Asianet Suvarna News Asianet Suvarna News

ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಿ: ನಾಗಾಭರಣ

ಬಹುತೇಕ ಇಲಾಖೆಗಳು ಕನ್ನಡದಲ್ಲಿಯೇ ಸೇವೆಯನ್ನು ಒದಗಿಸುತ್ತಿದ್ದರೂ, ಸಂಪೂರ್ಣ ಅನುಷ್ಠಾನ ಇನ್ನೂ ಆಗುತ್ತಿಲ್ಲ. ಸರ್ಕಾರಿ ಇಲಾಖೆಗಳ ಎಲ್ಲ ವೆಬ್‌ಸೈಟ್‌ ಹಾಗೂ ತಂತ್ರಾಂಶಗಳಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದರು.

Kannada should be given first priority in government websites said TS Nagabharana gvd
Author
First Published Sep 8, 2022, 2:38 PM IST

ಶಿವಮೊಗ್ಗ (ಸೆ.08): ಬಹುತೇಕ ಇಲಾಖೆಗಳು ಕನ್ನಡದಲ್ಲಿಯೇ ಸೇವೆಯನ್ನು ಒದಗಿಸುತ್ತಿದ್ದರೂ, ಸಂಪೂರ್ಣ ಅನುಷ್ಠಾನ ಇನ್ನೂ ಆಗುತ್ತಿಲ್ಲ. ಸರ್ಕಾರಿ ಇಲಾಖೆಗಳ ಎಲ್ಲ ವೆಬ್‌ಸೈಟ್‌ ಹಾಗೂ ತಂತ್ರಾಂಶಗಳಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಕೆಲವು ಇಲಾಖೆಗಳ ವೆಬ್‌ಸೈಟ್‌ನಲ್ಲಿ ಮುಖಪುಟದಲ್ಲಿ ಕನ್ನಡ ಭಾಷೆ ಬಳಕೆ ಇದ್ದರೂ, ಮಾಹಿತಿಗಳು ಇಂಗ್ಲಿಷ್‌ ಭಾಷೆಯಲ್ಲಿವೆ. 

ವೆಬ್‌ಸೈಟ್‌ಗಳಲ್ಲಿ ಪ್ರತಿ ಮಾಹಿತಿ ಕೂಡ ಕನ್ನಡದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಇದೇ ರೀತಿ ಸಾರ್ವಜನಿಕರಿಗೆ ಸೇವೆ ಒದಗಿಸುವ ತಂತ್ರಾಂಶಗಳಲ್ಲಿ ಸಹ ಕಡ್ಡಾಯವಾಗಿ ಕನ್ನಡ ಅಳವಡಿಸಬೇಕು. ಜನಸಾಮಾನ್ಯರಿಗೆ ನೇರವಾಗಿ ಸೇವೆಯನ್ನು ಒದಗಿಸುವ ಇಲಾಖೆಗಳಲ್ಲಿ ಕನ್ನಡದ ಅನುಷ್ಠಾನ ಕಡ್ಡಾಯವಾಗಿ ಶೇ.100ರಷ್ಟುಜಾರಿಯಾಗಬೇಕು ಎಂದು ಹೇಳಿದರು. ಇದೇ ರೀತಿ ಬ್ಯಾಂಕ್‌, ಆರ್‌ಟಿಒ, ಮೆಸ್ಕಾಂ, ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಸೇವೆಗಳನ್ನು ಕನ್ನಡದಲ್ಲಿಯೇ ಒದಗಿಸಬೇಕು. ಇಲ್ಲಿ ಅರ್ಜಿ ನಮೂನೆಗಳು, ಚಲನ್‌ ಇತ್ಯಾದಿಗಳು ಕನ್ನಡದಲ್ಲಿಯೂ ಇರುವಂತೆ ಖಾತ್ರಿಪಡಿಸಬೇಕು. 

ದೊಡ್ಡಬಳ್ಳಾಪುರ ಜನೋತ್ಸವದಲ್ಲಿ ಜೆ.ಪಿ.ನಡ್ಡಾ ಭಾಗಿ: ವಿಜಯೇಂದ್ರ

ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಸ್ಥಳೀಯ ಸಂಸ್ಥೆಗಳು ಅಂಗಡಿಗಳಿಗೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಇದನ್ನು ಅನುಷ್ಟಾನಗೊಳಿಸಬೇಕು ಎಂದು ತಿಳಿಸಿದರು. ವೈದ್ಯರು ನೀಡುವ ಪೋಸ್ಟ್‌ ಮಾರ್ಟಂ ವರದಿ, ಬ್ಯಾಂಕ್‌ಗಳ ಪತ್ರ ವ್ಯವಹಾರ, ಸಾರ್ವಜನಿಕ ಸೇವೆಗಳು, ಔಷಧಿಗಳ ಹೆಸರು ಇತ್ಯಾದಿಗಳು ಕನ್ನಡದಲ್ಲಿ ಸಹ ಇರುವಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಗಳು ಪ್ರಕಟಿಸುವ ಟೆಂರ್ಡ ಅಧಿಸೂಚನೆಗಳು ಇನ್ನೂ ಇಂಗ್ಲಿಷ್ನಲ್ಲಿರುವುದನ್ನು ಗಮನಿಸಲಾಗಿದೆ. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಟೆಂಡರ್‌ ಅಧಿಸೂಚನೆ ಪ್ರಕಟಿಸಬೇಕು ಎಂದು ಹೇಳಿದರು.

Shivamogga: ಗಂಡ-ಹೆಂಡತಿ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ!

ಇದೇ ಸಂದರ್ಭದಲ್ಲಿ ಕನ್ನಡ ಅನುಷ್ಟಾನದಲ್ಲಿನ ಲೋಪಗಳ ಕುರಿತು ಪ್ರಾಧಿಕಾರಕ್ಕೆ ಬಂದಿರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಗೋಪಾಲಗೌಡ ಬಡಾವಣೆಯಲ್ಲಿರುವ ರಾಷ್ಟ್ರೀಯ ಬ್ಯಾಂಕ್ನಲ್ಲಿ ಅರ್ಜಿ ನಮೂನೆಗಳು ಕನ್ನಡದಲ್ಲಿ ಇಲ್ಲದ ಬಗ್ಗೆ ದೂರುಗಳು ಬಂದಿದ್ದು, ಇದನ್ನು ತಕ್ಷಣ ಸರಿಪಡಿಸಬೇಕು. ಶಿಕ್ಷಕರ ಕೊರತೆಯಿಂದ ಮುಚ್ಚಲಾಗಿರುವ ಸರ್ಕಾರಿ ಶಾಲೆಗಳ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳ ವಿವರಗಳನ್ನು ಒದಗಿಸಬೇಕು. ಕನ್ನಡ ಕಲಿಕಾ ಅಧಿನಿಯಮ 2017 ಅನ್ವಯ ಪ್ರತಿ ಶಾಲೆಗಳಲ್ಲಿ ಒಂದರಿಂದ 5ನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡವನ್ನು ಕಲಿಸಬೇಕಾಗಿದ್ದು, ಅದರ ಅನುಷ್ಟಾನ ಪರಿಶೀಲಿಸಬೇಕು. ಕನ್ನಡ ಅಂಕಿಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನವೆಂಬರ್‌ 1ರಿಂದ ಕನ್ನಡ ಅಂಕಿ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಜಿಪಂ ಸಿಇಒ ಪ್ರಕಾಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್‌ ವೇದಿಕೆಯಲ್ಲಿ ಇದ್ದರು.

Follow Us:
Download App:
  • android
  • ios