ಫ್ಲಿಪ್ ಕಾರ್ಟ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗಿದೆ.
ಮಾಲೂರು (ನ.03): ತಾಲೂಕಿನ ಮಾರಸಂದ್ರ ಗ್ರಾಮದ ಕೈಗಾರಿಕಾ ಪ್ರಾಂಗಣದಲ್ಲಿರುವ ಅಲ್‌ಕಾರ್ಗೊ ಸಂಸ್ಥೆಗೆ ಸೇರಿರುವ ಪ್ರಾಗಂಣದಲ್ಲಿರುವ ಪ್ಲಿಪ್‌ಕಾರ್ಟ್ ಕಾರ್ಖಾನೆಯಲ್ಲಿ ನ.1 ರಂದು ಕನ್ನಡ ರಾಜ್ಯೋತ್ಸವ ದಿನದಂದು ಸರಕಾರಿ ರಜೆ ಇದ್ದರೂ ಸಹ ಕಾರ್ಮಿಕರಿಗೆ ರಜೆ ನೀಡದೆ ದುಡಿಸಿಕೊಳ್ಳುತ್ತಿರುವುದನ್ನು ಖಂಡಿಸಿ ತಾ.ಕರವೇ ಪದಾಧಿಕಾರಿಗಳು ಕಾರ್ಖಾನೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಮಾರಸಂದ್ರ ಗ್ರಾಮದ ಸಮೀಪ ಇರುವ ಅಲ್‌ಕಾರ್ಗೊ ಸಂಸ್ಥೆಗೆ ಸೇರಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಲಿಪ್‌ಕಾರ್ಟ್ ಕಾರ್ಖಾನೆಯಲ್ಲಿ ನ.1 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಸರಕಾರ ರಜೆಯನ್ನು ಘೋಷಣೆ ಮಾಡಿದೆ. ಕೈಗಾರಿಕಾ ಪ್ರಾಂಗಣದಲ್ಲಿರುವ ಎಲ್ಲಾ ಕಾರ್ಖಾನೆಗಳು ರಜೆಯನ್ನು ಘೋಷಣೆ ಮಾಡಿ ಕಾರ್ಮಿಕರಿಗೆ ರಜೆಯನ್ನು ನೀಡಿದ್ದರೂ ಪ್ಲಿಪ್‌ಕಾರ್ಟ್ ಮಾತ್ರ ಕಾರ್ಮಿಕರಿಗೆ ರಜೆಯನ್ನು ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಹಕರ ಫ್ಯಾಷನ್ ಅನುಭವವನ್ನು ಹೆಚ್ಚಿಸಲು ABFRL ಜೊತೆ ಫ್ಲಿಪ್‌ಕಾರ್ಟ್ ಒಪ್ಪಂದ! .
ನಾಡಿಗೆ ಮಾಡಿದ ದ್ರೋಹ: ಕರವೇ ಜಿಲ್ಲಾ ಉಪಾಧ್ಯಕ್ಷ ಎಸ್.ಎಂ.ರಾಜು ಮಾತನಾಡಿ, ಪ್ಲಿಪ್‌ಕಾರ್ಟ್ ಕಾರ್ಖಾನೆಯವರು ಮಾತ್ರ ಕಾರ್ಮಿಕರಿಗೆ ರಜೆ ನೀಡದೆ ದುಡಿಸಿಕೊಳ್ಳುತ್ತಿರುವುದು ನಾಡಿಗೆ ದ್ರೋಹ ಮಾಡಿದಂತಾಗಿದೆ. ರಾಜ್ಯೋತ್ಸವ ದಿನದಂದು ರಜೆ ನೀಡದ ವ್ಯವಸ್ಥಾಪಕರ ನಿರ್ಲಕ್ಷವನ್ನು ಖಂಡಿಸಿ ಕಾರ್ಖಾನೆಯ ಮುಂಭಾಗದಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ಸ್ಪಂದಿಸಿದ ವ್ಯವಸ್ಥಾಪಕ ಕಿರಣ್‌ಕುಮಾರ್, ಕಾರ್ಖಾನೆಯಲ್ಲಿ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಕಾರ್ಮಿಕರಿಗೆ ಪೂರ್ತಿ ದಿನ ರಜೆಯನ್ನು ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಚಾಕನಹಳ್ಳಿ ನಾಗರಾಜ್, ತಾಲೂಕು ಪ್ರಧಾನ ಸಂಚಾಲಕ ಕೆ.ಎನ್.ಜಗದೀಶ್, ತಾ.ಉಪಾಧ್ಯಕ್ಷ ದ್ಯಾಪಸಂದ್ರ ಅಮರ್ ಇತರರು ಹಾಜರಿದ್ದರು.
