ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡಿಗರ ಹಿತ ಕಾಯಿರಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮೂಲಕ ಮುಖ್ಯಮಂತ್ರಿ, ಪ್ರಧಾನಿಗೆ ಕರವೇ ಒತ್ತಾಯ

ದಾವಣಗೆರೆ (ಅ.13) : ಕೇಂದ್ರ ಸರ್ಕಾರಿ ಸಿಬ್ಬಂದಿ ನೇಮಕಾತಿ ಆಯೋಗದಿಂದ ಆಗುತ್ತಿರುವ ಬಿ ಮತ್ತು ಸಿ ದರ್ಜೆ ನೌಕರಿಗಳಲ್ಲಿ ಕನ್ನಡಿಗರ ಹಿತ ಕಾಯಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮೂಲಕ ಮುಖ್ಯಮಂತ್ರಿ, ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

ಸ್‌ಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ನಿರ್ಲಕ್ಷ್ಯ ವಿವಾದ, ಸೋಶಿಯಲ್‌ ಮೀಡಿಯಾದಲ್ಲಿ ಕೇಂದ್ರದ ವಿರುದ್ಧ ಕೆಂಗಣ್ಣು!

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್‌.ರಾಮೇಗೌಡ ಮಾತನಾಡಿ, ನಾಡಿನ ಯುವಜನರ ಉದ್ಯೋಗಾವಕಾಶಗಳ ಹಕ್ಕಿಗಾಗಿ ಸದಾಕಾಲ ದನಿಯೆತ್ತುತ್ತಾ ಬಂದಿದೆ. ಇದೀಗ ಒಕ್ಕೂಟ ಸರ್ಕಾರವು, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ 20,000ಕ್ಕೂ ಹೆಚ್ಚಿನ ಬಿ ಮತ್ತು ಸಿ ದರ್ಜೆಯ ಹುದ್ದೆಗಳಿಗಾಗಿ ಅರ್ಜಿಗಳ ಆಹ್ವಾನಿಸಿದೆ. ಈ ಇಡೀ ಪ್ರಕ್ರಿಯೆ ಸೆ.17,2022ರಿಂದ ಆರಂಭವಾಗಿದ್ದು, ಸದರಿ ನೇಮಕಾತಿಯ ಅರ್ಜಿ ಸಲ್ಲಿಸುವಿಕೆಯಿಂದ ಹಿಡಿದು ಎಲ್ಲಾ ಹಂತಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ತನಕ ಕೇವಲ ಹಿಂದಿ ಮತ್ತು ಇಂಗ್ಲೀಷ್‌ಗಳಲ್ಲಿ ನಡೆಯಲಿವೆ. ಇದು ಕನ್ನಡಿಗರ ಉದ್ಯೋಗಾವಕಾಶಗಳ ಕಸಿಯುವಂಥಾ ತಾರತಮ್ಯದ ನಡೆಯಾಗಿದೆ.

ನೇಮಕಾತಿಯ ಎಲ್ಲಾ ಹಂತದ ಪರೀಕ್ಷೆಗಳೂ ಹಿಂದಿ, ಇಂಗ್ಲೀಷ್‌ಗಳಲ್ಲಿ ಮಾತ್ರಾ ನಡೆಸುವುದು ಹಿಂದಿ ತಾಯ್ನುಡಿಯ ಅಭ್ಯರ್ಥಿಗಳಿಗೆ ನ್ಯಾಯಸಮ್ಮತವಲ್ಲದ ಅನುಕೂಲ ಮಾಡಿಕೊಡುತ್ತದೆ. ಹಿಂದಿ ತಾಯ್ನುಡಿಯವರಿಗೆ ಮಾತ್ರ ಅವರ ತಾಯ್ನುಡಿಯಲ್ಲಿ ಅರ್ಜಿ ಸಲ್ಲಿಸುವ, ಪರೀಕ್ಷೆ ಬರೆಯುವ ಅನುಕೂಲ ಮಾಡಿರುವುದು ಎಲ್ಲಾ ಹಿಂದಿಯೇತರರಿಗೆ ಕೇಂದ್ರ ಸರ್ಕಾರ ಎಸಗುತ್ತಿರುವ ದ್ರೋಹ ಎಂದು ತಿಳಿಸಿದ್ದಾರೆ.

ಇದಷ್ಟೇ ಅಲ್ಲದೆ, ಹೀಗೆ ದೇಶಾದ್ಯಂತ ನಡೆಯುವ ನೇಮಕಾತಿಯು ಈ ಹಿಂದಿನಂತೆ ವಲಯವಾರು ಆಗುವದು ನಾಡಿನ ಜನತೆಯ ಸುಲಲಿತತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಏಕೆಂದರೆ ಕರ್ನಾಟಕ-ಕೇರಳ ವಲಯಕ್ಕೆ ನೇಮಕಾತಿಯಾಗುವಾಗ ಇಲ್ಲಿನ ಎಲ್ಲಾ ಹುದ್ದೆಗಳೂ ಈ ವಲಯದ ಅಭ್ಯರ್ಥಿಗಳಿಗೆ ಸಿಗುತ್ತಿದ್ದರಿಂದ (ಪರೀಕ್ಷೆಗಳು ಕನ್ನಡದಲ್ಲಿ ನಡೆಯದಿದ್ದಾಗಲೂ) ಸ್ಥಳೀಯರಿಗೆ ಸದರಿ ಕೇಂದ್ರ ಕಚೇರಿಗಳಲ್ಲಿ ಅನಾನುಕೂಲಗಳ ಪ್ರಮಾಣ ಬಹುಶಃ ಕಡಿಮೆಯಿರುತ್ತಿತ್ತು. ಈ ದೇಶಾದ್ಯಂತ ನೇಮಕಾತಿಯಿಂದಾಗಿ ಪರಭಾಷೆಯ ಅಧಿಕಾರಿಗಳೊಂದಿಗೆ ವ್ಯವಹರಿಸಬೇಕಾದ ಅನಿವಾರ್ಯತೆ ಹೆಚ್ಚಲಿದ್ದು, ನಾಗರಿಕರಿಗೆ ಉಂಟಾಗುವ ಭಾಷಾ ಸಂಬಂಧಿತ ಅನಾನುಕೂಲಗಳು ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚಲಿವೆ. ಹಾಗಾಗಿ ಈ ಇಡೀ ನೇಮಕಾತಿ ಪ್ರಕ್ರಿಯೆಯು ವಲಯವಾರು ನಡೆಯುವುದು ಮತ್ತು ಕನ್ನಡದಲ್ಲಿ ಕೂಡಾ ನಡೆಯುವುದು ಕನ್ನಡಿಗರು ಅರ್ಜಿ ಸಲ್ಲಿಸಲು ಮತ್ತು ನೇಮಕವಾಗಲು ಸಹಕಾರಿ ಎಂದು ಹೇಳಿದರು.

ಹಿಂದಿ ಕಡ್ಡಾಯದ ಅಮಿತ್‌ ಶಾ ವರದಿ ಆಘಾತಕಾರಿ: ಎಚ್‌.ಡಿ.ಕುಮಾರಸ್ವಾಮಿ

ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕ ಅಧ್ಯಕ್ಷರಾದ ಬಸಮ್ಮ ಶಾಂತಮ್ಮ, ಮಂಜುಳಮ್ಮ, ಸಾಕಮ್ಮ, ನಗರ ಘಟಕ ಅಧ್ಯಕ್ಷ ಎನ್‌.ಟಿ.ಹನುಮಂತಪ್ಪ, ಜಿ.ಎಸ್‌.ಸಂತೋಷ್‌, ರವಿಕುಮಾರ, ಮಹೇಶ್ವರಪ್ಪ, ಎಂ.ಡಿ.ರಫೀಕ್‌, ವಾಸುದೇವ್‌ ರಾಯ್ಕರ್‌, ಯುವ ಘಟಕ ಅಧ್ಯಕ್ಷ ಗೋಪಾಲ್‌ ದೇವರಮನಿ, ತಿಪ್ಪೇಶ್‌, ಅನ್ವರ್‌, ಅಭಿಷೇಕ್‌, ರಾಹುಲ್‌, ಅಜಯ್‌, ಗಜೇಂದ್ರ ಮತ್ತಿತರು ಇದ್ದರು.