Asianet Suvarna News Asianet Suvarna News

ಚಿಕ್ಕಮಗಳೂರು: ಅಪಘಾತ ಮಾಡಿ ಎಸ್ಕೇಪ್‌, ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿ ಗದ್ಗದಿತರಾದ ನಟ ಚಂದ್ರಪ್ರಭ

ಸೆಪ್ಟೆಂಬರ್ 4 ರಂದು ರಾತ್ರಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಚಂದ್ರಪ್ರಭ ಅವರು ಪ್ರಯಾಣಿಸುತ್ತಿದ್ದ ಕಾರು ಸ್ಕೂಟರ್‌ವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸ್ಕೂಟರ್ ಸವಾರ ಮಾಲತೇಶ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. 

Kannada Comedy Actor Chandraprabha Apologized for his Mistake in Accident Case grg
Author
First Published Sep 8, 2023, 8:47 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಸೆ.08):  ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯ ಕಾಮಿಡಿ ಶೋನ ಹಾಸ್ಯ ನಟ ಚಂದ್ರಪ್ರಭ ಇಂದು ಚಿಕ್ಕಮಗಳೂರು ಸಂಚಾರಿ ಪೊಲೀಸರ ಮುಂದೆ ಹಾಜರಾಗಿ ತಮ್ಮ ತಪ್ಪಿಗೆ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. 

ಸೆಪ್ಟೆಂಬರ್ 4 ರಂದು ರಾತ್ರಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಚಂದ್ರಪ್ರಭ ಅವರು ಪ್ರಯಾಣಿಸುತ್ತಿದ್ದ ಕಾರು ಸ್ಕೂಟರ್‌ವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸ್ಕೂಟರ್ ಸವಾರ ಮಾಲತೇಶ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮರುದಿನ ಹೇಳಿಕೆ ನೀಡಿದ್ದ ಚಂದ್ರಪ್ರಭ ಸ್ಕೂಟರ್ ಸವಾರ ಮದ್ಯ ಸೇವಿಸಿದ್ದರು. ಅವರನ್ನು ನಾವೇ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದ್ದೆವು ಎಂದು ತಿಳಿಸಿದ್ದರು.

ಅಪಘಾತ ಮಾಡಿ ಎಸ್ಕೇಪ್: ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿದ್ದೇನೆ, ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ, ನಟ ಚಂದ್ರಪ್ರಭ

ಇಂದು ಚಂದ್ರಪ್ರಭ ಸಂಚಾರಿ ಪೊಲೀಸ್ ಠಾಣೆಗೆ ಹಾಜರು : 

ವಾಸ್ತವವಾಗಿ ಗಾಯಾಳು ಮಾಲತೇಶ್ ಮದ್ಯ ಸೇವಿಸಿರಲಿಲ್ಲ. ಹಾಗೂ ಅವರನ್ನು ಚಂದ್ರಪ್ರಭ ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಈ ಕಾರಣಕ್ಕೆ ಅವರ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದ್ದ ಕಾರಣ ಸಂಚಾರಿ ಪೊಲೀಸರು ಹಿಟ್‌ಅಂಡ್ ರನ್ ಪ್ರಕರಣ ದಾಖಲಿಸಿಕೊಂಡು ಚಂದ್ರಪ್ರಭಗೆ ನೋಟೀಸು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಚಂದ್ರಪ್ರಭ ಸಂಚಾರಿ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದರು. ಈ ವೇಳೆ ಅವರ ಕಾರನ್ನು ವಶಕ್ಕೆ ಪಡೆದ ಪೊಲೀಸರು ಷರತ್ತುಗಳನ್ನು ವಿಧಿಸಿ ಠಾಣಾ ಜಾಮೀನು ನೀಡಿದರು.

ಕಾರಿನಲ್ಲಿ ಬಂದು ಗುದ್ದೋಡಿದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ: ಮಾನವೀಯತೆಗೂ ಕಾರು ನಿಲ್ಲಿಸದೇ ಪರಾರಿ

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಚಂದ್ರಪ್ರಭ, ನಾನು ಶೂಟಿಂಗ್ ಮುಗಿಸಿಕೊಂಡು ಹೋಗುವಾಗ ಈ ಘಟನೆ ನಡೆದಿತ್ತು. ಯಾರೋ ಹೇಳಿದ್ದನ್ನು ಕೇಳಿ ಅಪಘಾತಕ್ಕಿಡಾದ ವ್ಯಕ್ತಿ ಮದ್ಯ ಸೇವಿಸಿದ್ದರು ಎಂದು ಹೇಳಿದ್ದೆ. ಅವರು ಮದ್ಯ ಸೇವಿಸಿರಲಿಲ್ಲ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದರು. ಘಟನೆ ನಡೆದಾಗ ರಾತ್ರಿ 12 ಗಂಟೆ ಆಗಿತ್ತು. ಈ ಕಾರಣಕ್ಕೆ ನನಗೂ ಭಯವಾಗಿತ್ತು. ಕಾರ್ಯಕ್ರಮವೊಂದಕ್ಕೆ ಹೋಗಬೇಕಿದ್ದರಿಂದ ನಿಲ್ಲದೆ ತೆರಳಿದ್ದೆ. ಇದಕ್ಕೆ ಕ್ಷಮೆ ಇರಲಿ. ಕಾನೂನಿಗೆ ನಾನು ಬದ್ಧನಾಗಿದ್ದೇನೆ. ಅಪಘಾತಕ್ಕೀಡಾಗಿರುವ ವ್ಯಕ್ತಿಯ ಅಣ್ಣ, ತಮ್ಮಂದಿರು, ತಾಯಿ, ಸಂಬಂಧಿಕರನ್ನು ಹಾಗೂ ವೈದ್ಯರನ್ನು ಭೇಟಿ ಮಾಡುತ್ತೇನೆ ಎಂದರು.

ಗದ್ಗದಿತರಾದ ಚಂದ್ರಪ್ರಭ

ಅವರೂ ದಲಿತ ಸಮುದಾಯದವರು, ನಾನೂ ಅದೇ ಸಮುದಾಯದಿಂದ ಬಂದವನು, ನಮ್ಮ ತಂದೆಯವರು ತೀರಿಕೊಂಡು 11 ತಿಂಗಳಾಗಿದೆ. ನನ್ನ ತಾಯಿ ಕೂಲಿ ಮಾಡಿ ನನ್ನನ್ನು ಸಾಕಿದ್ದಾರೆ. ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ನನ್ನ ಸಾಮರ್ಥ್ಯಕ್ಕನುಸಾರ ಅವರಿಗೆ ಆರ್ಥಿಕ ಸಹಾಯವನ್ನೂ ಮಾಡುತ್ತೇನೆ ಎಂದು ಚಂದ್ರಪ್ರಭ ಕಣ್ಣಾಲಿಗಳನ್ನು ತುಂಬಿಕೊಂಡು ಗದ್ಗದಿತರಾದರು.

Follow Us:
Download App:
  • android
  • ios