ಸಿಂಗಟಾಲೂರು ಏತನೀರಾವರಿಗಾಗಿ ಶೀಘ್ರ ಬೃಹತ್ ಹೋರಾಟ
- ಯೋಜನೆ ಅನುಷ್ಠಾನಗೊಂಡು 10 ವರ್ಷವಾದರೂ ಹನಿ ನೀರು ಬಂದಿಲ್ಲ.
- ಸಿಂಗಟಾಲೂರು ಏತನೀರಾವರಿಗಾಗಿ ಶೀಘ್ರ ಬೃಹತ್ ಹೋರಾಟ
- ಜನಪ್ರತಿನಿಧಿಗಳ ವರ್ತನೆಗೆ ತಾಳ್ಮೆಯ ಕಟ್ಟೆಒಡೆದಿದೆ: ಹೋರಾಟಗಾರರ ಆಕ್ರೋಶ
ಕೊಪ್ಪಳ (ಆ.21) : ಯೋಜನೆ ಅನುಷ್ಠಾನಗೊಂಡು 10 ವರ್ಷವಾದರೂ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಕೊಪ್ಪಳ ತಾಲೂಕಿಗೆ ಹನಿ ನೀರು ಬಂದಿಲ್ಲ. ಯಾವ ಮಾದರಿಯಲ್ಲಿ ಜಾರಿ ಮಾಡುತ್ತಿರೋ ಗೊತ್ತಿಲ್ಲ. ಆದರೆ, ಕೂಡಲೇ ನೀರು ಕೊಡದಿದ್ದರೆ ತಿಂಗಳೊಳಗಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅಳವಂಡಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನ ಸಮಿತಿ ಎಚ್ಚರಿಕೆ ನೀಡಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಶರಣಪ್ಪ ಜಡಿ, ನಾಗಪ್ಪ ಸವಡಿ, ಬಸವರಡ್ಡಿ ಗದ್ದಿಕೇರಿ, ದೇವಪ್ಪ ಕಟ್ಟಿಮನಿ, ಈಶಪ್ಪ ಜೋಳ ಅವರು ಗುಡುಗಿದ್ದಾರೆ.
ಭಗವತಿ ಶಿರೂರ ಏತ ನೀರಾವರಿ ಮೂಲಕ ಯೋಜನೆಗೆ ಚಾಲನೆ
ಯೋಜನೆ ಅನುಷ್ಠಾನ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಆಗಲಿಲ್ಲ, ಬಿಜೆಪಿ ಸರ್ಕಾರ(BJP Govt) ಇದ್ದಾಗಲೂ ಆಗಿಲ್ಲ. ನಾವು ರೋಸಿ ಹೋಗಿದ್ದೇವೆ. ಏತ ನೀರಾವರಿ(Lift irrigation) ಯೋಜನೆಯಲ್ಲಿ ನಿರ್ಮಾಣ ಮಾಡಿರುವ ಅಣೆಕಟ್ಟೆಯಲ್ಲಿ ನೀರು ನಿಲ್ಲುತ್ತದೆ. ವ್ಯರ್ಥವಾಗಿ ಹರಿದು ಹೋಗುತ್ತದೆ. ಕಳೆದ ಹತ್ತು ವರ್ಷಗಳಿಂದ ಇದುವರೆಗೂ ಸುಮಾರು 100 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಹೋಗಿದೆ. ಮೊದಲು ಕಾಲುವೆ ನೀರಾವರಿ ಮಾಡುತ್ತೇವೆ ಎಂದರು. ನಂತರ ಹನಿ ನೀರಾವರಿ ಮಾಡುತ್ತೇವೆ ಅಂದರು. ಇದಾದ ನಂತರ ತುಂತುರು ಹನಿ ನೀರಾವರಿ ಮಾಡುತ್ತೇವೆ. ಸುಮಾರು 2 ಲಕ್ಷಕ್ಕೂ ಅಧಿಕ ಎಕರೆ ನೀರಾವರಿಯಾಗುತ್ತದೆ ಎಂದು ರೈತರ ಮೂಗಿಗೆ ತುಪ್ಪ ಸವರಿದರು.
ಇದ್ಯಾವುದು ಕಾರ್ಯಗತವಾಗಲೇ ಇಲ್ಲ. ಅವೈಜ್ಞಾನಿಕವಾಗಿ ಕಾಲುವೆ ನಿರ್ಮಾಣ ಮಾಡಿದ್ದು, ರೈತರ ಹೊಲಗಳು ಹಾಳಾಗಿ ಹೋಗಿವೆ. ರೈತರ ಹೊಲಕ್ಕೆ ಹೋಗುವುದಕ್ಕೆ ರಸ್ತೆ ಇಲ್ಲದಾಗಿದೆ. ಈಗಾಗಲೇ ಎಡಭಾಗದಲ್ಲಿ ಹೂವಿನಹಡಗಲಿ ವ್ಯಾಪ್ತಿಯಲ್ಲಿ ನೀರಾವರಿಯಾಗುತ್ತಿದೆ. ಆದರೆ, ಬಲಭಾಗದಲ್ಲಿ ಮಾತ್ರ ಇದುವರೆಗೂ ಹನಿ ನೀರಾವರಿಯಾಗುತ್ತಿಲ್ಲ. ಇಷ್ಟಾದರೂ ಜನಪ್ರತಿನಿಧಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಇದೆಲ್ಲವನ್ನು ನೋಡಿಕೊಂಡು ಸುಮ್ಮನಿದ್ದ ನಮ್ಮ ತಾಳ್ಮೆಯ ಕಟ್ಟೆಯೊಡೆದಿದೆ ಎಂದರು.
ಇನ್ನು ತಿಂಗಳೊಳಗಾಗಿ ಯಾವುದಾದರೂ ಮಾದರಿ ಜಾರಿ ಮಾಡಿ, ರೈತರ ಭೂಮಿಗೆ ನೀರು ಕೊಡಿ. ಇಲ್ಲದಿದ್ದರೆ ರೈತರು ನಡೆಸುವ ಹೋರಾಟವನ್ನು ಎದುರಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ಕಾಲುವೆ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡ ರೈತರ ಭೂಮಿಗೆ ಪರಿಹಾರ ನೀಡಿರಲಿಲ್ಲ. ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸುತ್ತಿದ್ದಂತೆ ಸುಮಾರು .6 ಕೋಟಿ ಪರಿಹಾರ ರೈತರ ಖಾತೆಗೆ ಜಮೆಯಾಯಿತು.
ಕೊಪ್ಪಳ: ನೀರು ಬಾರದ ಕಾಲುವೆಗೆ ಕೋಟ್ಯಂತರ ರು. ವೆಚ್ಚ!
ಈಗ ನಾವು ಕೊಡವಿ ನಿಂತಿದ್ದೇವೆ. ಇನ್ಮುಂದೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಿನ ಉಪಚುನಾವಣೆಯಲ್ಲಿ ಸಂಗಣ್ಣ ಕರಡಿ ಅವರ ಗೆಲ್ಲಿಸಲು ಪ್ರಚಾರಕ್ಕಾಗಿ ಆಗಮಿಸಿದ್ದರು. ನಮ್ಮ ಭಾಗದಲ್ಲಿಯೇ ಇದ್ದು, ಭರವಸೆಯನ್ನು ನೀಡಿದ್ದರು. ಅವರಿಗೆ ಈ ಯೋಜನೆಯ ಬಗ್ಗೆ ಚೆನ್ನಾಗಿ ಗೊತ್ತಿದೆ. ಈಗ ಅವರೇ ಮುಖ್ಯಮಂತ್ರಿ ಇದ್ದಾರೆ. ಕೂಡಲೇ ನಮ್ಮ ಹತ್ತು ವರ್ಷಗಳಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಈ ಬಾರಿ ಪ್ರತಿ ಹಳ್ಳಿ ಹಳ್ಳಿಯಲ್ಲಿಯೂ ಸಂಘಟನೆಯನ್ನು ಸಂಘಟನೆ ಮಾಡಿ, ಹೋರಾಟವನ್ನು ತೀವ್ರಗೊಳಿಸುತ್ತೇವೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.