ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡರಥಕ್ಕೆ ಭುವನಗಿರಿಯಲ್ಲಿ ಚಾಲನೆ
ಕನ್ನಡತಾಯಿ ಭುವನೇಶ್ವರಿಯ ಸನ್ನಿಧಾನದಲ್ಲಿ ಚಾಲನೆ ದೊರೆತ ಕನ್ನಡ ರಥ ಇಡೀ ರಾಜ್ಯಾದ್ಯಂತ ಸಂಚರಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಹಾವೇರಿ ತಲುಪಲಿದ್ದು, ಇದೇ ಜ್ಯೋತಿಯಿಂದ ಸಮ್ಮೇಳನ ಉದ್ಘಾಟಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ
ಸಿದ್ದಾಪುರ(ಡಿ.02): ಹಾವೇರಿಯಲ್ಲಿ ಜ. 6 ಮತ್ತು 7ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕರುನಾಡಿನಾದ್ಯಂತ ಸಂಚರಿಸಲಿರುವ ಕನ್ನಡ ಜ್ಯೋತಿಯನ್ನು ಒಳಗೊಂಡ ಕನ್ನಡ ರಥಕ್ಕೆ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ಗುರುವಾರ ಚಾಲನೆ ನೀಡಲಾಯಿತು. ಕನ್ನಡತಾಯಿ ಭುವನೇಶ್ವರಿಯ ಸನ್ನಿಧಾನದಲ್ಲಿ ಚಾಲನೆ ದೊರೆತ ಕನ್ನಡ ರಥ ಇಡೀ ರಾಜ್ಯಾದ್ಯಂತ ಸಂಚರಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಹಾವೇರಿ ತಲುಪಲಿದ್ದು, ಇದೇ ಜ್ಯೋತಿಯಿಂದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ ಮಾತನಾಡಿ, ಕನ್ನಡದ ರಥ ಕರ್ನಾಟಕದಲ್ಲಿ ಕನ್ನಡತನವನ್ನು ಉಳಿಸಲು ದಾರಿದೀಪವಾಗಲಿದೆ. ಶಿಕ್ಷಣದಲ್ಲಿ, ಉದ್ಯೋಗ, ನ್ಯಾಯಾಲಯದಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು ಎಂಬುದು ರಾಜ್ಯ ಕಸಾಪದ ಉದ್ದೇಶವಾಗಿದೆ. ಈ ಸಮ್ಮೇಳನ ಸಾಹಿತ್ಯೋತ್ಸವದ ಜತೆಗೆ ಕನ್ನಡಿಗರ ವಿಜಯೋತ್ಸವವಾಗಲಿದೆ. ಎಲ್ಲ ಕನ್ನಡಿಗರು ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವಂತೆ ಕರೆ ನೀಡಿದರು.
ಕನ್ನಡದ ಮೊದಲ ನಿಘಂಟು ಬರೆದ ಕಿಟಲ್ ವಂಶಸ್ಥರು ಹಾವೇರಿಗೆ ಭೇಟಿ
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಮಾತೃಭಾಷೆ ಹೃದಯದ ಭಾಷೆಯಾಗಿ ಬಳಕೆಯಾಗಬೇಕು. ಕನ್ನಡಿಗರೆಲ್ಲ ಒಟ್ಟಾಗಿ ಕನ್ನಡದ ತೇರನ್ನು ಎಳೆಯೋಣ ಎಂದರು.
ಶಿರಸಿ ಉಪವಿಭಾಗಾಧಿಕಾರಿ ದೇವರಾಜ ಆರ್. ಮಾತನಾಡಿ, ಕನ್ನಡವನ್ನು ಉಳಿಸಬೇಕು ಎಂಬುದರ ಬದಲು ಕನ್ನಡ ಮೆರೆಸಬೇಕು ಎಂದು ಹೊರಡಬೇಕು. ಕನ್ನಡ ಉಳಿಸುವ ಕೆಲಸ ನಮ್ಮ ನಮ್ಮ ಮನೆಗಳಿಂದ ಮನಗಳಿಂದಲೇ ಆಗಬೇಕು ಎಂದರು.
ತಾಲೂಕಾ ದಂಡಾಧಿಕಾರಿ ಸಂತೋಷ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಸಿದ್ದಾಪುರ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ಶಿರಸಿ ಕಸಾಪ ಅಧ್ಯಕ್ಷ ಸುಬ್ರಾಯ ಬಕ್ಕಳ, ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಕಲಬುರಗಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ, ಬೇಡ್ಕಣಿ ಗ್ರಾಪಂ ಸದಸ್ಯರಾದ ಗೋವಿಂದ ನಾಯ್ಕ, ಈರಪ್ಪ ನಾಯ್ಕ ಉಪಸ್ಥಿತರಿದ್ದರು.
ಉತ್ತರ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಸ್ವಾಗತಿಸಿದರು. ಬನವಾಸಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಿದ್ದಾಪುರ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ವಂದಿಸಿದರು.