Asianet Suvarna News Asianet Suvarna News

ಆಂಧ್ರ ಸರ್ಕಾರದ ಆಂಗ್ಲ ಮಾಧ್ಯಮ ಪ್ರೇಮಕ್ಕೆ ಕನ್ನಡ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆ!

ಪೋಷಕರಿಂದ ಒಪ್ಪಿಗೆ ಪತ್ರ ಬರೆಸಿಕೊಳ್ಳುವ ಕಾರ್ಯ ಚುರುಕು| ಕನ್ನಡ ಮಾಧ್ಯಮ ಶಾಲೆಗಳು ಪೂರ್ಣ ಸ್ಥಗಿತ ಸಾಧ್ಯತೆ| ಒಂದು ಭಾಷೆಯಾಗಿಯೂ ಕನ್ನಡ ಉಳಿಯೋದು ಕಷ್ಟ| ಆಂಧ್ರ ಸರ್ಕಾರ ಎಲ್ಲ 13 ಜಿಲ್ಲೆಗಳ ಸರ್ಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮವನ್ನಾಗಿಸುವ ನಿರ್ಧಾರ| 

Kannada Medium Schools Faces Problems in Andhra Pradesh
Author
Bengaluru, First Published Jan 24, 2020, 8:27 AM IST

ಕೆ.ಎಂ. ಮಂಜುನಾಥ್‌ 

ಬಳ್ಳಾರಿ(ಜ.24): ನಿಮಗೆ ಇಂಗ್ಲಿಷ್‌ ಮೀಡಿಯಂ ಬೇಕಾ? ಇಲ್ಲವೇ ತೆಲುಗು ಮೀಡಿಯಂ ಬೇಕಾ? ಪೋಷಕರ ಭಾಷಾ ಆಯ್ಕೆ ಕುರಿತು ಆಂಧ್ರಪ್ರದೇಶದ ಜಗನ್‌ಮೋಹನ್‌ರೆಡ್ಡಿ ಸರ್ಕಾರ ಇಂತಹದೊಂದು ಒಪ್ಪಿಗೆ ಪತ್ರವನ್ನು ಪೋಷಕರಿಂದ ಪಡೆಯುತ್ತಿದೆ.

ಈಗಾಗಲೇ ಆಂಧ್ರಪ್ರದೇಶದ 13 ಜಿಲ್ಲೆಗಳಲ್ಲಿ ಪೋಷಕರಿಂದ ಒಪ್ಪಿಗೆ ಪತ್ರಗಳನ್ನು ಪಡೆಯುವ ಕಾರ್ಯ ಚುರುಕಾಗಿ ನಡೆದಿದ್ದು, ಬರುವ ಶೈಕ್ಷಣಿಕ ವರ್ಷದಿಂದ ಆಂಧ್ರಪ್ರದೇಶದ ಎಲ್ಲ ಸರ್ಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮವಾಗಿ ಪರಿವರ್ತಿಸಲು ಸಿದ್ಧತೆ ನಡೆಸಿದೆ.

ಆಂಗ್ಲ ಮಾಧ್ಯಮದಲ್ಲಿ ತೆಲುಗು ಒಂದು ಭಾಷೆಯನ್ನಾಗಿ ಕಲಿಸುವ ನಿಲುವು ಪಡೆದಿರುವ ಆಂಧ್ರಪ್ರದೇಶ ಸರ್ಕಾರ, ಸರ್ಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮವಾಗಿ ಬದಲಾಯಿಸುತ್ತಿರುವ ಕುರಿತು ಪ್ರತಿಪಕ್ಷ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಂದ ವಿರೋಧಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೋಷಕರಿಂದಲೇ ಒಪ್ಪಿಗೆ ಪತ್ರ ಪಡೆದು ಇಂಗ್ಲೀಷ್‌ ಮಾಧ್ಯಮ ವಿರೋಧಿಗಳಿಗೆ ಎದುರೇಟು ನೀಡಲು ಮುಂದಾಗಿದೆ.

ಒಪ್ಪಿಗೆ ಪತ್ರ ಕೆಲಸ ಚುರುಕು:

ಆಂಧ್ರದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಪೋಷಕರಿಂದ ಒಪ್ಪಿಗೆ ಪತ್ರ ಬರೆಸಿಕೊಳ್ಳುವ ಕಾರ್ಯ ಚುರುಕಾಗಿ ನಡೆದಿದೆ. ಏತನ್ಮಧ್ಯೆ ಆಂಧ್ರದ ಸರ್ಕಾರಿ ಶಾಲೆಗಳು ಇಂಗ್ಲೀಷ್‌ ಮಾಧ್ಯಮಗಳಾಗಿ ಬದಲಾಗುವುದರಿಂದ ಕನ್ನಡ ಶಾಲೆಗಳ ಅಸ್ತಿತ್ವಕ್ಕೆ ಕುತ್ತು ಬರುವ ಎಲ್ಲ ಸಾಧ್ಯತೆಗಳು ಇದ್ದು ಈ ಸಂಬಂಧ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆ ನಡೆಸದಿರುವುದು ಕನ್ನಡ ಮಾತೃಭಾಷಾ ಪ್ರಿಯರಲ್ಲಿ ತೀವ್ರ ಆತಂಕ ಮೂಡಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪರಿಣಾಮ ಮಾತೃಭಾಷೆ ಕನ್ನಡವಾಗಿದ್ದರೂ ಅನಿವಾರ್ಯವಾಗಿ ತೆಲುಗು ಒಂದು ಭಾಷೆಯಾಗಿ ಕಲಿತು ಇಂಗ್ಲೀಷ್‌ ಮಾಧ್ಯಮಕ್ಕೆ ಬದಲಾಗುವ ನಿರ್ಧಾರಕ್ಕೆ ಕನ್ನಡಿಗರು ಬಂದಿದ್ದಾರೆ ಎಂದು ಆಂಧ್ರದ ಕನ್ನಡಿಗರೇ ಹೇಳುತ್ತಾರೆ. ಇದಕ್ಕೆ ಕಾರಣವೂ ಇದೆ. ಈ ಮೊದಲಿನಿಂದಲೂ ಕರ್ನಾಟಕ ಸರ್ಕಾರ ಆಂಧ್ರಪ್ರದೇಶದ ಕನ್ನಡ ಶಾಲೆಗಳತ್ತ ಗಮನಹರಿಸಲಿಲ್ಲ. ಕಳೆದ ಎರಡು ವರ್ಷಗಳಿಂದ ಪಠ್ಯಪುಸ್ತಕ ಸರಬರಾಜಾಗುತ್ತಿದೆ ಎಂಬ ಸಮಾಧಾನ ಬಿಟ್ಟರೆ ಪ್ರತಿಯೊಂದಕ್ಕೂ ಕರ್ನಾಟಕ ಸರ್ಕಾರ ಆಂಧ್ರದಲ್ಲಿರುವ ಕನ್ನಡ ಶಾಲೆಗಳ ಕಡೆ ನಿರ್ಲಕ್ಷ್ಯ ತೋರುತ್ತಲೇ ಬಂದಿದೆ.

‘ಕರ್ನಾಟಕದಲ್ಲಿ ಕನ್ನಡ ಶಾಲೆಗಳಿಗೆ ನೀಡುವ ಸೌಕರ್ಯಗಳನ್ನು ಆಂಧ್ರದ ಕನ್ನಡ ಶಾಲೆಗಳಿಗೂ ಕಲ್ಪಿಸಿಕೊಡಿ. ಆಂಧ್ರದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಮೀಸಲಾತಿ ನೀಡಿ. ಉದ್ಯೋಗಕ್ಕೆ ಮೀಸಲಾತಿ ನೀಡಿ’ ಎಂಬುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಆಂಧ್ರಪ್ರದೇಶದ ಕನ್ನಡ ಪರ ಸಂಘಗಳು ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿವೆ. ಆದರೆ, ಈವರೆಗೆ ಬರೀ ಭರವಸೆಗಳು ಮಾತ್ರ ಆಂಧ್ರದ ಕನ್ನಡಿಗರಿಗೆ ಸಿಕ್ಕಿವೆ. ಇದು ಆಂಧ್ರದ ಕನ್ನಡಿಗರಿಗೆ ತೀವ್ರ ನಿರಾಸೆ ಮೂಡಿಸಿದ್ದು ಇಂಗ್ಲಿಷ್‌ ಮಾಧ್ಯಮಕ್ಕೆ ಬದಲಾಗಿ, ತೆಲುಗು ಒಂದು ಭಾಷೆಯಾಗಿ ಓದಲು ನಿರ್ಧರಿಸಿದ್ದಾರೆ.

ತುರ್ತಾಗಿ ಏನು ಮಾಡಬೇಕು ?

ಆಂಧ್ರಪ್ರದೇಶ ಸರ್ಕಾರ ಎಲ್ಲ 13 ಜಿಲ್ಲೆಗಳ ಸರ್ಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮವನ್ನಾಗಿಸುವ ನಿರ್ಧಾರದಿಂದ ಅನಂತಪುರ ಜಿಲ್ಲೆಯಲ್ಲಿರುವ 19 ಹಾಗೂ ಕರ್ನೂಲ್‌ ಜಿಲ್ಲೆಯಲ್ಲಿ 49 (11 ಪ್ರೌಢಶಾಲೆಗಳು ಸೇರಿ) ಒಟ್ಟು 68 ಕನ್ನಡ ಮಾಧ್ಯಮಗಳ ಶಾಲೆಗಳಿದ್ದು ಈ ಶಾಲೆಗಳಲ್ಲಿ ಕನ್ನಡ ಒಂದು ಭಾಷೆಯಾಗಿ ನೀಡುವಂತೆ ಆಂಧ್ರ ಸರ್ಕಾರದ ಮೇಲೆ ಕರ್ನಾಟಕ ಸರ್ಕಾರ ಒತ್ತಡ ತರಬೇಕು. ಅಲ್ಲಿನ ಕನ್ನಡದ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡುವ ವಿಶ್ವಾಸವನ್ನು ತುಂಬಬೇಕು.

ಕರ್ನಾಟಕ ಸರ್ಕಾರ ಕನ್ನಡ ಶಾಲೆಗಳಿಗೆ ನೀಡುವ ಸೌಲಭ್ಯಗಳನ್ನು ಆಂಧ್ರದ ಕನ್ನಡ ಶಾಲೆಗಳಿಗೆ ನೀಡುವ ಬದಲಿಗೆ ತಾತ್ಸಾರ ತೋರುತ್ತಲೇ ಬಂದಿದೆ. ಇದರಿಂದ ಮಾತೃಭಾಷಾ ಪ್ರೇಮವಿದ್ದರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಂಗ್ಲೀಷ್‌ ಮಾಧ್ಯಮದ ತೆಲುಗು ಒಂದು ಭಾಷೆಯನ್ನಾಗಿ ತೆಗೆದುಕೊಳ್ಳಲು ಪೋಷಕರು ನಿರ್ಧರಿಸಿದ್ದಾರೆ ಎಂದು ಪೋಷಕರಾದ ಶಾಂತಕುಮಾರ್‌, ರವಿರಾಜ್‌, ಮೋಹನ್‌ ಅವರು ಹೇಳಿದ್ದಾರೆ.

ಕನ್ನಡ ಶಾಲೆಗಳು ಇಂಗ್ಲಿಷ್‌ ಮಾಧ್ಯಮವಾಗಿ ಬದಲಾಗುತ್ತಿರುವುದರಿಂದ ಕನ್ನಡ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆ ಬರುವ ಆತಂಕವಿದೆ. ಇಷ್ಟಾಗಿಯೂ ಕನ್ನಡ ಒಂದು ಭಾಷೆಯಾಗಿ ಕಲಿಕೆಗೆ ಆಂಧ್ರ ಸರ್ಕಾರ ಅವಕಾಶ ನೀಡಲಿದೆ ಎಂಬ ಆಸೆ ಜೀವಂತವಾಗಿದೆ ಎಂದು ಆಂಧ್ರಪ್ರದೇಶದ ಅನಂತಪುರಂ ಜಿಲ್ಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಗಿರಿಜಾಪತಿ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios