ಆಸ್ತಿ ಉಳಿಸಿಕೊಳ್ಳಲು ರಾಜೀನಾಮೆ ನೀಡಿ ತೆರಳಿದವರನ್ನು ತಿರಸ್ಕರಿಸಿ ಸ್ವಾಭಿಮಾನದಿಂದ ಚುನಾವಣೆ ಎದುರಿಸಬೇಕು ಎಂದು ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಕರೆ ನೀಡಿದರು.
ಸೂಲಿಬೆಲೆ (ಡಿ.01): ಹೊಸಕೋಟೆ ಉಪ ಚುನಾವಣೆಯಲ್ಲಿ ಸ್ವಾರ್ಥ ಮತ್ತು ಸ್ವಾಭಿಮಾನದ ನಡುವಿನ ಹೋರಾಟ ನಡೆಯುತ್ತಿದ್ದು ಕ್ಷೇತ್ರದ ಜನರು ಕುಕ್ಕರ್ ಗುರ್ತಿಗೆ ಮತ ನೀಡಿ ಸ್ವಾಭಿಮಾನ ಎತ್ತಿ ಹಿಡಿಯಬೇಕು. ಕಟ್ಟಿದ ಪಕ್ಷದಲ್ಲಿ ನನಗೆ ಸ್ಥಾನವಿಲ್ಲದಂತೆ ಮಾಡಿ ಸ್ವಾರ್ಥ ರಾಜಕಾರಣಕ್ಕೆ ಮುಂದಾಗಿರುವ ವ್ಯಕ್ತಿಗಳಿಗೆ ಈ ಚುನಾವಣೆಯಲ್ಲಿ ಪಾಠಕಲಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕು ಕಸಬಾ ಹೋಬಳಿಯ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಿದ ಅವರು ಹೊಸಕೋಟೆ ಉಪಚುನಾವಣೆಯಲ್ಲಿ ಈ ಬಾರಿ ಸ್ವಾರ್ಥ ಮತ್ತು ಸ್ವಾಭಿಮಾನಿ ವಿಷಯದಲ್ಲಿ ಮತ ಕೇಳಲಾಗುತ್ತಿದ್ದು, ಅನರ್ಹರ ನಂಬಿಕೆ ದ್ರೋಹ ಹಾಗೂ ಕ್ಷೇತ್ರದ ಜನರಿಗೆ ಮಾಡಿರುವ ಮೋಸದ ವಿಚಾರವಾಗಿ ತಾಲೂಕಿನ ಸ್ವಾಭಿಮಾನಕ್ಕಾಗಿ ಈ ಬಾರಿ ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಯಾಗಿ ನಾವು ಕಣದಲ್ಲಿದ್ದು ಜನರಿಗಾಗಿ ನನ್ನ ಸೇವೆಯಾಗಿದೆ ಎಂದರು.
ಕ್ಷೇತ್ರದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದೆ. ಆದರೇ ಕೆಲವರು ನನ್ನ ಮತ್ತು ನನ್ನ ತಂದೆ ಬಚ್ಚೇಗೌಡರನ್ನು ದೂರ ಮಾಡಿ ರಾಜಕಾರಣ ಮಾಡುತ್ತಿದ್ದಾರೆ. ತಂದೆ ಮಕ್ಕಳನ್ನು ದೂರ ಮಾಡಿದ ವ್ಯಕ್ತಿ ಇನ್ನೂ ಕ್ಷೇತ್ರದಲ್ಲಿರುವ ಕುಟುಂಬಗಳನ್ನು ಒಡೆಯದೆ ಬಿಟ್ಟಾನೆಯೇ? ಐದು ವರ್ಷಕ್ಕಾಗಿ ಜನರು ಆಶೀರ್ವಾದ ಮಾಡಿ ಕಳುಹಿಸಿದ್ದು ಕೇವಲ 1.5 ವರ್ಷಕ್ಕೆ ತನ್ನ ಆಸ್ತಿ ಉಳಿಸಿಕೊಳ್ಳಲು ರಾಜೀನಾಮೆ ನೀಡಿ, ಜನರ ಮತವನ್ನು ತಿರಸ್ಕರಿಸಿದ ವ್ಯಕ್ತಿ ಮತ್ತೇ ಮತ ಎಂದು ಕೇಳಲು ಬಂದಿದ್ದು ಮತದಾರರು ಪಾಠ ಕಲಿಸಬೇಕು ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಹೊರಗಿನ ವ್ಯಕ್ತಿಗಳಾಗಿದ್ದು, ನಾನು ಈ ಕ್ಷೇತ್ರ ಮಣ್ಣಿನ ಮಗನಾಗಿದ್ದು ನನಗೆ ಆಶೀರ್ವದಿಸಿದರೆ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಜನರ ಆಶಯದಂತೆ ಯಾವುದೇ ಪಕ್ಷಕ್ಕೆ ಹೋಗದೆ ಪಕ್ಷಾಂತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಜನರೇ ನನ್ನ ಕೈಹಿಡಿದು ಗೆಲುವಿನ ದಡ ಸೇರಿಸಬೇಕು. ಸ್ವಾಭಿಮಾನದ ಅಲೆಯಿದ್ದು ಡಿ.9ರಂದು ಕುಕ್ಕರ್‌ನಿಂದ ವಿಜಯದ ಸೀಟಿ ಹೊರ ಬೀಳುವಂತೆ ಆಶೀರ್ವದಿಸಬೇಕು ಎಂದು ಕೋರಿದರು.
Last Updated 1, Dec 2019, 11:46 AM IST