ಅನೇಕ ಶಾಸಕರು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದಾರೆ. ಎರಡೂವರೆ ವರ್ಷ ಆಗಿರುವುದರಿಂದ ಸಂಪುಟ ಪುನಾರಚನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಶಾಸಕರು ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ (ಏ.16): ಸರ್ಕಾರಕ್ಕೆ ಎರಡೂವರೆ ವರ್ಷ ಕಳೆದ ನಂತರ ಬೇರೆಯವರಿಗೆ ಸಚಿವ ಸ್ಥಾನದ ಅವಕಾಶ ಕೊಡುತ್ತೇವೆ ಎಂದು ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು, ಅಧ್ಯಕ್ಷರು ಹೇಳಿದ್ದರು. ಹೀಗಾಗಿ, ಅನೇಕ ಶಾಸಕರು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದಾರೆ. ಎರಡೂವರೆ ವರ್ಷ ಆಗಿರುವುದರಿಂದ ಸಂಪುಟ ಪುನಾರಚನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಶಾಸಕರು ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಗೊತ್ತಿದೆ. ಅವರ ಒಪ್ಪಿಗೆ ಪಡೆದೇ ಶಾಸಕರು ದೆಹಲಿಗೆ ಹೋಗಿದ್ದಾರೆ. ಅದರಲ್ಲಿ ಏನೂ ವಿಶೇಷವಿಲ್ಲ ಎಂದರು. ನೂತನ ಸಚಿವ ಸಂಪುಟದಲ್ಲಿ ನಿಮ್ಮ ಹೆಸರೂ ಇದೆಯೇ, ತಾವೇಕೆ ದೆಹಲಿಗೆ ತೆರಳಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಮಂತ್ರಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿರಲಿಲ್ಲ. ಜನವರಿ ತಿಂಗಳ ನಂತರ ಶುಕ್ರದೆಸೆ ಬರುತ್ತದೆ ಎಂದಿದ್ದೆ. ಮಂತ್ರಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ.

ಮಂತ್ರಿ ಸ್ಥಾನ ಬಂದರೆ ಅದನ್ನು ನಿಭಾಯಿಸಬಲ್ಲೆ, ಬಾರದು ಬಪ್ಪದು, ಬಪ್ಪದು ತಪ್ಪದು ಎಂಬಂತೆ ನಾವು ನಮ್ಮ ಕೆಲಸದಲ್ಲಿ ನಿರತರಾಗಿರಬೇಕು. ಮಂತ್ರಿಸ್ಥಾನ ಬರುವುದಾದರೆ ಬಂದೇ ಬರುತ್ತದೆ. ನನಗೆ ಮಂತ್ರಿ ಸ್ಥಾನಕ್ಕಿಂತ ಮತಕ್ಷೇತ್ರದ ಅಭಿವೃದ್ಧಿ ಮುಖ್ಯ. ಅಥಣಿ ಕ್ಷೇತ್ರಕ್ಕೆ ಇಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಮುಖ್ಯಮಂತ್ರಿಗಳು ಸಾಕಷ್ಟು ಅನುದಾನ ನೀಡಿದ್ದಾರೆ. ₹ 508 ಕೋಟಿ ವೆಚ್ಚದ ಕೃಷಿ ಮಹಾವಿದ್ಯಾಲಯ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿದ್ದಾರೆ. ಅದೇ ದೊಡ್ಡ ಶುಕ್ರದೆಸೆ ಎಂದರು.

ಸಂವಿಧಾನದ ಆಶಯಗಳಿಗೆ ಪ್ರತಿಯೊಬ್ಬರೂ ಬದ್ಧರಾಗಿ

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ದೂರದೃಷ್ಟಿಯಿಂದ ಮೂಡಿಬಂದಿರುವ ಸಂವಿಧಾನದ ಆಶಯಗಳಾದ ಸೌಹಾರ್ದತೆ, ಸಮಾನತೆ ಮತ್ತು ಜಾತ್ಯತೀತತೆಯನ್ನು ಪಾಲಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕನು ಬದ್ಧನಾಗಿರಬೇಕು ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಕಲಾವಿದ ವಿನಾಯಕ ಸುತಾರ ನೂಲಿನ ದಾರದ ಸಹಾಯದಿಂದ ತಮ್ಮ ಕೌಶಲ್ಯದ ಮೂಲಕ ಚಿತ್ರಿಸಿದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.

ಸಂವಿಧಾನವು ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳ ಮೇಲೆ ನಿರ್ಮಿತವಾಗಿದೆ. ವಿಶ್ವಕ್ಕೆ ಮಾದರಿಯಾಗಿರುವ ಸಂವಿಧಾನ ನಮ್ಮದು. ಹಲವು ಜಾತಿ ಧರ್ಮಗಳು ಇರುವ ನಮ್ಮ ದೇಶಕ್ಕೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದ ಅಡಿ ಅಂಬೇಡ್ಕರ್ ಅವರು ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು. ಅವರ ಜನ್ಮ ದಿನಾಚರಣೆ ಕೇವಲ ಉತ್ಸವವಾಗದೇ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಅನುಸರಿಸುವ ಮೂಲಕ ಸುಭದ್ರ ರಾಷ್ಟ್ರದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.