Karnataka Budget 2023: ನನೆಗುದಿಗೆ ಬಿದ್ದಿರುವ ಕೊಪ್ಪಳದ ಹಲವು ಯೋಜನೆಗಳಿಗೆ ಸಿಕ್ಕಿತೆ ಅನುದಾನ?

ಜಿಲ್ಲೆಯ ಹಲವಾರು ನನೆಗುದಿಗೆ ಬಿದ್ದಿರುವ ಯೋಜನೆಗಳು ಅನುದಾನ ಇಲ್ಲದೆ ಕೊಳೆಯುತ್ತಿವೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿಯಾದರೂ ಅನುದಾನ ಸಿಕ್ಕೀತೆ ಎನ್ನುವುದೇ ಈಗ ಇರುವ ನಿರೀಕ್ಷೆಯಾಗಿದೆ. ನೂತನ ಸರ್ಕಾರ ಜು.7 ರಂದು ಮಂಡನೆ ಮಾಡುತ್ತಿರುವ ಬಜೆಟ್‌ನಲ್ಲಿ ಕೊಪ್ಪಳ ಜಿಲ್ಲೆಗೆ ಏನೇನು ಸಿಗಬಹುದು ಎನ್ನುವ ಕುತೂಹಲವಿದೆ.

Karnataka budget 2023 Get grant for Koppal irrigation project adn rice development work rav

 

ಕೊಪ್ಪಳ (ಜು.7) :  ಜಿಲ್ಲೆಯ ಹಲವಾರು ನನೆಗುದಿಗೆ ಬಿದ್ದಿರುವ ಯೋಜನೆಗಳು ಅನುದಾನ ಇಲ್ಲದೆ ಕೊಳೆಯುತ್ತಿವೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿಯಾದರೂ ಅನುದಾನ ಸಿಕ್ಕೀತೆ ಎನ್ನುವುದೇ ಈಗ ಇರುವ ನಿರೀಕ್ಷೆಯಾಗಿದೆ. ನೂತನ ಸರ್ಕಾರ ಜು.7 ರಂದು ಮಂಡನೆ ಮಾಡುತ್ತಿರುವ ಬಜೆಟ್‌ನಲ್ಲಿ ಕೊಪ್ಪಳ ಜಿಲ್ಲೆಗೆ ಏನೇನು ಸಿಗಬಹುದು ಎನ್ನುವ ಕುತೂಹಲವಿದೆ.

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕಾಗಿ ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರದಿಂದ ಈ ಬಾರಿ ಹೊಸ ಯೋಜನೆಗಳ ಘೋಷಣೆ ಮಾಡಬಹುದೇ? ಎಂಬ ಪ್ರಶ್ನೆ ಇದೆ.

ನೀರಾವರಿ ಯೋಜನೆಗಳು:

ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳೇ ಅನುದಾನ ಕೊರತೆಯಿಂದ ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಹೊಸ ಯೋಜನೆ ಘೋಷಣೆ ಮಾಡುವ ಬದಲು ಈಗಾಗಲೇ ಇರುವ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸುವ ಅಗತ್ಯವಿದೆ. ನೀರಾವರಿ ಯೋಜನೆಗಳೇ ಸಾಲು ಸಾಲು ಇವೆ.

ಏತ ನೀರಾವರಿ , ಕೆರೆ ತುಂಬಿಸುವ ಯೋಜನೆಗಳು ಸೇರಿದಂತೆ ಈಗಾಗಲೇ ಇರುವ ಯೋಜನೆಗಳು ಸುಮಾರು ವರ್ಷಗಳಿಂದ ಕುಂಟುತ್ತಾ ತೇವಳುತ್ತಾ ಸಾಗುತ್ತಿವೆ.

ಸಿಂಗಟಾಲೂರು ಏತ ನೀರಾವರಿ ಯೋಜನೆ ಲೋಕಾರ್ಪಣೆಗೊಂಡು ಸುಮಾರು 12-13 ವರ್ಷಗಳಾಗುತ್ತಾ ಬಂದರೂ ಕೊಪ್ಪಳ ಜಿಲ್ಲೆಗೆ ಹನಿ ನೀರು ಪೂರೈಕೆಯಾಗುತ್ತಿಲ್ಲ ಎನ್ನುವುದು ಅಚ್ಚರಿಯಾದರೂ ಸತ್ಯ. ಈ ಹಿಂದಿನ ಬಿಜೆಪಿ ಸರ್ಕಾರ ಸರ್ಕಾರದ ಅವಧಿ ಮುಗಿಯುವ ವೇಳೆಯಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಅನುಷ್ಠಾನಕ್ಕೆ ಅಸ್ತು ಎಂದಿತು.

ಹೀಗೆ, ಹನಿ ನೀರಾವರಿ, ಕಾಲುವೆ ನೀರಾವರಿ, ತುಂತುರು ಹನಿ ನೀರಾವರಿ ಎಂದು ಪ್ರಯೋಗಗಳನ್ನು ಮಾಡುತ್ತಲೇ ಹತ್ತನ್ನೆರಡು ವರ್ಷಗಳನ್ನು ದೂಡುತ್ತಾ ಬರಲಾಗುತ್ತಿದೆ. ಈಗ ಮಧ್ಯಪ್ರದೇಶ ಮಾದರಿ ಎನ್ನುವ ಹೆಸರು ಹೇಳಿಕೊಂಡು ಇನ್ನು ಹತ್ತು ವರ್ಷಗಳ ಕಾಲ ದೂಡುವಂತಾಗಬಾರದು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

Singatalur Lift Irrigation: ಎರಡು ದಶಕ ಕಳೆದರೂ ಸಿಗದ ಸೌಲಭ್ಯ

ಯೋಜನೆ ಲೋಕಾರ್ಪಣೆಗೊಂಡಿದೆ. ನೀರು ಸಹ ಸಂಗ್ರಹವಾಗುತ್ತಿದೆ. ಆದರೆ, ಕೊಪ್ಪಳ ಜಿಲ್ಲೆಗೆ ಬಳಕೆ ಮಾಡಿಕೊಳ್ಳುವುದಕ್ಕೆ ಕಾಲುವೆಯೂ ಇಲ್ಲ, ಹನಿ ನೀರಾವರಿಯೂ ಜಾರಿಯಾಗಿಲ್ಲ. ಎಲ್ಲವೂ ಅರ್ಧಮರ್ಧ ಎನ್ನುವಂತಾಗಿವೆ. ಇದಕ್ಕೊಂದು ಪರಿಹಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡುವರೇ ಎನ್ನುವುದು ಸದ್ಯದ ಕುತೂಹಲವಾಗಿದೆ.

ನವಲಿ ಸಮಾನಾಂತರ ಜಲಾಶಯ, ಕೆರೆ ತುಂಬಿಸುವ ಯೋಜನೆ, ನಾನಾ ಏತನೀರಾವರಿ ಯೋಜನೆಗಳು ಇದ್ದು, ಇವುಗಳ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಆದ್ಯತೆ ಸಿಕ್ಕಿತೆ ಎನ್ನುವುದು ಸದ್ಯದ ಕುತೂಹಲವಾಗಿದೆ.

ಕೊಪ್ಪಳ ಏತ ನೀರಾವರಿ ಯೋಜನೆಗೆ ಪ್ರಾಯೋಗಿಕವಾಗಿ ನೀರು ಬಂದಿದೆಯಾದರೂ ಇದು ನೀರಾವರಿ ಮಾಡಿಕೊಳ್ಳುವುದಕ್ಕೆ ಅಲ್ಲ. ಹೀಗಾಗಿ ಇದನ್ನು ನೀರಾವರಿಗೆ ನೀರು ದೊರೆಯುವಂತಾಗಬೇಕಾದರೆ ಆಲಮಟ್ಟಿಜಲಾಶಯದ ಎತ್ತರ ಹೆಚ್ಚಿಸುವ ಕಾರ್ಯ ಆಗಬೇಕಾಗಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರದ ನಡೆ ಏನು ಎನ್ನುವುದೇ ಸದ್ಯದ ಕುತೂಹಲ.

ಶೈಕ್ಷಣಿಕ ಸಮಸ್ಯೆ:

ಶೈಕ್ಷಣಿಕವಾಗಿಯೂ ಕೊಪ್ಪಳ ನಾನಾ ಸಮಸ್ಯೆ ಎದುರಿಸುತ್ತಿದೆ. ಆದರೂ ಅದಕ್ಕೆ ಇದುವರೆಗೂ ಪರಿಹಾರ ದೊರೆಯುತ್ತಲೇ ಇಲ್ಲ. ಪ್ರಥಮ ದರ್ಜೆ ಪದವಿ ಕಾಲೇಜು ಕಟ್ಟಡದ ಸಮಸ್ಯೆ ಇದ್ದು, ಇದು ಇತ್ಯರ್ಥವಾಗುತ್ತಿಲ್ಲ. ಈಗಿರುವ ಕಟ್ಟಡ ಸಾಲದಂತಾಗಿದೆ. ಸ್ನಾತಕೋತ್ತರ ಕೇಂದ್ರ ಇದ್ದರೂ ಜಾಗ ಇಲ್ಲದೆ ಕುಕನೂರು ತಾಲೂಕಿನ ಎಂಜನಿಯರಿಂಗ್‌ ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ಇದಕ್ಕೆ ಇನ್ನು ಜಾಗವೂ ಇಲ್ಲ, ಕಟ್ಟಡಕ್ಕೆ ಅನುದಾನವೂ ಇಲ್ಲ.

ಕೊಪ್ಪಳಕ್ಕೆ ಮಂಜೂರಿಯಾಗಿರುವ ವಿವಿಯೂ ಜಿಲ್ಲಾ ಕೇಂದ್ರದಲ್ಲಿ ಜಾಗ ಇಲ್ಲದ ಕಾರಣ ಕುಕನೂರು ತಾಲೂಕು ಎಂಜನಿಯರಿಂಗ್‌ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದೆ. ಅದನ್ನು ಮರಳಿ ಕೊಪ್ಪಳಕ್ಕೆ ಸ್ಥಳಾಂತರ ಮಾಡುವ ಕನಸು ಯಾವಾಗ ನನಸಾಗುವುದು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಕೊಪ್ಪಳ ವಿವಿಗೆ ಬೇಕಾಗುವ ಭೂಮಿ ಮತ್ತು ಕಟ್ಟಡಕ್ಕೆ ಅನುದಾನವನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನೀಡುವರೇ ಎನ್ನುವುದನ್ನು ಕಾದು ನೋಡಬೇಕಿದೆ.

ರೈಸ್‌ ಪಾರ್ಕ್:

ನನೆಗುದಿಗೆ ಬಿದ್ದಿರುವ ರೈಸ್‌ ಪಾರ್ಕ್, ತೋಟಗಾರಿಕಾ ಪಾರ್ಕ್ ಸೇರಿದಂತೆ ಅನೇಕ ಯೋಜನೆಗಳು ಹಾಗೆಯೇ ಇವೆ. ಇದ್ಯಾವುದಕ್ಕೂ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಲೇ ಇಲ್ಲ. ಕೊಪ್ಪಳ ಮೆಡಿಕಲ್‌ ಕಾಲೇಜ ಚೆನ್ನಾಗಿಯೇ ನಡೆಯುತ್ತಿದೆ. ಈಗ ಸ್ನಾತಕೋತ್ತರ ಸಹ ಪ್ರಾರಂಭಿಸಲಾಗಿದೆ. ಆದರೆ, ಇದಕ್ಕೆ ಪೂರಕವಾಗಿ ಬೇಕಾಗಿರುವ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಈ ಹಿಂದಿನ ಸರ್ಕಾರ ಭರವಸೆ ನೀಡಿದೆಯಾದರೂ ಅದು ಜಾರಿಗೆ ಬಂದಿಲ್ಲ. ಈ ಬಾರಿ ಬಜೆಟ್‌ನಲ್ಲಿ ಘೋಷಣೆ ಮಾಡುವರೇ ಎನ್ನುವುದು ಸದ್ಯದ ಕುತೂಹಲವಾಗಿದೆ.

ಸಿಂಗಟಾಲೂರು ಏತನೀರಾವರಿಗಾಗಿ ಶೀಘ್ರ ಬೃಹತ್‌ ಹೋರಾಟ

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿಯೇ ಮೆಡಿಕಲ್‌ ಕಾಲೇಜು ಆಸ್ಪತ್ರೆ ನಡೆಸಲಾಗುತ್ತಿದೆ. ಹೀಗಾಗಿ ಪ್ರತ್ಯೇಕ ಮೆಡಿಕಲ್‌ ಕಾಲೇಜು ಆಸ್ಪತ್ರೆಗಾಗಿ ಈಗಾಗಲೇ ಕಟ್ಟಡ ನಿರ್ಮಾಣವಾಗಿದ್ದರೂ ಕ್ರಮವಾಗಿಲ್ಲ.ಈ ದಿಸೆಯಲ್ಲಿ ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪ ಆಗುವುದೇ ? ೕಗೆ ಹತ್ತು ಹಲವು ಯೋಜನೆಗಳು ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಕುಂಟುತ್ತಾ ತೇವಳುತ್ತಾ ಸಾಗುತ್ತಿದ್ದು, ಇವುಗಳಿಗೆ ಆದ್ಯತೆ ಸಿಗುವುದೇ ಎನ್ನುವುದು ಸದ್ಯದ ಕುತೂಹಲ.

Latest Videos
Follow Us:
Download App:
  • android
  • ios