ಸ್ಟೇರಿಂಗ್ ಕಟ್ ಆದ ಬಸ್ ನಿಲ್ಲಿಸಿ 40 ಮಂದಿ ಜೀವ ರಕ್ಷಿಸಿದ ತುಕಾರಾಮ
ವೇಗವಾಗಿ ಚಲಿಸುತ್ತಿರುವ ಬಸ್ಸಿನ ಸ್ಟೇರಿಂಗ್ ಕಟ್ ಆಗಿ ಕೈಗೆ ಬಂದರೆ ಏನು ಮಾಡಬೇಕು? ಬ್ರೇಕು ಹಾಕಿದರೂ ಬಸ್ಸು ನಿಯಂತ್ರಣಕ್ಕೆ ಬರುತ್ತಿಲ್ಲ. ಎಂಥವರೇ ಆದರೂ ಎದೆಗುಂದುವ ಸನ್ನಿವೇಶದಲ್ಲಿ ತನ್ನ ಜೀವನಾನುಭವವನ್ನೆಲ್ಲಾ ಒಟ್ಟಾಗಿಸಿ ಬಸ್ಸು ನಿಲ್ಲಿಸಿದ ತುಕಾರಾಮರ ಧೈರ್ಯ ಎಲ್ಲರಿಗೂ ಬರುವಂತದ್ದಲ್ಲ. ತನ್ನ ಜೀವವನ್ನೇ ಪಣಕ್ಕಿಟ್ಟು ಸುಮಾರು 40 ಮಂದಿಯ ಪ್ರಾಣ ಉಳಿಸಿದ ವಿಜಯಪುರದ ತುಕಾರಾಮ ಅವರ ಧೈರ್ಯಕ್ಕೆ ಕನ್ನಡಪ್ರಭ-ಸುವರ್ಣನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ ಗೌರವ.
ರುದ್ರಪ್ಪ ಆಸಂಗಿ ವಿಜಯಪುರ
ವಿಜಯಪುರ [ಡಿ.25]: ಇಲ್ಲಿ ಕಿವಿಗಪ್ಪಳಿಸಿದ್ದು ಕೇವಲ ಗುಂಡಿನ ಸದ್ದು. ಕಂಡಿದ್ದು ರಕ್ತದೋಕುಳಿ, ಸೇಡು, ದಿಕ್ಕಿಲ್ಲದಂತೆ ಬಿದ್ದ ಶವಗಳು. ಕೌರ್ಯಕ್ಕೆ ಹೆಸರಾಗಿದ್ದ ಇದರ ಹೆಸರೇ ಭೀಮಾತೀರ. ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದ ಚಡಚಣ ತಾಲೂಕು ಕೇಂದ್ರದ ಭಾಗವಾಗಿರುವ ಇಲ್ಲಿ ಇದೀಗ ಸೇಡು ನಿಧಾನವಾಗಿ ಜೀವ ಕಳೆದುಕೊಳ್ಳುತ್ತಿದೆ. ಗುಂಡಿನ ಮೊರೆತದ ಸದ್ದಗಡುತ್ತಿದೆ. ಜೀವಗಳಿಗೆ ಈಗಿಲ್ಲಿ ಬೆಲೆ ಬಂದಿದೆ. ಜೀವ ಉಳಿಸಿದ ವ್ಯಕ್ತಿಗಳು ದೇವರ ಸ್ಥಾನಕ್ಕೇರಿದ್ದಾರೆ. ಅದೇ ರೀತಿ ಮಾರ್ಚ್‌ನಲ್ಲಿಸುಮಾರು 40 ಹೆಚ್ಚು ಮಂದಿಯ ಜೀವ ಉಳಿಸಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಇಂಡಿ ಘಟಕದ ಬಸ್ ಚಾಲಕ ತುಕಾರಾಮ ಪರಸಪ್ಪ ಮಾಡಗ್ಯಾಳ (58)ಅವರು ಇಲ್ಲಿನ ಮಂದಿಗೆ ಆದರ್ಶಪ್ರಾಯರಾಗಿದ್ದಾರೆ. ಜೀವದ ಹಂಗು ತೊರೆದು ಸಾಹಸ ಮೆರೆದ ಇವರು ಇಲ್ಲಿನ ಅಪರೂಪದ ವ್ಯಕ್ತಿಯಾಗಿದ್ದಾರೆ.
40 ಕ್ಕೂ ಹೆಚ್ಚು ಮಂದಿ ಕಾಪಾಡಿದ ತುಕಾರಾಮರು 2019 ರಲ್ಲಿ ಮಾರ್ಚ್ 2 ರಂದು ಚಡಚಣದಿಂದ ಇಂಚಗೇರಿ ಮಾರ್ಗವಾಗಿ ತುಕಾರಾಮ ಅವರು ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಇಂಚಗೇರಿ ದಾಟಿ ಸ್ವಲ್ಪ ದೂರಕ್ಕೆ ಹೋದ ಕೂಡಲೇ ಬಸ್‌ನಿಂದ ಏನೋ ಕಟ್ ಕಟ್ ಎನ್ನುವ ಶಬ್ದ ಬಂದಿದೆ. ಏನಾಯಿತು ಎಂದು ನೋಡ ನೋಡುತ್ತಿದ್ದಂತೆಯೇ ಸ್ಟೇರಿಂಗ್ ಕಿತ್ತು ಕೈಗೆ ಬಂದಿದೆ. ಆಗ ಸ್ಟೇರಿಂಗ್ ಕಟ್ ಆಗಿದೆ ಎನ್ನುವುದರ ಸ್ಪಷ್ಟ ಅರಿವು ತುಕಾರಾಮ ಅವರಿಗಾಗಿದೆ. ಬ್ರೇಕ್ ಹಾಕಿದರೂ ಬಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಆ ಕ್ಷಣಕ್ಕೆ ಏನು ಮಾಡಬೇಕು ಎನ್ನುವುದನ್ನು ಅರಿತು ಸಮಯಕ್ಕೆ ಸರಿಯಾಗಿ ಸ್ಪಂದಿಸುವುದು ಎಂಥವರಿಗೂ ಕಷ್ಟದ ಕೆಲಸ. ಕೈಯಲ್ಲಿ ಮುರಿದು ಬಂದಿರುವ ಸ್ಟೇರಿಂಗ್ ಇದೆ,
ಮುಂದೆ ನೋಡಿದರೆ ವೇಗವಾಗಿ ಸಾಗುತ್ತಿರುವ ಬಸ್ ಮರಕ್ಕೆ ಢಿಕ್ಕಿಯಾಗುವ ಸಂಭವ. ಹೀಗಿರುವಾಗಲೇ ತುಕಾರಾಮ ಎದೆಗುಂದದೆ ಚಾಣಾಕ್ಷತನದಿಂದ ಕಟ್ ಆಗಿರುವ ಸ್ಟೇರಿಂಗ್ ಅನ್ನು ಬಲವಾಗಿ ಹಿಡಿದು ಬ್ಯಾಲೆನ್ಸ್ ಮಾಡಿದ್ದಾರೆ. ತಮ್ಮ ವೃತ್ತಿಯ ಅನುಭವವನ್ನೆಲ್ಲಾ ಒಟ್ಟಾಗಿಸಿ ಬಸ್ ಅನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅಷ್ಟರಲ್ಲಿ ಬಸ್‌ನಲ್ಲಿ ಇದ್ದ ಎಲ್ಲರಿಗೂ ತಮ್ಮ ಜೀವ ಉಳಿದಿರುವುದು ತುಕಾರಾಮ ಅವರ ಅನುಭವ, ಅವರ ಸಮಯಪ್ರಜ್ಞೆಯಿಂದ ಎಂಬುದು ಗೊತ್ತಾಗಿದೆ.
ಬಸ್ಸಿನಲ್ಲಿಯೇ ಹುಟ್ಟು, ಸಾವು ಕಂಡವರು
ತುಕಾರಾಮ ಅವರು ಇಂಡಿ-ವಿಜಯಪುರ- ಫಂಡರಪುರಕ್ಕೆ ಬಸ್ ಓಡಿಸುತ್ತಿದ್ದ ಸಮಯವದು. ವಿಜಯಪುರದತ್ತ ಬಸ್ ಚಲಿಸುತ್ತಿದ್ದಾಗ ಬಸ್ಸಿನಲ್ಲಿ ಒಬ್ಬ ಗರ್ಭಿಣಿಗೆ ಹೆರಿಗೆ ನೋವಿನಿಂದ ಸಂಕಟ ಪಡುತ್ತಿದ್ದಳು. ಅದೇ ಬಸ್ಸಿನಲ್ಲಿ ಒಂದು ಗಂಡು ಮಗು ಅನಾರೋಗ್ಯಪೀಡಿತವಾಗಿತ್ತು. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಬೇಕು ಎಂದು ವೇಗವಾಗಿ ಬಸ್ ಚಲಾಯಿಸುತ್ತಿದ್ದರು ತುಕಾರಾಮ. ಆದರೆ ದುರದೃಷ್ಟವಶಾತ್ ಮಾರ್ಗಮಧ್ಯದ್ಲಿಯೇ ಅನಾರೋಗ್ಯಗೊಂಡಿದ್ದ ಮಗು ಅಸುನೀಗಿತ್ತು. ಅದೇ ವೇಳೆ ಬಸ್ಸಿನಲ್ಲಿದ್ದ ಗರ್ಭಿಣಿ ಸ್ತ್ರೀ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಳು.
ಪ್ರವಾಹ ಪೀಡಿತರ ಪ್ರಾಣ ರಕ್ಷಣೆಗೆ ಒದಗಿದ ರಾವಸಾಹೇಬ, ಧನಂಜಯ..
ಹಾಗಾಗಿ ತುಕಾರಾಮ ಅವರು ಬಸ್ಸಿನಲ್ಲಿಯೇ ಒಟ್ಟೊಟ್ಟಿಗೆ ಸಾವು, ಹುಟ್ಟು ಎರಡನ್ನೂ ಕಂಡವರು. ತಂದೆ- ತಾಯಿ, ಮಗುವನ್ನು ಒಂದುಗೂಡಿಸಿದ್ದರು ಸುಮಾರು 8 ವರ್ಷಗಳ ಹಿಂದೆ ತುಕಾರಾಮ ಅವರು ಇಂಡಿಯಿಂದ ಬೆಂಗಳೂರಿಗೆ ಬಸ್ ಓಡಿಸುತ್ತಿದ್ದರು. ಆಗ ಹೊಸಪೇಟೆ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಯಾಗಿತ್ತು. ಬಸ್ ಹೊರಡುವ ವೇಳೆಗೆ ಪುಟ್ಟ ಬಾಲಕನೊಬ್ಬ ಚಾಲಕ ತುಕಾರಾಮ ಪಕ್ಕದ ಸೀಟಿನಲ್ಲಿ ಬಂದು ಕುಳಿತಿದ್ದಾನೆ. ಬಸ್ ಹೊಸಪೇಟೆಯಿಂದ 3 - 4 ಕಿಮೀವರೆಗೆ ಬಂದಾದ ಮೇಲೆ ಲೋಕಾಭಿರಾಮವಾಗಿ ತುಕಾರಾಮ ಅವರು ಮಗುವಿಗೆ ನಿನ್ನ ಅಮ್ಮ, ಅಪ್ಪ ಎಲ್ಲಿ ಎಂದು ವಿಚಾರಿಸಿದ್ದಾನೆ. ಆಗ ಬಾಲಕ ನನ್ನ ಅಮ್ಮ, ಅಪ್ಪ ಹೊಸಪೇಟೆಯಲ್ಲಿಯೇ ಇದ್ದಾರೆ, ನಾನೊಬ್ಬನೆ ಬಸ್ ಏರಿದ್ದೇನೆ ಎಂದು ಹೇಳಿದಾಗ ತಕ್ಷಣವೇ ತುಕಾರಾಮ ಅವರು ಬಸ್ ಅನ್ನು ವಾಪಸ್ ಹೊಸಪೇಟೆಗೆ ತೆಗೆದುಕೊಂಡು ಬಂದಿದ್ದಾರೆ. ಮಗು ಬಸ್ಸಿನಲ್ಲಿ ಹೋಗಿದ್ದಕ್ಕೆ ಪೋಷಕರು ಗಾಬರಿಯಾಗಿ ಪೊಲೀಸರ ನೆರವು ಪಡೆಯುವ ವೇಳೆಗೆ ತುಕಾರಾಮರು ಮಗುವನ್ನು ಪೋಷಕರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದರು.
ಪಾರ್ಶ್ವ ವಾಯುವಿನಿಂದ ಬಳಲುತ್ತಿರುವ ಚಾಲಕ ಕಳೆದ ನಾಲ್ಕು ತಿಂಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿರುವ ತುಕಾರಾಮರು ಸೇವೆಗೆ ತೆರಳದೆ ಮನೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ದೇಹದ ಬಲ ಭಾಗ, ಮುಖ, ಬಾಯಿಯಿಂದ ಹಿಡಿದು ಕೈ, ಕಾಲುಗಳಿಗೆ ಶಕ್ತಿ ಇಲ್ಲದಾಗಿದೆ. ಆಯುರ್ವೇದ ಚಿಕಿತ್ಸೆಗೆ ಮೊರೆ ಹೋಗಿರುವ ಅವರು, ಈಗ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಮುಖಕ್ಕೆ ಪಾರ್ಶ್ವವಾಯು ಹೊಡೆದಿದ್ದರಿಂದಾಗಿ ಸ್ವಲ್ಪ ತೊದಲು ಇದೆ. ಇನ್ನೂ ಎರಡು ವರ್ಷ ಸೇವೆ ಇದೆ. ಕೈ ಸ್ವಾಧೀನ ಕಳೆದುಕೊಂಡಿರುವುದರಿಂದ ಬಸ್ ನಡೆಸಲು ಸಾಧ್ಯವಿಲ್ಲ. ಆದರೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬೇರೆ ಕೆಲಸ ನೀಡಿದರೆ ಅದನ್ನು ಪ್ರಾಮಾಣಿಕ, ದಕ್ಷತೆಯಿಂದ ಮಾಡುವ ಬಯಕೆ ಅವರದ್ದು.
ಉತ್ಕಟ ಆಕಾಂಕ್ಷೆ, ಛಲ ತೋರಿಸುತ್ತಿದ್ದಾರೆ. ಅದಕ್ಕೆ ಮೇಲಾಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕಿದೆ. ದ್ವಿತೀಯ ಪಿಯುಸಿ ಶಿಕ್ಷಣ 1.6.1962ರಲ್ಲಿ ಚಡಚಣ ಪಟ್ಟಣದಲ್ಲಿ ಜನಿಸಿದ ತುಕಾರಾಮ ಅವರು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಚಡಚಣದಲ್ಲಿಯೇ ಪೂರೈಸಿದ್ದಾರೆ. ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಚಡಚಣದ ಸಂಗಮೇಶ್ವರ ಹೈಸ್ಕೂಲ್‌ನಲ್ಲಿ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಮುಗಿಸಿದ್ದಾರೆ. ದ್ವಿತೀಯ ಪಿಯುಸಿ ಮುಗಿಸಿದ ತುಕಾರಾಮ ಅವರು 1986ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹುದ್ದೆಗೆ ನೇಮಕಗೊಂಡರು.