರಿಗೂ ಸಂತೋಷವಾಗಿದ್ದು, ಬಂದ್‌ ಯಶಸ್ವಿಯಾಗಲಿದೆ. ಸರ್ಕಾರ ಜನರ ಒತ್ತಾಯಕ್ಕೆ ಮಣಿದು ಹಿಂದಕ್ಕೆ ಪಡೆಯದಿದ್ದರೆ ಸರ್ಕಾರ ಉರುಳಿಸುವ ಮಟ್ಟಕ್ಕೆ ಹೋರಾಟ ನಡೆಸಬೇಕಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಆರ್‌ಎಸ್‌ಎಸ್‌ ತೀರ್ಮಾನ ಬಿಟ್ಟು ಬೇರೆ ಏನೂ ಗೊತ್ತಾಗುವುದಿಲ್ಲ. ಇತ್ತ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೇಂದ್ರದ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ಒಂದೇ ಸಾಲಿನಲ್ಲಿ ಹೇಳಬೇಕಿತ್ತು. ಆದರೆ ಅವರ ಮೌನ ಕಾರ್ಪೊರೇಟ್‌ ಕಂಪನಿ ಪರವಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಅವರು ಟೀಕಿಸಿದರು.

ಕರ್ನಾಟಕ ಬಂದ್ ಫಿಕ್ಸ್‌: 32 ಸಂಘಟನೆಗಳಿಂದ ಲಾಕ್‌ ...

ಕೇಂದ್ರ ಸಚಿವೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬಂದಿದ್ದಾರೆ. ಕೇಂದ್ರದ ಎನ್‌ಡಿಎ ಭಾಗವಾಗಿರುವ ಇತರ ಪಕ್ಷಗಳ ಸದಸ್ಯರು ಒಪ್ಪಲು ತಯಾರಿಲ್ಲ. ಆದರೆ, ಸರ್ಕಾರ ಬಹುಮತದ ಆಧಾರದ ಮೇಲೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್‌ :  ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಸೆ. 25 ರಂದು ಮೈಸೂರಿನ ಹೊರವಲಯದ ಮೈಸೂರು-ಬೆಂಗಳೂರು, ಮೈಸೂರು- ನಂಜನಗೂಡು, ಮೈಸೂರು- ನರಸೀಪುರ, ಮೈಸೂರು- ಹುಣಸೂರು, ಮೈಸೂರು- ಕೋಟೆ ಹೆದ್ದಾರಿಯನ್ನು ಬಂದ್‌ ಮಾಡಲಾಗುವುದು ಎಂದು ಅವರು ತಿಳಿಸಿದರು.

ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್‌, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್‌, ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ, ದಸಂಸ ಜಿಲ್ಲಾ ಸಂಚಾಲಕ ಶಂಭುಲಿಂಗಸ್ವಾಮಿ, ರೈತ ಸಂಘದ ತಾಲೂಕು ಅಧ್ಯಕ್ಷ ಪಿ. ಮರಂಕಯ್ಯ, ಜನಚೇತನ ಟ್ರಸ್ಟ್‌ ಅಧ್ಯಕ್ಷ ಪ್ರಸನ್ನ ಎನ್‌.ಗೌಡ, ಮುಖಂಡರಾದ ಎನ್‌. ಪುನೀತ್‌, ಮುದ್ದುಕೃಷ್ಣ, ಕೆ. ಶಂಕರ್‌, ರಾಜಶೇಖರ ಕೋಟೆ, ಅರವಿಂದ ಶರ್ಮ ಇದ್ದರು.