ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ, ನಿತ್ಯ ಕುಡಿದು ತಾಯಿಯೊಂದಿಗೆ ಜಗಳವಾಡುತ್ತಿದ್ದ ಅಣ್ಣನ ವರ್ತನೆಯಿಂದ ಬೇಸತ್ತ ತಮ್ಮ, ಆತನನ್ನು ಕೊಲೆ ಮಾಡಿದ್ದಾನೆ. ಈ ಹತ್ಯೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ನಾಟಕವಾಡಿದ್ದು, ತಂದೆಯ ದೂರಿನ ಮೇರೆಗೆ ನಡೆದ ಪೊಲೀಸ್ ತನಿಖೆಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ.

ರಾಯಚೂರು : ಕುಟುಂಬ ಕಲಹದ ಹಿನ್ನೆಲೆ ಅಣ್ಣನನ್ನೇ ಹತ್ಯೆ ಮಾಡಿ ಆತ್ಮ*ಹತ್ಯೆ ಎಂದು ಬಿಂಬಿಸಲು ಹೋಗಿ ತಮ್ಮ ಸಿಕ್ಕಿಬಿದ್ದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ನಡೆದಿದೆ. ಕುಡಿದು ಬಂದು ತಾಯಿ ಜೊತೆಗೆ ಅಣ್ಣ ದಿನಾಲು ಜಗಳವಾಡುತ್ತಿದ್ದ ಇದರಿಂದ ತಮ್ಮ ಅಣ್ಣನ ವರ್ತನೆಗೆ ಬೇಸತ್ತು ಹೋಗಿದ್ದ. ಕೊಲೆ ಮಾಡುವ ದಿನ ಕೂಡ ಅಣ್ಣ ಮನೆಯಲ್ಲಿ ಗಲಾಟೆ ಮಾಡಿದ್ದ ಇದರಿಂದ ಬೇಸತ್ತ ತಮ್ಮ, ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದ ಮಹಾಂತ ಮಠದ ಬಳಿಯ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಸವರಾಜ್ (32) ಎಂದು ಗುರುತಿಸಲಾಗಿದ್ದು, ಆರೋಪಿ ತಮ್ಮನನ್ನು ಶ್ರೀಧರ್ (27) ಎಂದು ಗುರುತಿಸಲಾಗಿದೆ

ಕೊಲೆ ಬಳಿಕ ಆತ್ಮ*ಹತ್ಯೆ ನಾಟಕ

ಅಣ್ಣನನ್ನು ಕೊಲೆ ಮಾಡಿದ ಬಳಿಕ, ಘಟನೆ ಆತ್ಮ*ಹತ್ಯೆಯಂತೆ ತೋರಿಸಲು ಶ್ರೀಧರ್ ಕುತಂತ್ರ ರೂಪಿಸಿದ್ದಾನೆ. ಸೀರೆಯನ್ನು ಬಳಸಿಕೊಂಡು ಫ್ಯಾನ್‌ಗೆ ಅಣ್ಣನ ಹೆಣವನ್ನು ನೇತು ಹಾಕಿ ಅಣ್ಣನೇ ನೇಣು ಹಾಕಿಕೊಂಡಿದ್ದಾನೆ ಎಂಬಂತೆ ಮನೆಯವರಿಗೆ ನಂಬಿಸಲು ಯತ್ನಿಸಿದ್ದಾನೆ. ಇದರ ಜೊತೆಗೆ, ಬಳಿಕ ಕೋಣೆ ಬಾಗಿಲಿ‌ನ ಚೀಲಕ ಮುರಿದಂತೆ ಮಾಡಿ. ಅಣ್ಣ ಶವವನ್ನ ಕೆಳಗೆ ಇಳಿಸಿದ ತಮ್ಮ ತದನಂತರ ಅಣ್ಣ ಬಸವರಾಜ್ ಜೀವ ಇರಬಹುದು ಎಂದು ತಾಯಿಗೆ ನಂಬಿಸಿ ಖಾಸಗಿ ವಾಹನದಲ್ಲಿ ಶವ ತೆಗೆದುಕೊಂಡು ತಾಲೂಕು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ

ತಂದೆಯಿಂದ ದೂರು, ಪೊಲೀಸರ ತನಿಖೆ

ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲನೆ ನಡೆಸಿದಾಗ, ಬಸವರಾಜ್ ಈಗಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ. ಇದರಿಂದ ಘಟನೆಗೆ ಹೊಸ ತಿರುವು ಸಿಕ್ಕಿದ್ದು, ಅನುಮಾನಗಳು ಗಟ್ಟಿಯಾದವು. ಇತ್ತ ಬಸವರಾಜ್ ಸಾವಿನ ಕುರಿತು ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಮೃತನ ತಂದೆ ವಾಸುದೇವ್ ದೂರು ನೀಡಿದ್ದಾರೆ. ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣದ ಗಂಭೀರತೆಯನ್ನು ಗಮನಿಸಿದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರೊಂದಿಗೆ ಲಿಂಗಸೂಗೂರು ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಡ್ ಹಾಗೂ ಪಿಐ ಹೊಸಕೇರಪ್ಪ ಕೂಡ ಹಾಜರಿದ್ದರು.

ಆರೋಪಿ ವಶಕ್ಕೆ

ಪೊಲೀಸರ ತೀವ್ರ ವಿಚಾರಣೆಯಲ್ಲಿ ಈ ಘಟನೆ ಹತ್ಯೆ ಎಂಬುದು ಬಹಿರಂಗಗೊಂಡಿದ್ದು, ಆರೋಪಿ ಶ್ರೀಧರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಸಾಮಾನ್ಯ ಕುಟುಂಬ ಕಲಹವೇ ಭೀಕರ ಕೊಲೆಗೆ ಕಾರಣವಾಗಿದ್ದು, ಬಳಿಕ ಅದನ್ನು ಆತ್ಮ*ಹತ್ಯೆಯಂತೆ ತೋರಿಸಲು ನಡೆಸಿದ ನಾಟಕ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. .