ಜು.7ರಂದು 14ನೇ ಬಾರಿಗೆ ಮುಂಗಡ ಪತ್ರ ಮಂಡಿಸುವ ಮೂಲಕ ದಾಖಲೆಯ ಪಟ್ಟಿಯನ್ನು ಸೇರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಮೇಲೆ ಜಿಲ್ಲೆಯ ಜನತೆಯ ಭರವಸೆಗಳು ಅಪಾರವಾಗಿದೆ. ಇಬ್ಬರು ಸಚಿವರನ್ನು ಹೊಂದಿರುವ ಬೀದರ್‌ ಜಿಲ್ಲೆಗೆ ಆರ್ಥಿಕ ಕೊರತೆಗಳ ಮಧ್ಯೆಯೂ ಅಭಿವೃದ್ಧಿಪರ ಯೋಜನೆಗಳ ಕೊಡುಗೆ ನೀಡುವಲ್ಲಿ ಕಡೆಗಣಿಸೋದಿಲ್ಲ ಎಂಬ ನಿರೀಕ್ಷೆಯಲ್ಲಿ​ದ್ದಾರೆ ಇಲ್ಲಿನ ನಾಗ​ರಿ​ಕರು.

ಅಪ್ಪಾರಾವ್‌ ಸೌದಿ

ಬೀದರ್‌ (ಜು.7):  ಜು.7ರಂದು 14ನೇ ಬಾರಿಗೆ ಮುಂಗಡ ಪತ್ರ ಮಂಡಿಸುವ ಮೂಲಕ ದಾಖಲೆಯ ಪಟ್ಟಿಯನ್ನು ಸೇರಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಮೇಲೆ ಜಿಲ್ಲೆಯ ಜನತೆಯ ಭರವಸೆಗಳು ಅಪಾರವಾಗಿದೆ. ಇಬ್ಬರು ಸಚಿವರನ್ನು ಹೊಂದಿರುವ ಬೀದರ್‌ ಜಿಲ್ಲೆಗೆ ಆರ್ಥಿಕ ಕೊರತೆಗಳ ಮಧ್ಯೆಯೂ ಅಭಿವೃದ್ಧಿಪರ ಯೋಜನೆಗಳ ಕೊಡುಗೆ ನೀಡುವಲ್ಲಿ ಕಡೆಗಣಿಸೋದಿಲ್ಲ ಎಂಬ ನಿರೀಕ್ಷೆಯಲ್ಲಿ​ದ್ದಾರೆ ಇಲ್ಲಿನ ನಾಗ​ರಿ​ಕರು.

ಜಿಲ್ಲೆಗೆ ಕೃಷಿ, ಯುನಾನಿ ಕಾಲೇಜು, ಕಾನೂನು ಕಾಲೇಜು ಹಾಗೆಯೇ ಬಹು ದಿನಗಳ ಕನಸಾದ ಮಹಿಳಾ ಪೊಲೀಸ್‌ ತರಬೇತಿ ಕೇಂದ್ರ ಸ್ಥಾಪನೆ, ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಒಂದಷ್ಟುಅನು​ದಾ​ನ, ಕಾರಂಜಾ ಸಂತ್ರಸ್ತರಿಗೆ ಪರಿಹಾರ, ನೀರಾವರಿಗೆ ಪ್ರತ್ಯೇಕ ನಿಧಿ, ಜಿಲ್ಲೆಯ ಚಿತ್ರಣವನ್ನೇ ಬದಲಿಸಬಲ್ಲ ಪ್ರವಾಸೋದ್ಯಮಕ್ಕೆ ಒಂದಷ್ಟುಕೊಡುಗೆ ನೀಡ​ಲಿ​ದ್ದಾರೆ ಸಿಎಂ ಎಂಬುದು ಇಲ್ಲಿನ ಜನರ ಆಸೆ.

ಸಿದ್ದು ದಾಖಲೆಯ ಬಜೆಟ್‌ ಇಂದು: ಹೊಸ ಯೋಜನೆ ಡೌಟ್‌, ಗ್ಯಾರಂಟಿಗೆ ಒತ್ತು..!

ಬೀದರ್‌ ಜಿಲ್ಲಾ ಸಂಕೀರ್ಣಕ್ಕೆ 100ಕೋಟಿ ರು. ಅನುದಾನ ನೀಡಿ ಕಾಮಗಾರಿ ಆರಂಭಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಿ. ಜಿಲ್ಲೆಯಲ್ಲಿ ಮಹಿಳಾ ಪೊಲೀಸ್‌ ತರಬೇತಿ ಕೇಂದ್ರ ಸ್ಥಾಪನೆಗೆ ಬೀದರ್‌ ನಗರದ ಹೊರವಲಯದ ಚಿಟ್ಟಾಗ್ರಾಮದ ಬಳಿ ಸುಮಾರು 100 ಎಕರೆಗಳ ಸ್ಥಳವನ್ನೂ ಗುರುತಿಸಿಟ್ಟಿದೆ. ಕೃಷಿ ವಿಜ್ಞಾನ ಕೇಂದ್ರ, ಪಶು ವೈದ್ಯ ವಿವಿ ಹೊಂದಿರುವ ಇಲ್ಲಿ ಕೃಷಿ ಕಾಲೇಜು ಸ್ಥಾಪಿಸಲು ಕಷ್ಟವೇನಿಲ್ಲ. ಯುನಾನಿ ಕಾಲೇಜಿಗೆ ಅಗತ್ಯ ವಾತಾವರಣ ಇಲ್ಲಿದೆ. ಇದು ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿದೆ.

ಹಣಕಾಸಿನ ಮುಗ್ಗಟ್ಟಿನಿಂದ ನಿಂತು ಹೋಗಿರುವ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಪುನರಾರಂಭ ಕಾಣಲೇಬೇಕಿದೆæ. ಲಕ್ಷಾಂತರ ರೈತರು, ಅವರ ಕುಟುಂಬದವರು ಹಾಗೂ ಸಾವಿರಾರು ಜನ ಕಾರ್ಮಿಕರ ಜೀವನಾಡಿಯಾಗಿರುವ ಈ ಅತ್ಯಂತ ಹಳೆಯ ಕಾರ್ಖಾನೆ ಮತ್ತೆ ಆರಂಭವಾಗುವಂತೆ ಮಾಡಲು ಅಗತ್ಯ ನೆರವನ್ನು ನೀಡಬೇ​ಕೆಂಬುದು ಇಲ್ಲಿನ ಜನ​ಪ್ರ​ತಿ​ನಿ​ಧಿ​ಗಳು ಮತ್ತು ಜನರ ಒತ್ತಾ​ಯ​ವಾ​ಗಿದೆ.

ಕಾರಂಜಾ ಸಂತ್ರಸ್ತರಿಗೆ ಪರಿಹಾರ ಘೋಷಿಸಲಿ:

ಇನ್ನು ಜೀವನಾಧಾರವಾಗಿದ್ದ ಜಮೀನನ್ನು ಜಿಲ್ಲೆಯ ರೈತರ ಹೊಲಗದ್ದೆಗಳಲ್ಲಿ ನೀರಾವರಿ, ಜನರ ನೀರಿನ ದಾಹ ನೀಗಿಸಲು ಕಾರಂಜಾ ಜಲಾಶಯಕ್ಕೆ ಭೂಮಿ ನೀಡಿ ದಶಕಗಳಿಂದ ಪರಿಹಾರಕ್ಕಾಗಿ ಕಾಯುತ್ತಿರುವ ಕಾರಂಜಾ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಬ​ಹು​ದೆಂದು ಇಲ್ಲಿನ ಸಂತ್ರ​ಸ್ತರು ಆಸೆ​ಗ​ಣ್ಣಿ​ನಿಂದ ನೋಡು​ತ್ತಿ​ದ್ದಾರೆ.

ಇನ್ನು ಅರಣ್ಯ ಹಾಗೂ ಪರಿಸರ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಮ್ಮ ವ್ಯಾಪ್ತಿಯ ಅರಣ್ಯ ಇಲಾಖೆಯಡಿಯಲ್ಲಿ ಕೃಷ್ಣ ಮೃಗ ಸಂರಕ್ಷಿತ ಪ್ರದೇಶ ಸ್ಥಾಪನೆಗೆ ಈ ಬಜೆಟ್‌ನಲ್ಲಿ ಅನುದಾನ ಮೀಸಲಿಡಿಸಿ ಕಾರ್ಯರೂಪಕ್ಕೆ ತರುವುದು ಹಾಗೂ ಐತಿಹಾಸಿಕ ಕರೇಜ್‌ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರದ ಸಹಕಾರದಲ್ಲಿ ಅನುದಾನ ನೀಡಿದ್ದೆಯಾದಲ್ಲಿ ಇಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾಗಲಿದೆ.

ಇದೇ ರೀತಿಯಾಗಿ ಅರಣ್ಯ ಸಚಿವಾಲಯದ ವತಿಯಿಂದ ಅರಣ್ಯೀಕರಣ ಹೆಚ್ಚಳಕ್ಕೆ ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ, ಪರಿಸರ ಸಂರಕ್ಷಣೆಗೆ ವಿಶೇಷ ಘಟಕಗಳ ಸ್ಥಾಪನೆ ಸೇರಿದಂತೆ ಜಿಲ್ಲೆಯಲ್ಲಿ ಹರಿಯುವ ಗೋದಾವರಿಯ ಉಪನದಿ ಮಾಂಜ್ರಾ ನದಿ ನೀರು ಸದ್ಬಳಕೆಗೆ ಯೋಜನೆ, ಅದಕ್ಕೆ ಅನುದಾನ ತರುವುದು ಇಲ್ಲಿನ ಭೂಮಿಗೆ ನೀರಾವರಿ ಒದಗಿಸುವ ಚಿಂತನೆಗೆ ಸಾಕ್ಷಿಯಾದೀತು.

ಸಿದ್ದರಾಮಯ್ಯ ಬಜೆಟ್‌ನಲ್ಲಿ ವಿಜಯಪುರ ಜಿಲ್ಲೆಗೆ ಸಿಕ್ಕೀತೇ ನಿರೀಕ್ಷಿತ ಅನುದಾನ?

ಇನ್ನು ಪೌರಾಡಳಿತ ಸಚಿವರಾಗಿರುವ ರಹೀಮ್‌ ಖಾನ್‌(Rahim khan ) ಬೀದರ್‌ ನಗರಸಭೆಯನ್ನು ಮಹಾನಗರಸಭೆಯನ್ನಾಗಿಸುವ ಈ ಹಿಂದಿನ ಸರ್ಕಾರದ ಪ್ರಸ್ತಾವನೆಗೆ ಮತ್ತಷ್ಟುಸಹಕಾರ ನೀಡಿ ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದಲ್ಲದೆ ಇನ್ನಿತರ ಪೌರ ಅಭಿವೃದ್ಧಿಯಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ತಂದುಕೊಡುವ ಪ್ರಯತ್ನ ಮಾಡಬಹುದು. ಇದರೊಟ್ಟಿಗೆ ಈಗಾಗಲೇ ಚಾಲ್ತಿಯಲ್ಲಿರುವ ಅನುಭವ ಮಂಟಪ, ಚತುಷ್ಪಥ ರಸ್ತೆ, ಬಿದ್ರಿ ಕುಶಲಕರ್ಮಿಗಳಿಗೆ ಮಾರುಕಟ್ಟೆ, ಪ್ರೋತ್ಸಾಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಸಹಕಾರ ನೀಡುವರೆ ಅಥವಾ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಶಾಸಕರನ್ನಾಗಿಸಿ ಕೈಗೆ ಪೆಟ್ಟು ನೀಡಿದ ಜಿಲ್ಲೆ ಎಂದು ಕಡೆಗಣಿಸ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.