ಚುನಾವಣೆ ಹಿನ್ನೆಲೆ: ಮತದಾನ ಜಾಗೃತಿಗೆ ಬಾಗಲಕೋಟೆ ಅಧಿಕಾರಿಣಿಯೊಬ್ಬರ ವಿನೂತನ ಪ್ರಯೋಗ!
ರಾಜ್ಯದಲ್ಲಿ ಈಗ ಎಲ್ಲಿ ನೋಡಿದರೂ ಸಾಕು ಚುನಾವಣೆಯದ್ದೇ ಮಾತು, ಮತ ಹಾಕೋದಾ ಬಿಡೋದಾ ಹೀಗೆ ನೂರೆಂಟು ವಿಚಾರಗಳು ಜನರ ಮುಂದಿರುವಾಗ ಬಾಗಲಕೋಟೆ ಜಿಲ್ಲೆಯ ಮಹಿಳಾ ಅಧಿಕಾರಿಯೊಬ್ಬರು ವಿವಿಧ ವಿಭಾಗಗಳಲ್ಲಿ ಕಲೆ ಬಿಡಿಸುವ ಮೂಲಕ ಸದ್ದಿಲ್ಲದೆ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಕಾರ್ಯಕ್ಕೆ ಕೈ ಹಾಕಿದ್ದು, ಗಮನ ಸೆಳೆಯುತ್ತಿದೆ.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ..
ಬಾಗಲಕೋಟೆ (ಏ.8) : ರಾಜ್ಯದಲ್ಲಿ ಈಗ ಎಲ್ಲಿ ನೋಡಿದರೂ ಸಾಕು ಚುನಾವಣೆಯದ್ದೇ ಮಾತು, ಮತ ಹಾಕೋದಾ ಬಿಡೋದಾ ಹೀಗೆ ನೂರೆಂಟು ವಿಚಾರಗಳು ಜನರ ಮುಂದಿರುವಾಗ ಬಾಗಲಕೋಟೆ ಜಿಲ್ಲೆಯ ಮಹಿಳಾ ಅಧಿಕಾರಿಯೊಬ್ಬರು ವಿವಿಧ ವಿಭಾಗಗಳಲ್ಲಿ ಕಲೆ ಬಿಡಿಸುವ ಮೂಲಕ ಸದ್ದಿಲ್ಲದೆ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಕಾರ್ಯಕ್ಕೆ ಕೈ ಹಾಕಿದ್ದು, ಗಮನ ಸೆಳೆಯುತ್ತಿದೆ.
ಹೌದು, ರಾಜ್ಯಾದ್ಯಂತ ಚುನಾವಣೆ ಕಾವು ಜೋರಾಗಿದ್ದು, ಇವುಗಳ ಮಧ್ಯೆ ಬಾಗಲಕೋಟೆ ಜಿಲ್ಲಾಡಳಿತ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್(P sunil kumar IAS), ಸಿಇಓ ಟಿ.ಭೂಬಾಲನ್ ಮತ್ತು ರಲ್ಲಿ ಎಸ್.ಪಿ. ಜಯಪ್ರಕಾಶ್ ಅವರ ಸಾರಥ್ಯದಲ್ಲಿ ನಿತ್ಯವೊಂದೊಂದು ಚಟುವಟಿಕೆ ಮೂಲಕ ಸಾರ್ವಜನಿಕರಲ್ಲಿ ಚುನಾವಣೆ ಮತದಾನ ಜಾಗೃತಿಗೆ ಮುಂದಾಗಿದ್ದರೆ. ಇತ್ತ ಜಿಲ್ಲಾ ಮಟ್ಟದ ಮಹಿಳಾ ಅಧಿಕಾರಿಯು ಸಹ ತಮ್ಮದೇ ಕಲೆಯನ್ನು ವಿಶಿಷ್ಠವಾಗಿ ಬಿಡಿಸುವ ಮೂಲಕ ಮತದಾನ ಜಾಗೃತಿಗೆ ಮುಂದಾಗಿದ್ದಾರೆ. ಅಂದಹಾಗೆ ಹೀಗೆ ಕಲೆಯ ಪ್ರದರ್ಶನ ಮೂಲಕ ಮತದಾನ ಜಾಗೃತಿಗೆ ನಿಂತವರು ಬಾಗಲಕೋಟೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೆಶಕರಾದ ನಂದಾ ಹಣಬರಟ್ಟಿ. ಸದಾ ಒಂದಿಲ್ಲೊಂದು ಕಾರ್ಯಗಳ ಮೂಲಕ ಗಮನ ಸೆಳೆಯಲು ಮುಂದಾಗುತ್ತಿದ್ದ ಅಧಿಕಾರಿ ನಂದಾ ಹಣಬರಟ್ಟಿ(Nanda hanabaratti) ಅವರು, ಬಾಗಲಕೋಟೆ ಜಿಲ್ಲಾಡಳಿತ ಮತದಾನ ಕಾರ್ಯದ ಜೊತೆಗೆ ಕೈ ಜೋಡಿಸಿ ತಮ್ಮದೇ ಸೇವೆಯನ್ನೂ ಮಾಡುತ್ತಿದ್ದಾರೆ.
ಕಲಬುರಗಿ: ಮತದಾನ ಜಾಗೃತಿಗೆ ಮೊಂಬತ್ತಿ ಮೆರವಣಿಗೆ
ಮದುವೆ ಆಮಂತ್ರಣ ಪತ್ರಿಕೆ ರೂಪದಲ್ಲಿ ಗಮನ ಸೆಳೆದ ಚುನಾವಣೆ ಮತದಾನ ಜಾಗೃತಿ ಆಮಂತ್ರಣ:
ಹೌದು, ಸಾಮಾನ್ಯವಾಗಿ ಮನೆಗಳಲ್ಲಿ ಮದುವೆಗಳಾದರೆ ಮದುವೆ ಆಮಂತ್ರಣ ಪತ್ರಿಕೆ ತಯಾರಿಸಿ ಎಲ್ಲರ ಮನೆ ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸುತ್ತೇವೆ. ಆದರೆ ಇಲ್ಲಿ ಅದೇ ಮಾದರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ(Department of Social Welfare) ಉಪನಿರ್ದೆಶಕರಾದ ನಂದಾ ಹಣಬರಟ್ಟಿ ಅವರು ಚುನಾವಣೆ ಮತ್ತು ಮತದಾರ ಬಂಧುಗಳ ಸಮಾರಂಭ ಎಂಬ ಶೀರ್ಷಿಕೆಯಡಿ ಗಂಡು ಹೆಣ್ಣಿನ ಭಾವಚಿತ್ರ ಬಿಡಿಸಿ, ಅಡ್ರೆಸ್ ಬರೆಯಬೇಕಾದ ಸ್ಥಳದಲ್ಲಿ ನಿಮ್ಮ ಹೆಸರು ನಮ್ಮ ಮತದಾರ ಪಟ್ಟಿಯಲ್ಲಿದೆ, ನಿಮಗೂ ನಿಮ್ಮ ಕುಟುಂಬಕ್ಕೂ ಮತದಾನ ಕೇಂದ್ರಕ್ಕೆ ಆದರದ ಸ್ವಾಗತ ಎಂದು ಬರೆದು ತಮ್ಮ ಆಗಮನಾಭಿಲಾಷಿಗಳಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಕಲ ಅಧಿಕಾರಿ ವರ್ಗ ಅಂತ ಬರೆದು ಕೊನೆಯಲ್ಲಿ ಬನ್ನಿ ಮತದಾನ ಮಾಡಿ ಅಂತ ಆಹ್ವಾನಿಸಿ ಬರೆದುಕೊಂಡಿದ್ದಾರೆ. ಇಂತಹ ವಿಶಿಷ್ಟ ಕಲೆಯ ಮತದಾನ ಜಾಗೃತಿ ಆಹ್ವಾನ ಪತ್ರಿಕೆ ಗಮನ ಸೆಳೆಯುತ್ತಿದೆ.
ಒಂದೋ ಎರಡೋ ಬೂತ್ ಗೆ ಹೊರಡೋ ಮಗ್ಗಿಯ ಪದ್ಯ:
ಇನ್ನು ಮುಂದುವರಿದು ನಂದಾ ಹಣಬರಟ್ಟಿ ಅವರು ಜನ ಸಾಮಾನ್ಯರಲ್ಲಿ ಜಾಗೃತಿ ಮಾಡಿಬೇಕೆಂಬ ಉದ್ದೇಶದಿಂದ ಮತದಾನ ಪಾಠಕ್ಕಾಗಿ ಚಿಕ್ಕ ಸಾಲುಗಳ ಪದ್ಯವನ್ನು ಸಹ ಬರೆದಿದ್ದಾರೆ. ಮತದಾನದ ಪಾಠ ಎಂಬ ಶೀರ್ಷಿಕೆಯಡಿ ಒಂದು ಎರಡು ಬೂತ್ ಗೆ ಹೊರಡು, ಮೂರು ನಾಲ್ಕು ನಿನ್ನದೇ ಹಕ್ಕು, ಐದು ಆರು ಜಾಣ್ಮೆಯ ತೋರು, ಏಳು ಎಂಟು ಅವಕಾಶ ಉಂಟು, ಒಂಭತ್ತು ಹತ್ತು ಯೋಗ್ಯರಿಗೆ ಬಟನ್ ಒತ್ತು ಎಂಬ ಸಾಲುಗಳ ಮೂಲಕ ಮತದಾನ ಜಾಗೃತಿಗೆ ಮುಂದಾಗಿದ್ದಾರೆ. ಈ ಚಿಕ್ಕ ಚಿಕ್ಕ ಸಾಲುಗಳ ಅಂತ್ಯ ಪ್ರಾಸದ ಪದ್ಯ ಇದೀಗ ಮತದಾನ ಜಾಗೃತಿಗಾಗಿ ಗಮನ ಸೆಳೆಯುತ್ತಿದೆ.
ಮತದಾನಕ್ಕೆ ಮುನ್ನ ಅರಿಯಬೇಕಿರುವ ಅಂಶಗಳ ಕುರಿತು ಕಲಾಚಿತ್ರ...
ಇನ್ನು ಮತದಾನ ಜಾಗೃತಿ ಮಾಡೋದು ಒಂದು ಭಾಗವಾದರೆ ಮತದಾನ ಮಾಡುವ ಮುನ್ನ ಕೈಗೊಳ್ಳುವ ಕಾರ್ಯಗಳ ಬಗ್ಗೆಯೂ ನಂದಾ ಅವರು ಚಿತ್ರಕಲೆಯನ್ನ ಬಿಡಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಗಂಡ ಹೆಂಡಿರ ಭಾವಚಿತ್ರ ಬಿಡಿಸಿ ಮತಗಟ್ಟೆ ಕೇಂದ್ರ ಈ ಕಡೆ, ಅಯ್ಯೋ ಈ ಕಡೆ ಎಂಬ ಬರಹವುಳ್ಳ ಚಿತ್ರ ಮತದಾನ ದಿನಕ್ಕೂ ಮುನ್ನವೇ ನಮ್ಮ ನಮ್ಮ ಮತದಾನ ಕೇಂದ್ರವನ್ನ ಗುರುತಿಸಿಕೊಂಡಿರಬೇಕು ಮತ್ತು ಮತದಾರ ಪಟ್ಟಿಯಲ್ಲಿ ನಮ್ಮ ಹೆಸರು ಇರುವಿಕೆ ಖಚಿತಪಡಿಸಿ ಯಾವ ವಾರ್ಡ್ ನಲ್ಲಿ ನಮ್ಮ ಮತಗಟ್ಟೆ ಇದೆ ಎಂಬುದರ ಬಗ್ಗೆ ಮೊದಲೇ ತಿಳಿಯುವ ಮಾದರಿಯಲ್ಲಿ ಕಲೆ ಬಿಡಿಸಿರುವುದು ಜಾಗೃತಿಗೆ ಸಹಕಾರಿಯಾಗಿದೆ. ಇದರೊಟ್ಟಿಗೆ "ನಿಮ್ಮ ಬೆರಳಿಗೆ ಇಂಕು- ಪ್ರಜಾಪ್ರಭುತ್ವಕ್ಕೆ ಲಿಂಕು" ಎಂಬ ಬರಹಗಳುಳ್ಳ ವ್ಯಕ್ತಿಯ ಭಾವಚಿತ್ರ ನೋಡುಗರಲ್ಲಿ ಜಾಗೃತಿ ಮೂಡಿಸುವಂತಿರುವುದು ಆಕರ್ಷಣೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗ್ಳೂರಲ್ಲಿ ಮತದಾನ ಜಾಗೃತಿಗೆ ಸೆಲೆಬ್ರೆಟಿಗಳ ಎಂಟ್ರಿ..!
ವಿಶಿಷ್ಟ ಕಲೆಯ ಮೂಲಕ ಮತದಾನ ಜಾಗೃತಿಗೆ ಜನರನ್ನ ತಲುಪುಹುದು ಸರಳವೆನ್ನುವ ಉದ್ದೇಶ:
ಇನ್ನು ಏಷಿಯಾನೆಟ್ ಸುವರ್ಣನ್ಯೂಸ್ ನೊಂದಿಗೆ ಮಾತನಾಡಿರುವ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ನಂದಾ ಹಣಬರಟ್ಟಿ, ಈ ರೀತಿಯಲ್ಲಿ ಕಲಾ ಚಿತ್ರ ಬಿಡಿಸುವುದು ನನಗೆ ಮೊದಲಿನಿಂದಲೂ ಇರುವ ಹವ್ಯಾಸ, ಆದರೆ ಜನರಿಗೆ ವಿಶೇಷ ಚಿತ್ರ ಬಿಡಿಸುವ ಮೂಲಕ ಕುತೂಹಲ ಮೂಡಿಸಿ ಮತದಾನದ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕೆಂಬುದು ನನ್ನ ನಿಲುವಾಗಿತ್ತು. ಇದಕ್ಕೆ ನಮ್ಮ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸಹ ಪ್ರೋತ್ಸಾಹ ನೀಡಿದರೂ ಅವರ ಬೆಂಬಲದಿಂದ ಹೆಚ್ಚೆಚ್ಚು ಚಿತ್ರ ಬಿಡಿಸಿ ಅವುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು, ಇನ್ನೂ ಕೆಲವೊಂದಿಷ್ಟು ಕಲಾ ಚಿತ್ರಗಳ ಮೂಲಕ ಜನರಿದ್ದಲ್ಲಿ ಹೋಗಿ ಜಾಗೃತಿ ಮಾಡುತ್ತಿದ್ದೇವೆ, ಇಂದಿನ ಚುನಾವಣೆ ಸಮಯದಲ್ಲಿ ಬಿಡಿಸಿದ ಚಿತ್ರಕಲೆ ಕಲಾಕೃತಿಗಳ ಮೂಲಕ ಮತದಾನ ಜಾಗೃತಿ ಮಾಡಿಸುವುದು ಖುಷಿ ಕೊಟ್ಟಿದೆ ಎಂದು ಹೇಳಿದರು. ಇನ್ನು ನಂದಾ ಹಣಬರಟ್ಟಿ ಅವರ ಮತದಾನ ಜಾಗೃತಿ ಕಾರ್ಯಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅಭಿನಂದಿಸಿದ್ದಾರೆ.